ಮಹೇಶ್ ಗೌಡ ಅವರು ನಿರ್ಮಾಣ ಮಾಡಿ, ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ನಾಳೆ ಅಂದರೆ, ಅಕ್ಟೋಬರ್ ೨೪ರಂದು ಅದ್ದೂರಿಯಾಗಿ ತೆರೆಗಾಣುತ್ತಿದೆ. ಈಗಾಗಲೇ ಇದೊಂದು ಅತ್ಯಪರೂಪದ ಕಥಾನಕ ಹೊಂದಿರುವ ಸಿನಿಮಾ ಎಂಬ ವಿಚಾರ ಪ್ರೇಕ್ಷಕರಿಗೆ ಮನದಟ್ಟಾಗಿ ಬಿಟ್ಟಿದೆ. ವರ್ಷಗಟ್ಟಲೆ ಶ್ರಮ ವಹಿಸಿ ಈ ಸಿನಿಮಾದ ಕಥೆಯನ್ನು ಸಿದ್ಧಪಡಿಸಿರುವ ಮಹೇಶ್ ಗೌಡ, ಆಯಾ ಪಾತ್ರಗಳಿಗೆ ಒಗ್ಗುವಂಥಾ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಒಂದು ಹಂತದ ವರೆಗೂ ನಾಯಕಿ ಪಾತ್ರಕ್ಕೆ ಮಾತ್ರ ಯಾರೂ ಹೊಂದಾಣಿಕೆಯಾಗಿರಲಿಲ್ಲ. ಕಡೆಗೂ ನಾಯಕಿ ಪಾತ್ರಕ್ಕಾಗಿ ಆಡಿಷನ್ ಕರೆದಾಗ, ಅದರಲ್ಲಿ ಪಾಲ್ಗೊಂಡು ನಾಯಕಿಯಾಗೋ ಅವಕಾಶ ಗಿಟ್ಟಿಸಿಕೊಂಡವರು ಕರಾವಳಿ ಮೂಲದ ಹುಡುಗಿ ಕಾಜಲ್ ಕುಂದರ್!

ಇದು ಅತ್ಯಂತ ಸೂಕ್ಷ್ಮವಾದ ಕಥೆಯಹೊಂದನ್ನು ಪಕ್ಕಾ ಮನೋರಂಜನಾತ್ಮಕ ಅಂಶಗಳೊಂದಿಗೆ, ಕಮರ್ಶಿಯಲ್ ಪಥದಲ್ಲಿ ಅಣಿಗೊಂಡಿರುವ ಸಿನಿಮಾ. ಇದರ ನಾಯಕಿಯ ಪಾತ್ರವಂತೂ ಸೂಕ್ಷ್ಮವಾದ ಒಳತೋಟಿಗಳನ್ನು ಹೊಂದಿರುವಂಥಾದ್ದು. ಆ ಪಾತ್ರವನ್ನು ನಿರ್ವಹಿಸೋದು ಸಲೀಸಿನ ಸಂಗತಿಯಾಗಿರಲಿಲ್ಲ. ಭಾವನೆಗಳ ಮೂಲಕವೇ ಮಾತುಗಳನ್ನು ಮೀರಿ ಸಂವಹಿಸಬಲ್ಲ ಛಾತಿ ಅದನ್ನು ನಿರ್ವಹಿಸುವ ಕಲಾವಿದೆಗೆ ಅಗತ್ಯವಾಗಿ ಬೇಕಿತ್ತು. ಈ ಉದ್ದೇಶದಿಂದ ಆಡಿಷನ್ ಕರೆದ ವಿಚಾರ ತಿಳಿದಾಕ್ಷಣವೇ ಕಾಜಲ್ ಕುಂದರ್ ಅದರಲ್ಲಿ ಭಾಗಿಯಾಗಿದ್ದರು. ಅದಾಗಲೇ ಪೆಪೆಯಂಥಾ ಸಿನಿಮಾದಲ್ಲಿ ನಟಿಸಿದ್ದ ಅವರ ಪಾಲಿಗೆ ಆ ಸಿನಿಮಾಕ್ಕಿಂತಲೂ ಭಿನ್ನವಾದ ಪಾತ್ರ ಸಿಗಬೇಕೆಂಬ ಹಂಬಲವಿತ್ತು. ಬಿಳಿಚುಕ್ಕಿ ಹಳ್ಳಿಹಕ್ಕಿಯ ಪಾತ್ರ ಅದಕ್ಕೆ ತಕ್ಕುದಾಗಿರುವ ವಿಚಾರ ಮೊದಲ ಹಂತದಲ್ಲಿಯೇ ಕಾಜಲ್‌ಗೆ ಮನವರಿಕೆಯಾಗಿತ್ತು.

ಅದಾಗಲೇ ಪೆಪೆ ಎಂಬ ಸಿನಿಮಾದಲ್ಲಿ ನಟಿಸಿದ್ದ ಕಾಜಲ್‌ಗೆ ಅಲ್ಲಿ ಬೋಲ್ಡ್ ಆದ ಪಾತ್ರ ಸಿಕ್ಕಿತ್ತು. ಆದರೆ, ಬಿಳಿಚುಕ್ಕಿ ಹಳ್ಳಿಹಕ್ಕಿಯಲ್ಲಿ ಎದುರಾದದ್ದು ಅದಕ್ಕೆ ತದ್ವಿರುದ್ಧ ಗುಣ ಸ್ವಭಾವ ಹೊಂದಿರುವ ಪಾತ್ರ. ಇದಕ್ಕಾಗಿ ಆಡಿಷನ್ ಕೊಟ್ಟಿದ್ದ ಕಾಜಲ್‌ಗೆ ಎರಡ್ಮೂರು ದಿನ ಕಳೆದ ಮೇಲೆ ನಿರ್ದೇಶಕ ಮಹೇಶ್ ಗೌಡರು ಕರೆ ಮಾಡಿ ಆಯ್ಕೆಯಾಗಿರುವ ವಿಚಾಶರ ತಿಳಿಸಿದ್ದರಂತೆ. ಆ ನಂತರ ನಿರ್ದೇಶಕರು ಒಟ್ಟಾರೆ ಸಿನಿಮಾ ಕಥೆ ಮತ್ತು ನಾಯಕಿ ಪಾತ್ರದ ಬಗ್ಗೆ ವಿವರಿಸಿದಾಗಲೇ ಇದೊಂದು ವಿಶೇಷ ಕಾನ್ಸೆಪ್ಟಿನ ಕಥನ ಎಂಬ ವಿಚಾರ ಕಾಜಲ್‌ಗೆ ಅರಿವಾಗಿತ್ತಂತೆ. ಆ ಬಳಿಕ ತಿಂಗಳುಗಟ್ಟಲೆ ಕಾಜಲ್, ಕವಿತಾ ಎಂಬ ಪಾತ್ರವನ್ನು ಒಳಗಿಳಿಸಿಕೊಳ್ಳಲು ಕಸರತ್ತು ನಡೆಸಿದ್ದರು.

ಈ ಚಿತ್ರದ ನಾಯಕಿ ಪಾತ್ರಕ್ಕೆ ಡೈಲಾಗುಗಳು ಕಡಿಮೆ. ಭಾವನೆಗಳ ಮೂಲಕವೇ ಎಲ್ಲ ಮಾತುಗಳನ್ನೂ ಹೊಮ್ಮಿಸುವುದು ಕಾಜಲ್ ಪಾಲಿಗೆ ಸವಾಲಾಗಿತ್ತು. ನಿರ್ದೇಶಕರು, ಹಿರಿಯ ಕಲಾವಿದರು ಮತ್ತು ತನ್ನದೇ ರಂಗಭೂಮಿಯ ಅನುಭವಗಳಿಂದ ಈ ಪಾತ್ರಕ್ಕೆ ತೃಪ್ತಿದಾಯಕವಾಗಿ ಜೀವ ತುಂಬಿದ ಭರವಸೆ ಕಾಜಲ್‌ರದ್ದು. ಮೂಲರ್ತ ಮಂಗಳೂರಿನ ಹುಡುಗಿಯಾದರೂ ಕಾಜಲ್ ಹುಟ್ಟಿ ಬೆಳೆದದ್ದೆಲ್ಲವೂ ಮುಂಬೈನಲ್ಲಿಯೇ. ಅಲ್ಲಿಯೇ ಪದವಿ ಪೂರೈಸಿಕೊಂಡು, ತನ್ನಿಷ್ಟದ ನಟನೆಯತ್ತ ವಾಲಿಕೊಂಡ ಕಾಜಲ್, ಒಂದಷ್ಟು ಮರಾಠಿ ಮತ್ತು ಹಿಂದಿ ಸೀರಿಯಲ್ಲುಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇದರ ನಡುವಲ್ಲಿಯೇ ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡು ನಟನೆಯಲ್ಲಿ ಪಳಗಿಕೊಂಡಿದ್ದಾರೆ.

ಹೀಗೆ ಬೇರೆ ಭಾಷೆಗಳಲ್ಲಿ ಬೆಳಕು ಕಾಣುತ್ತಲೇ ಬೇರುಗಳ ಸೆಳೆತಕ್ಕೀಡಾದ ಕಾಜಲ್, ಕರುನಾಡಿನಲ್ಲಿಯೇ ನಟಿಯಾಗಿ ನೆಲೆ ಕಂಡುಕೊಳ್ಳಲು ತೀರ್ಮಾನಿಸಿದ್ದರು. ಕಡೆಗೂ ಅವರಿಗೆ ಪೆಪೆ ಎಂಬ ಸಿನಿಮಾದಲ್ಲಿ ನಾಯಕಿಯಾಗೋ ಅವಕಾಶ ಸಿಕ್ಕಿತ್ತು. ಹರಹರ ಮಹಾದೇವ ಧಾರಾವಾಹಿಯಲ್ಲಿಯೂ ಆಕೆ ನಟಿಸಿದ್ದರು. ಈಗ್ಗೆ ಒಂದೂವರೆ ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿರುವ ಕಾಜಲ್ ಪಾಲಿಗೆ ಬಿಳಿಚುಕ್ಕಿ ಹಳ್ಳಿಹಕ್ಕಿಯ ಪಾತ್ರ ವರದಂತೆ ಸಿಕ್ಕಿದೆ. ಪಾತ್ರದ ಮೂಲಕವೇ ತನ್ನ ವೃತ್ತಿ ಬದುಕು ಮತ್ತಷ್ಟು ಪ್ರಜ್ವಲಿಸುವ ಗಾಢ ಭರವಸೆ ಅವರಿಗಿದೆ. ಇಂಥಾದ್ದೇ ಭಿನ್ನ ಪಾತ್ರಗಳ ಮೂಲಕ ಗುರುತಾಗುವ ಬಯಕೆ ಹೊಂದಿರುವ ಕಾಜಲ್ ಮುಂದಿನ ದಿನಗಳಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿಯೇ ನೆಲೆಗಾಣುವ ಆಕಾಂಕ್ಷೆಯಿಟ್ಟುಕೊಂಡಿದ್ದಾರೆ. ಅದು ಬಿಳಿಚುಕ್ಕಿ ಹಳ್ಳಿಹಕ್ಕಿಯ ಮೂಲಕವೇ ಸಾಕಾರಗೊಳ್ಳುವ ಲಕ್ಷಣಗಳು ಢಾಳಾಗಿ ಗೋಚರಿಸುತ್ತಿವೆ!

