ಮೊಡವೆ ಸುಂದರಿ ಸಾಯಿಪಲ್ಲವಿ ಇದೀಗ ಬಹು ನಿರೀಕ್ಷಿತ ರಾಮಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾಳೆ. ಸಾಮಾನ್ಯವಾಗಿ ಸಿನಿಮಾ ನಟಿಯರೆಂದರೆ ಗ್ಲಾಮರ್‌ಗೆ ಮಾತ್ರವೇ ಬಹಳಷ್ಟು ಒತ್ತು ಕೊಡುವವರೆಂಬ ನಂಬಿಕೆ ಇದೆ. ಇದು ಆ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳುವ ಅನಿವಾರ್ಯ ಸೂತ್ರವೂ ಹೌದು. ಆದರೆ, ದಕ್ಷಿಣ ಭಾರತೀಯ ಚಿತ್ರರಂಗ ಬಹು ಬೇಡಿಕೆಯ ನಟಿಯಾಗಿ, ಈಗ ಬಾಲಿವುಡ್ಡಿಗೂ ಹಾರಿರುವ ಸಾಯಿಪಲ್ಲವಿ ಮಾತ್ರ ತದ್ವಿರುದ್ಧ. ಇಂಥಾ ಸಾದಾ ಸೀದಾ ನಟಿ ರಾಮಾಯಣದ್ಲಿ ಸೀತೆಯಾಗಿ ನಟಿಸುತ್ತಿರೋದರ ಬಗ್ಗೆ ಬಹುತೇಕರಲ್ಲಿ ಹೆಮ್ಮೆ ಇದೆ. ಈ ರಾಮಾಯಣದ ನಡುವೆಯೇ ಸಾಯಿಪಲ್ಲವಿ ಮತ್ತೊಮ್ಮೆ ನಟ ನಾನಿಗೆ ಜೋಡಿಯಾಗಲಿರುವ ಸುದ್ದಿಯೊಂದು ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ.
ನ್ಯಾಚುರಲ್ ಸ್ಟಾರ್ ನಾನಿಯೊಂದಿಗೆ ಸಾಯಿಪಲ್ಲವಿ ಈಗಾಗಲೇ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಆ ಮೂರು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲ್ಲದೇ ಹೋದರೂ ಕೂಡಾ ನಾನಿ ಮತ್ತು ಸಾಯಿಪಲ್ಲವಿ ಜೋಡಿ ಪ್ರೇಕ್ಷಕರನ್ನು ಮೋಡಿಗೀಡು ಮಾಡಿತ್ತು. ಆ ಜೋಡಿಯನ್ನು ಮತ್ತೆ ಮತ್ತೆ ತೆರೆಯ ಮೇಲೆ ನೋಡುವ ಬಯಕೆ ಅದೆಷ್ಟೋ ಪ್ರೇಕ್ಷಕರಲ್ಲಿ ಮೂಡಿಕೊಳ್ಳುವಷ್ಟರ ಮಟ್ಟಿಗೆ ಆ ಕೆಮಿಸ್ಟ್ರಿ ಫಲಪ್ರದವಾಗಿತ್ತು. ಇಂಥಾ ಜೋಡಿ ಶೇಖರ್ ಕಮ್ಮುಲ ನಿರ್ದೇಶನದ ಚಿತ್ರದಲ್ಲಿ ಮತ್ತೆ ಒಂದುಗೂಡಲಿದೆ. ಭಿನ್ನ ಪ್ರೇಮ ಕಥಾನಕ ಹೊಂದಿರುವ ಈ ಸಿನಿಮಾದಲ್ಲಿ ಸಾಯಿಪಲ್ಲವಿ ಮತ್ತು ನಾನಿ ಮತ್ತೆ ಪ್ರೇಮಿಗಳಾಗಿ ಕಂಗೊಳಿಸಲಿದ್ದಾರೆ.
ಶೇಖರ್ ಕಮ್ಮಲ ಈಗಾಗಲೇ ಸಾಯಿಪಲ್ಲವಿ ನಟಿಸಿದ್ದ ಫಿದಾ ಮತ್ತು ಥಂಡೇಲ್ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. ಶೇಖರ್ ಕಮ್ಮಲ ಬಾಕ್ಸಾಫೀಸಿನಲ್ಲಿ ಸಂಚಲನ ಮೂಡಿಸುವಂಥಾ ಕಂಟೆಂಟಿನೊಂದಿಗೆ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎಂಬಂಥಾ ಮಾತುಗಳೂ ಕೇಳಿ ಬರುತ್ತಿವೆ. ಸಾಯಿ ಪಲ್ಲವಿ ರಾಮಾಯಾಣದಲ್ಲಿ ಸೀತೆಯಾಗುತ್ತಲೇ, ಅದರ ನಡುವಲ್ಲಿ ಬೇರೊಂದಷ್ಟು ಸಿನಿಮಾಗಳಲ್ಲಿಯೂ ಭಾಆಗಿಯಾಗಲು ನಿರ್ಧರಿಸಿದ್ದಾಳೆ. ಈಗಾಗಲೇ ಆಮಿರ್ ಖಾನ್ ಪುತ್ರನ ಜೊತೆ ಏಕ್ ದಿನ್ ಎಂಬ ಚಿತ್ರದಲ್ಲಿಯೂ ನಟಿಸಿದ್ದಾಳೆ. ಇದೆಲ್ಲವನ್ನೂ ನೋಡಿದರೆ, ಮುಂದಿನ ಇನ್ನೊಂದಷ್ಟು ವರ್ಷಗಳ ಕಾಲ ಭಾರತತೀಯ ಚಿತ್ರರಂಗದಲ್ಲಿ ಸಾಯಿಪಲ್ಲವಿಯ ಪರ್ವ ಚಾಲ್ತಿಯಲ್ಲಿರುವ ಲಕ್ಷಣಗಳು ಢಾಳಾಗಿಯೇ ಗೋಚರಿಸುತ್ತವೆ!