coolie movie review: ನಿರೀಕ್ಷೆಗಳನ್ನು ನಿಕಾಲಿಯಾಗಿಸಿತು ರಜನಿಯ ಕೂಲಿ!

coolie movie review: ನಿರೀಕ್ಷೆಗಳನ್ನು ನಿಕಾಲಿಯಾಗಿಸಿತು ರಜನಿಯ ಕೂಲಿ!

ಲೈವಾ ರಜನೀಕಾಂತ್ ಅಭಿನಯದ ಕೂಲಿ ಚಿತ್ರ ಬಿಡುಗಡೆಗೊಂಡಿದೆ. ಜೈಲರ್ ಮೂಲಕ ಮತ್ತೆ ಮೈ ಕೊಡವಿಕೊಂಡಿದ್ದ ರಜನೀಕಾಂತ್ ಕೂಲಿ ಮೂಲಕ ಮತ್ತೊಂದು ದಾಖಲೆ ಬರೆಯುತ್ತಾರೆಂಬಂತೆ ಬಿಲ್ಡಪ್ಪುಗಳು ಹರಿದಾಡಿದ್ದವು. ಈ ತಮಿಳು ಮಂದಿ ಎಷ್ಟು ಸಿನಿಮಾರಾಧಕರೋ, ತಮ್ಮಿಷ್ಟದ ನಟನ ಸಿನಿಮಾ ಬಗ್ಗೆ ಊರಗಲ ಹೈಪು ಸೃಷ್ಟಿಸೋದರಲ್ಲಿಯೂ ಅಷ್ಟೇ ನಿಸ್ಸೀಮರು. ಸಿನಿಮಾ ನಿರ್ಮಾತೃಗಳೂ ಕೂಡಾ ಮುಂಗಡ ಟಿಕೆಟ್ ಬುಕ್ಕಿಂಗ್ ಮೂಲಕ ಒಂದಷ್ಟು ಬಚಾವಾಗಲೋಸುಗ ಅಂಥ ಭ್ರಾಮಕ ಹೈಪುಗಳನ್ನೇ ನೆಚ್ಚಿಕೊಳ್ಳುತ್ತಾರೆ. ಕೂಲಿ ಬರಖತ್ತಾಗೋದು ಕಷ್ಟ ಎಂಬರಿತ ಕೂಲಿ ತಂಡ ಕೂಡಾ ಅಂಥಾದ್ದೊಂದು ಬುದ್ಧಿವಂತಿಕೆಯ ನಡೆ ಅನುಸರಿಸಿತ್ತಾ? ಈ ಪ್ರಶ್ನೆಗೆ ಸಿನಿಮಾ ನೋಡಿದ ಮೇಲೆ ಹೌದೆಂಬ ಉತ್ತರವೇ ಗಟ್ಟಿಯಾಗುತ್ತೆ. ಭಯಾನಕ ಪ್ರಚಾರ ಪಡೆದುಕೊಂಡು ತೆರೆಗಂಡಿದ್ದ ಕೂಲಿ ತೀರಾ ಮಾಮೂಲಿ ಎಂಬ ವಿಮರ್ಶೆಗಳೇ ಅಷ್ಟ ದಿಕ್ಕುಗಳಲ್ಲಿಯೂ ಇಟ್ಟಾಡಲಾರಂಭಿಸಿದೆ.

ವಿಕ್ರಮ್ ಥರದ ಸಿನಿಮಾ ಮೂಲಕ ಕಮಲ್ ಹಾಸನ್‌ರಂಥಾ ನಟರನ್ನಿಟ್ಟುಕೊಂಡು ಮ್ಯಾಜಿಕ್ಕು ಮಾಡಿದ್ದಾತ ಲೋಕೇಶ್ ಕನಗರಾಜ್. ಅಂಥಾ ಯುವ ನಿರ್ದೇಶಕನ ಸಾರಥ್ಯದಲ್ಲಿ ರಜನಿ ಗೆಲುವಿನ ಪರ್ವ ಮುಂದುವರೆಯುತ್ತದೆಂದೇ ಬಹುತೇಕರು ಭಾವಿಸಿದ್ದರು. ಯಾವಾಗ ಮೆಲ್ಲಗೆ ಕ್ರೇಜ್ ಸೃಷ್ಟಿಯಾಗ ತೊಡಗಿತೋ, ಅದನ್ನು ಚಿತ್ರತಂಡ ಮತ್ತಷ್ಟು ಮಿರುಗುವಂತೆ ಮಾಡಿ ಬಿಟ್ಟಿತ್ತು. ಆದರೆ, ರಜನೀಕಾಂತ್ ಸಿನಿಮಾವೆಂಬ ಆಕರ್ಷಣೆಯ ಹೊರತಾಗಿ ಮತ್ತೆಲ್ಲವೂ ಮಾಮೂಲಿ ಎಂಬಂಥಾ ರೀತಿಯಲ್ಲಿ ಕೂಲಿ ಪ್ರೇಕ್ಷಕರನ್ನು ಎದುರುಗೊಂಡಿದೆ. ಇಲ್ಲಿ ಕಥೆ ಇದೆ; ಆದರದು ಕಾಡೋದಿಲ್ಲ. ಅದ್ದೂರಿ ದೃಶ್ಯಾವಳಿಗಳು, ತಲೈವಾಗೆ ಕೊಟ್ಟಿರೋ ಬಿಲ್ಡಪ್ಪುಗಳು ಪ್ರೇಕ್ಷಕರ ನಿರಾಸೆಯನ್ನು ತೊಡೆದು ಹಾಕುವಷ್ಟು ಶಕ್ತವಾಗಿಲ್ಲ.

ಒಂದೊಂದು ಹಂತದಲ್ಲಿ ಇದು ನಿಜಕ್ಕೂ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ಚಿತ್ರವಾ? ಅಂತೊಂದು ಸಂದೇಹ ಪ್ರೇಕ್ಷಕರನ್ನು ಕಾಡಲಾರಂಭಿಸುತ್ತೆ. ಯಾವ ಮುಲಾಜುಗಳಿಗೆ ಕಟ್ಟು ಬಿದ್ದು ಲೋಕೇಶ್ ಇಂಥಾದ್ದೊಂದು ಸರಕನ್ನು ಸಿದ್ಧಪಡಿಕಸಿದ್ದಾರೆಂಬುದೇ ಪ್ರಶ್ನೆಯಾಗುಳಿಯುತ್ತೆ. ಇಲ್ಲಿ ಬೇರೆ ಬೇರೆ ಸಿನಿಮಾ ರಂಗಗಳ ಸ್ಟಾರ್ ನಟರಿದ್ದಾರೆ. ಅವರನ್ನೆಲ್ಲ ಒಂದು ಮಟ್ಟಿಗೆ ಚೆಂದಗೆ ಬಳಸಿಕೊಳ್ಳಲಾಗಿದೆ. ಮಹಾ ತಿರುವು ಹೊಂದಿರುವ ಪಾತ್ರವನ್ನು ರಚಿತ ರಾಮ್ ಕೂಡಾ ಪ್ರೇಷರ ಮನಗೆಲ್ಲುವಂತೆ ನಿರ್ವಹಿಸಿದ್ದಾರೆ. ಆಕೆಯ ಅಭಿನಯ ಚಾತುರ್ಯವಿಲ್ಲಿ ಎದ್ದು ಕಾಣಿಸುತ್ತೆ. ಉಪ್ಪಿ ಪಾತ್ರ ಕೂಡಾ ಚೆನ್ನಾಗಿದೆ. ಆದರೆ, ಅದು ಜೈಲರ್‌ನಲ್ಲಿ ಶಿವರಾಜ್ ಕುಮಾರ್ ನಿರ್ವಹಿಸಿದ್ದ ಪಾತ್ರದಷ್ಟು ಪರಿಣಾಮಕಾರಿಯಾಗಿಲ್ಲ.

ನಿಖರವಾಗಿ ಹೇಳಬೇಕೆಂದರೆ, ಒಂದಿಡೀ ಸಿನಿಮಾ ವಾಲಿದಾಗೆಲ್ಲ ಹಿಡಿದೆತ್ತಿ ನಿಂತಂತೆ ಕಾಣಿಸೋದು ಮಲೆಯಾಳಂ ನಟ ಸೋಬಿನ್. ಈತ ನಟನೆಯಲ್ಲಿ ದಯಾಳ್ ಎಂಬ ಪಾತ್ರವನ್ನು ಆವಾಹಿಸಿಕೊಂಡಿರೋ ರೀತಿಯೇ ಅದ್ಭುತ. ಇನ್ನುಳಿದಂತೆ ಸಂಗೀತ ನಿರ್ದೇಶಕ ಅನಿರುದ್ಧ್ ಕೂಡಾ ಈ ಸಿನಿಮಾವನ್ನು ಕುಸಿಯದಂತೆ ನೋಡಿಕೊಂಡ ಆಧಾರ ಸ್ತಂಭಗಳಲ್ಲೊಬ್ಬರಾಗಿ ಮುಖ್ಯರಾಗುತ್ತಾರೆ. ಆದರೆ, ಲೋಕೇಶ್ ಯಾಕಿಂಥಾ ಪೇಲವ ಸಿನಿಮಾ ಮಾಡಿದರೆಂಬ ಪ್ರಶ್ನೆ ಸಿನಿಮಾ ಮುಗಿದ ನಂತರವೂ ಕಾಡುತ್ತೆ. ಅಷ್ಟಕ್ಕೂ ಲೋಕೇಶ್ ಇಲ್ಲಿ ಪ್ರದರ್ಶಿಸಿರುವ ಪಟ್ಟುಗಳು ಪುರಾತನ ಕಾಲದವುಗಳು. ಊರ್ಯ ನಿಸಿದ್ದ ಅಯ್ಯನ್ ಸಿನಿಮಾದಲ್ಲಿ ದಶಕಗಳ ಹಿಂಎಯೇ ಅವುಗಳನ್ನು ಪರಿಣಾಮಕಾರಿಯಾಗಿ ತೋರಿಸಲಾಗಿತ್ತು. ಅಂಥಾ ಸವಕಲು ಸರಕನ್ನು ತೀರಾ ಮಾಮೂಲಿಕಯಾಗಿ ಕದೃಷವಾಗಿಸಿದ್ದಾರೆ.

ತಲೈವಾ ಸಿನಿಮಾಗಳಿಂದ ಮೇಲೆ ಕಾಸು ಹೂಡಿದವರಿಗೇನ ಲುಕ್ಸಾನಾಗೋದಿಲ್ಲ. ಒದಷ್ಟು ಲಾಭವಾಗೋದೂ ಖಚಿತ. ಆದರೆ, ಒಂದೊಳ್ಳೆ ಸಿನಿಮಾ ಮೂಲಕ ಅದನ್ನು ಬಳಸಿಕೊಳ್ಳದೇ ಹೋದರೆ ನಿಜಕ್ಕೂ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಲೋಕೇಶ್ ಕನಗರಾಜ್ ಕೂಡಾ ಯಾಕೋ ಅಂಥಾ ಮೂರ್ಖತನವನ್ನೇ ಮಾಡಿದಂತೆ ಕಾಣಿಸುತ್ತಿದೆ. ಕಬಾಲಿ ಚಿತ್ರ ಬಿಡುಗಡೆಗೂ ಮುನ್ನ ಭಾರೀ ಹೈಪು ಸೃಷ್ಟಿಯಾಗಿತ್ತು. ಕಬಾಲಿ ಜಾಹೀರಾತು ಇಮಗಳಲ್ಲಿಯೂ ರಾರಾಜಿಸಿದ್ದವು. ಅಂಥಾ ಹೈಪುಗಳ ಅಬ್ಬರದಲ್ಲಿ ಬಿಡುಗಡೆಗೊಂಡಿದ್ದು ತೋಪು ಸಿನಿಮಾ. ಕೂಲಿಯ ಕ್ರೇಜ್ ನೋಡಿದಾಗಲೂ ಕಬಾಲಿ ಕಾಲವೇ ನೆನಪಾಗಿತ್ತು. ಆದರೆ, ಸಿನಿಮಾ ನೋಡಿದ ಮಂದಿ ಕೂಲಿಗಿಂತ ಕಬಾಲಿಯೇ ವಾಸಿ ಅಂದುಕೊಳ್ಳುವಂತಾಗಿದೆ. ಬಹುಶಃ ಅದು ಕೂಲಿಯ ನಿಜವಾದ ವಿಮರ್ಶೆಯಾಗಬಲ್ಲದು!

About The Author