ಈ ಮೌನ ಅನ್ನೋ ಮಾಯೆ ಇದೆಯಲ್ಲಾ? ಅದನ್ನು ಸರಿಯಾದ ಸಂದರ್ಭದಲ್ಲಿ, ಸ್ಥಳದಲ್ಲಿ ಪ್ರದರ್ಶಿಸಿಸೋದೂ ಒಂದು ಕಲೆ. ಯಾರದ್ದೇ ವ್ಯಕ್ತಿತ್ವಕ್ಕೆ ಈ ಮಾತು ಮತ್ತು ಮೌನದ ನಡುವಿನ ಸಮತೋಲನ ಮತ್ತೊಂದು ಮಟ್ಟದ ತೂಕ ತಂದುಕೊಡುತ್ತದೆ. ಆದರೆ, ಮಾತಲ್ಲಿಯೇ ಮನೆಕಟ್ಟಿ ಬಿಡುವ ಸಿನಿಮಾ ಮಂದಿಗೆ ಈ ಮಾತು ಮತ್ತು ಮೌನದ ಜುಗಲ್ಬಂಧಿಯ ಸವಿ ಸಿಕ್ಕಿದ್ದೇ ವಿರಳ. ಅದರಲ್ಲೂ ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಕಾಲಿಟ್ಟಲ್ಲೆಲ್ಲ ಒಂದೊಂದು ವೇದಿಕೆ ಸೃಷ್ಟಿಯಾಗುತ್ತವೆ. ಕೆಲ ಸಿನಿಮಾ ನಿರ್ಮಾತೃಗಳು ಒದರಿದ್ದನ್ನೇ ಒದರಿ ಬೇಸರಾದಾಗ ಮತ್ತೇನೇನೋ ಬಡಬಡಿಸಿ ತಮ್ಮ ಕಾಲಿಗೆ ತಾವೇ ಚಪ್ಪಡಿ ಎಳೆದುಕೊಳ್ಳೋದಿದೆ. ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅಮ್ಮನ ಸ್ಥಿತಿಯೂ ಥೇಟು ಅದೇ ರೀತಿಯಾಗಿ ಬಿಟ್ಟಿದೆ!
ರಾಕಿಂಗ್ ಸ್ಟಾರ್ ಯಶ್ ಅಮ್ಮನ ಮಾತುಗಳ ಧಾಟಿಯ ಬಗ್ಗೆಯೇ ಈಗ ಎಲ್ಲೆಡೆ ವ್ಯಾಪಕವಾಗಿ ಚರ್ಚೆಗಳಾಗುತ್ತಿವೆ. ಆರಂಭದಲ್ಲಿ ಗಟ್ಟಿಗಿತ್ತಿ ನಿರ್ಮಾಪಕಿಯಂತೆ ಎಂಟ್ರಿ ಕೊಟ್ಟಿದ್ದ ಪುಷ್ಪಾ ಅರುಣ್ ಕುಮಾರ್ ಅವರ ಮಾತಿನ ಧಾಟಿ ಕಂಡವರು ಮೆಚ್ಚಿಕೊಂಡಿದ್ದದ್ದು ಸತ್ಯ. ಪುರುಷ ಪಾರುಪಥ್ಯವಿರುವ ಚಿತ್ರರಂಗಕ್ಕೆ ಮಹಿಳೆಯರು ಎಂಟ್ರಿ ಕೊಟ್ಟಾಗ ಅಂಥಾದ್ದೊಂದು ಮೆಚ್ಚುಗೆ ಸಹಜವಾಗಿಯೇ ಮೂಡಿಕೊಳ್ಳುತ್ತೆ. ಪ್ರೇಕ್ಷಕರ ವಲಯದಲ್ಲಿ ಪುಷ್ಪಾರ ಬಗ್ಗೆ ಹಬ್ಬಿಕೊಂಡಿದ್ದ ಮೆಚ್ಚುಗೆ ಎಂಥಾದ್ದಿತ್ತೆಂದರೆ, ಆಕೆಯನ್ನು ಕನ ನಡ ಚಿತ್ರರಂಗ ಕಂಡ ದಿಟ್ಟ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರೊಂದಿಗೆ ಹೋಲಿಕೆ ಮಾಡಲಾರಂಭಿಸಿದ್ದರು. ಅಂಥಾದ್ದೊಂದು ಇಮೇಜನ್ನು ಲಕ್ಷಣವಾಗಿ ಸಂಭಾಳಿಸಿಕೊಂಡಿದ್ದರೆ ಬಹುಶಃ ಆಕೆ ನಿರ್ಮಾಣ ಮಾಡಿರುವ ಕೊತ್ತಲವಾಡಿ ಚಿತ್ರ ಇಷೊಂದು ಹೀನಾಯವಾಗಿ ಕವುಚಿಕೊಳ್ಳುತ್ತಿರಲಿಲ್ಲ!
ಸಾಮಾನ್ಯವಾಗಿ ಒಂದು ಸಿನಿಮಾ ಬಗ್ಗೆ ಪ್ರಚಾರಕ್ಕೆ ನಿಂತಾಗ ನಿರ್ಮಾಪಕರು, ನಿರ್ದೇಶಕರು ಅದರ ಆಂತರ್ಯವನ್ನು ಬಿಟ್ಟು ಬೇರೇನೂ ಮಾತಾಡೋದಿಲ್ಲ. ಯಾವ ವೇದಿಕೆಯಲ್ಲಿ ಮಾತಿಗೆ ನಿಂತರೂ ಕಂಟೆಂಟಿನ ಸುತ್ತಲಷ್ಟೇ ಗಮನ ಕೇಂದ್ರೀಕರಿಸಿಕೊಳ್ಳುತ್ತೆ. ಆದರೆ ಪುಷ್ಪಾ ಮೇಡಮ್ಮು ಮಾತ್ರ ಬರಬರುತ್ತಾ ಬೇಡದ ಅಜ್ಜಿಪುರಾಣಗಳಲ್ಲಿಯೇ ಕಾಲಹರಣ ಮಾಡಿದ್ದರು. ಕೊತ್ತಲವಾಡಿಯ ಭೂಮಿಕೆಯಲ್ಲಿ ಮಾತಿಗೆ ಕೂತ ಪುಷ್ಪಾರ ಕಡೆಯಿಂದ ಆ ಸಿನಿಮಾ ಬಗ್ಗೆ ಕೇಳಿ ಬಂದಿದ್ದು ಅತ್ಯಂತ ಕಡಿಮೆ ಮಾತುಗಳು ಮಾತ್ರ. ಮಿಕ್ಕೆಲ್ಲವೂ ಕೆಲಸಕ್ಕೆ ಬಾರದ ವಿಚಾರಗಳೇ. ಕಡೇಗೆ ಪರಿಸ್ಥಿತಿ ಹೇಗಾಯಿತೆಂದರೆ, ಪುಷ್ಪಾರ ಮಾತುಗಳ ಬಗೆಗಿನ ಚರ್ಚೆಗಳ ಭರಾಟೆಯಲ್ಲಿ ಕೊತ್ತಲವಾಡಿ ಅಕ್ಷರಶಃ ಕೊಚ್ಚಿಕೊಂಡು ಹೋಗಿತ್ತು.
ಆರಂಭದಲ್ಲಿ ಯಶ್ ತಾಯಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆಂಬ ಕಾರಣದಿಂದಲೇ ಸದ್ದು ಮಾಡಿದ್ದದ್ದು ಕೊತ್ತಲವಾಡಿ. ಆದರೆ, ಸಿನಿಮಾ ಪ್ರಮೋಷನ್ನುಗಳ ಸಂದರ್ಭದಲ್ಲಿ ಕೊತ್ತಲವಾಡಿ ಸಿನಿಮಾದ ಬಗ್ಗೆ ಪ್ರೇಕ್ಷಕರು ಸಹಜವಾಗಿಯೇ ಆಸಕ್ತಿ ಕಳೆದುಕೊಂಡಿದ್ದರು. ಅದೆಲ್ಲದರ ಫಲವಾಗಿ ಈ ಚಿತ್ರಕ್ಕೆ ಆರಂಭದಿಂದಲೇ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಒಟ್ಟಾರೆ ಸಿನಿಮಾ ಕೂಡಾ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ ಎಂಬಂಥಾ ವಿಮರ್ಶೆಗಳು ಮೇಲುಗೈ ಪಡೆದಿವೆ. ತಣ್ಣಗೆ ತೆರೆಗಂಡಿದ್ದ ಸು ಫ್ರಂ ಸೋ ಅಲೆಯಲ್ಲಿ ಕೊತ್ತಲವಾಡಿ ನಿತ್ರಾಣಗೊಂಡಿದೆ. ಇದೀಗ ಯಶ್ ಅಮ್ಮ ಮತ್ತೊಂದು ಪ್ರವರ ಶುರುವಿಟ್ಟುಕೊಂಡಿದ್ದಾರೆ.
ಕೆಲವರು ವಿನಾ ಕಾರಣ ನೆಗೆಟಿವ್ ವಿಮರ್ಶೆ ಕೊಡುತ್ತಿದ್ದಾರೆ. ಇದರ ವಿರುದ್ಧ ಸಿಎಂಗೆ ದೂರು ಕೊಡುತ್ತೇನೆ ಅಂತೆಲ್ಲ ಕಾಮಿಡಿ ಮಾಡಲಾರಂಭಿಸಿದ್ದಾರೆ. ತಾಯೀ… ತಾವೇ ಮಾತಿನ ಭರದಲ್ಲಿ `ಸಿನಿಮಾ ಚನಾಗಿದ್ರೆ ನೋಡಿ, ಚನಾಗಿಲ್ಲದಿದ್ರೂ ಹೇಳಿ’ ಅಂದಿದ್ದು ಎಲ್ಲರಿಗೂ ನೆನಪಿದೆ. ತಮ್ಮ ಮಾತಿನಂತೆಯೇ ಕೆಲ ಮಂದಿ ಸಿನಿಮಾ ನೋಡಿದ್ದಾರೆ. ಸಿನಿಮಾ ಸಪ್ಪೆ ಅನಿಸಿದೆ. ಹಾಗನಿಸಿದ್ದನ್ನು ತಮ್ಮಷ್ಟೇ ನೇರವಾಗಿ ಹೇಳಿದ್ದಾರೆ. ವಿಷಯ ಹೀಗಿರುವಾಗ ಸಿಎಂ ಸಿದ್ದಣ್ಣನಿಗೆ ದೂರು ಕೊಟ್ಟು ಅದೇನು ಮಾಡುತ್ತಿರೋ ಭಗವಂತನೇ ಬಲ್ಲ!