ಕನ್ನಡ ಚಿತ್ರರಂಗದ ಮಟ್ಟಿಗೆ ಸೂಪರ್ ಸ್ಟಾರ್ ಆಗಿ ಮೆರೆದವನು ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಹುಶಃ ಇದುವರೆಗಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿರೋ ದರ್ಶನ್, ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವಾತ. ತೀರಾ ಕಡುಗಷ್ಟದಿಂದ ಮೇಲೆದ್ದು ನಿಂತಿದ್ದ ಈತ ಒಂದು ಹಂತದಲ್ಲಿ ಸ್ಫೂರ್ತಿಯಾಗಿ ಕಾಣಿಸುತ್ತಿದ್ದದ್ದು ಸುಳ್ಳಲ್ಲ. ನಾಲಗೆಯ ಮೇಲೆ, ವರ್ತನೆಗಳ ಮೇಲೆ ನಿಗಾ ವಹಿಸಿದ್ದರೆ ಸರ್ವರಿಗೂ ಸಾರ್ವಕಾಲಿಕ ಸ್ಫೂರ್ತಿಯಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ, ಗೆಲುವು ಸಿಗುತ್ತಲೇ ಅಮರಿಕೊಳ್ಳುತ್ತಾ ಸಾಗಿದ ದುರಹಂಕಾರ, ಸಿಕ್ಕ ಸಿಕ್ಕಲ್ಲಿ ಮೇಯುವ ಬುದ್ಧಿ, ಸಾರ್ವಜನಿಕವಾಗಿಯೇ ಅಬ್ಬರಿಸಿ ಮೆರೆದಾಡೋ ದುಷ್ಟತನಗಳೆಲ್ಲವೂ ದರ್ಶನ್ ತಲುಪಿಕೊಂಡಿರುವ ಪ್ರಸ್ತುತ ಸ್ಥಿತಿಗೆ ಪ್ರಧಾನ ಕಾರಣವಾಗಿ ಗೋಚರಿಸುತ್ತವೆ.
ಸದ್ಯದ ಮಟ್ಟಿಗೆ ಹೇಳೋದಾದರೆ, ದರ್ಶನ್ ಅಕ್ಷರಶಃ ಅದುರಿ ಹೋಗಿದ್ದಾನೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಮೊದಲ ಬಾರಿ ಜೈಲು ಪ್ರವೇಶಿಸಿದ ಘಳಿಗೆಗೂ, ಈವತ್ತಿನ ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸಗಳಿದ್ದಾವೆ. ಕಾಸು ಚೆಲ್ಲುವ ಮೂಲಕ ಜೈಲೊಳಗೆ ವೈಭೋಗದಿಂದ ಬದುಕಿದ್ದ ದರ್ಶನ್ ಪಟಾಲಮ್ಮಿಗೆ ಹೆಜ್ಜೆ ಹೆಜ್ಜೆಗೂ ಆಘಾತಗಳು ಎದುರಾಗುತ್ತಿವೆ. ಇದೆಲ್ಲದರ ನಡುವೆಯೇ ಈ ಪ್ರಕರಣದ ಗಂಭೀರ ತಿರುವುಗಳ ಬಗ್ಗೆ, ಒಟ್ಟಾರೆ ಕೇಸಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಕಾನೂನು ತಜ್ಞರುಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್ಗೆ ಜೀವಾವಧಿ ಶಿಕ್ಷೆ ಖಚಿತ. ಕೊಂಚ ಆಚೀಚೆ ಆದರೆ ಮರಣದಂಡನೆ ವಿಧಿಸಿದರೂ ಅಚ್ಚರಿಯೇನಿಲ್ಲ ಎಂಬುದು ಅವರೆಲ್ಲರ ಮಾತಿನ ಸಾರ.
ಯಾವ ಶಿಕ್ಷೆಯಾದರೂ ಕೂಡಾ ದರ್ಶನ್ ಬದುಕು ಹಡಾಲೆದ್ದು ಹೋಗುತ್ತೆ. ಈ ಕಾರಣದಿಂದಲೇ ಕಾನೂನಾತ್ಮಕವಾಗಿಯೇ ದರ್ಶನ್ ಪವಿತ್ರಾ ಗೌಡಳ ಸಮೇತ ನುಣುಚಿಕೊಂಡು, ಅಭಿಮಾನಕ್ಕೆ ಕಟ್ಟು ಬಿದ್ದು ಕೊಲೆ ಕೇಸಿನಲ್ಲಿ ಭಾಗಿಯಾದವರಿಗೆ ಖೆಡ್ಡ ತೋಡುವ ಪ್ರಯತ್ನಗಳು ನಡೆಯುತ್ತಿವೆಯಾ? ಹೀಗೊಂದು ಗುಮಾನಿ ದಟ್ಟವಾಗಿಯೇ ಹಬ್ಬಿಕೊಳ್ಳುತ್ತಿದೆ. ಇತ್ತ ಪವಿತ್ರಾಳ ಗೆಳತಿಯೋರ್ವಳು ಆಕೆ ತಪ್ಪೇ ಮಾಡಿಲ್ಲ ಎಂಬರ್ಥದಲ್ಲಿ ಪರ ವಹಿಸಿಕೊಂಡು ಮಾತಾಡುತ್ತಿದ್ದಾಳೆ. ಖುದ್ದು ಸುಪ್ರೀಂ ಕೋರ್ಟು ಬೇಲ್ ಕ್ಯಾನ್ಸಲ್ ಮಾಡೋ ಮುನ್ನ ಒಂದಿಡೀ ಅವಘಡಕ್ಕೆ ಪವಿತ್ರಾಳೇ ಮೂಲಕ ಕಾರಣ ಅಂತ ಛಾಟಿ ಬೀಸಿತ್ತು. ಹಾಗಿದ್ದರೂ ಈ ಹೆಂಗಸು ತನ್ನ ಗೆಳತಿ ಪವಿತ್ರ ಅಮಾಉಯಕಿ ಎಂಬರ್ಥದಲ್ಲಿ ಮಾತಾಡಿದ್ದಾಳೆ. ಅಂತೂ ಈ ಕೇಸಿನಲ್ಲಿ ದರ್ಶನ ಸೆಳೆತಕ್ಕೆ ಸಿಕ್ಕು ಭಾಗಿಯಾದವರನ್ನು ತಗುಲಿಸಿ ಪಾರಾಗುವ ಪ್ರಯತ್ನವೊಂದು ದಾಸನ ಕಡೆಯಿಂದ ನಡೆಯುತ್ತಿದೆಯಾ? ಇದಕ್ಕೆ ನಿಖರ ಉತ್ತರ ಸದ್ಯದಲ್ಲಿಯೇ ಸಿಗಲಿದೆ!