ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ನಾಯಕಿಯಾಗಿದ್ದ ರುಕ್ಮಿಣಿ ವಂಸಂತ್ ವೃತ್ತಿ ಬದುಕಿಗೀಗ ಅಕ್ಷರಶಃ ಸುಗ್ಗಿ ಸಂಭ್ರಮ ಎದುರುಗೊಂಡಿದೆ. ಸಾಮಾನ್ಯವಾಗಿ ಒಂದು ಗೆಲುವಿನ ನಂತರದಲ್ಲಿ ಅದನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಹೋಗೋದು ನಟ ನಟಿಯರ ಪಾಲಿಗೆ ನಿಜವಾದ ಸವಾಲು. ಈಕೆ ಸಪ್ತಸಾಗರದಾಚೆಯ ನಂತರ ಸೀದಾ ತಮಿಳಿಗೆ ಹಾರಿ ವಿಜಯ್ ಸೇತುಪತಿ ಚಿತ್ರದಲ್ಲಿ ನಾಯಕಿಯಾಗಿದ್ದರು. ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ. ಆ ಹಿನ್ನಡೆಯ ಹಿಂಚುಮುಂಚಲ್ಲಿಯೇ ಅಚ್ಚರಿದಾಯಕವಾಗಿ ಈ ಹುಡುಗಿಕಗೆ ದೊಡ್ಡ ದೊಡ್ಡ ಅವಕಾಶಗಳು ಒಲಿದು ಬರುತ್ತಿವೆ. ಇದೀಗ ರುಕ್ಮಿಣಿಗೆ ರಾಕಿ ಭಾಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನಲ್ಲಿ ನಟಿಸೋ ಅವಕಾಶ ಕೂಡಿ ಬಂದಿದೆ.
ರೆಟ್ರೋ ಶೈಲಿಯ ಟಾಕ್ಸಿಕ್ ಚಿತ್ರ ಅತ್ಯಂತ ಅದ್ದೂರಿಯಾಗಿ ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ ಪ್ಯಾನಿಂಡಿಯಾ ಮಟ್ಟದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದರೆ, ಹುಮಾ ಖುರೇಶಿ ಕೂಡಾ ಪ್ರಧಾನ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಮತ್ತೊಂದು ಮಹತ್ವದ ಪಾತ್ರಕ್ಕೆ ನಿರ್ದೇಶಕಿ ಗೀತು ಮೋಹನ್ ದಾಸ್ ಹುಡುಕಾಟ ನಟೆಸುತ್ತಿದ್ದರು. ಕಡಸೆಗೂ ರಾಕಿ ಭಾಯ್ ಕನ್ನಡದ ಹುಡುಗಿ ರುಕ್ಮಿಣಿ ವಸಂತ್‌ರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ರುಕ್ಮಿಣಿ ಯಾವ ಥರದ ಪಾತ್ರದಲ್ಲಿ ನಟಿಸಲಿದ್ದಾರೆಂಬುದೂ ಸೇರಿದಂತೆ ಎಲ್ಲ ಪ್ರಶ್ನೆಗಳಿಗೂ ಇಷ್ಟರಲ್ಲಿಯೇ ಉತ್ತರ ಸಿಗಲಿದೆ.
ರುಕ್ಮಿಣಿ ವಸಂತ್ ಪಾಲಿಗೆ ಟಾಕ್ಸಿಕ್ ಮೂಲಕ ಎರಡನೇ ಪ್ಯಾನಿಂಡಿಯಾ ಚಿತ್ರದಲ್ಲಿ ಅವಕಾಶ ಸಿಕ್ಕಂತಾಗಿದೆ. ಈಗಾಗಲೇ ಕಾಂತಾರ ಅಧ್ಯಾಯ ಒಂದರಲ್ಲಿಯೂ ರುಕ್ಮಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಾಂತಾರಾ ಅಂತೂ ಪ್ಯಾನಿಂಡಿಯಾ ಮಟ್ಟದಲ್ಲಿ ಹವಾ ಸೃಷ್ಟಿ ಮಾಡೋದು ಪಕ್ಕಾ. ಅದರ ಬೆನ್ನಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಕೂಡಾ ದೊಡ್ಡ ಮಟ್ಟದಲ್ಲಿಯೇ ಗೆಲ್ಲುವ ಲಕ್ಷಣಗಳಿದ್ದಾವೆ. ಈ ಎಲ್ಲವನ್ನೂ ನೋಡಿದರೆ ರುಕ್ಮಿಣಿ ವಸಂತ್ ನಿಸ್ಸಂದೇಹವಾಗಿಯೂ ಪ್ಯಾನಿಂಡಿಯಾ ಮಟ್ಟದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಹಾಗಂತ ಸಿನಿಮಾ ಪ್ರೇಮಿಗಳೇ ಅಭಿಪ್ರಾಯ ಪಡುತ್ತಿದ್ದಾರೆ.