ಸ್ಟಾರ್ ನಟರ ಮಕ್ಕಳು ಮರಿಗಳೆಲ್ಲ ನಟರಾಗಿ ಮಿಂಚಲು ಶತಪ್ರಯತ್ನ ನಡೆಸೋದು ಹೊಸತೇನಲ್ಲ. ಇಂಥಾ ನೆಪೋಟಿಸಂ ವಿರುದ್ಧ ಬಾಲಿವುಡ್ ಮಟ್ಟದಲ್ಲಿಯೂ ಆಗಾಗ ಧ್ವನಿಗಳು ಮೊಳಗುತ್ತಿರುತ್ತವೆ. ಕನ್ನಡ ಚಿತ್ರರಂಗದಲ್ಲೂ ಕೂಡಾ ಸಿನಿಮಾ ರಂಗದ ಪ್ರಸಿದ್ಧರ ಕುಡಿಗಳ ಆಗಮನ ಮಾಮೂಲು. ಆದರೆ, ಅಂಥವರಲ್ಲಿ ಯಶಸ್ವಿಯಾದವರ ಸಂಖ್ಯೆ ತೀರಾ ಕಡಿಮೆ ಇದೆ. ಈ ಮೂಲಕವೇ ಪ್ರತಿಭೆಯ ಹೊರತಾಗಿ ಬೇರ್‍ಯಾವುದಕ್ಕೂ ಸೊಪ್ಪು ಹಾಕೋದಿಲ್ಲ ಎಂಬಂಥಾ ಕನ್ನಡದ ಪ್ರೇಕ್ಷಕರ ಪ್ರೌಢ ಮನಃಸ್ಥಿತಿಯೂ ಜಾಹೀರಾಗಿದೆ. ಅಷ್ಟಾದರೂ ಕೂಡಾ ಪ್ರಸಿದ್ಧರ ಕುಟುಂಬದ ಕುಡಿಗಳ ಆಗಮನ ಮಾತ್ರ ಅನೂಚಾನವಾಗಿಕ ಮುಂದುವರೆದಿದೆ. ಅದರ ಭಾಗವಾಗಿಯೇ ಕನಸುಗಾರ ರವಿಚಂದ್ರನ್ ಸುಪುತ್ರರಿಬ್ಬರೂ ಕೂಡಾ ಅಖಾಡಕ್ಕಿಳಿದಿದ್ದಾರಾದರೂ ಈವರೆಗೂ ಪುಷ್ಕಳವಾದೊಂದು ಗೆಲುವು ದಕ್ಕದೆ ಪರಿತಪಿಸುತ್ತಿದ್ದಾರೆ.
ಅತ್ತ ಮನೋರಂಜನ್ ಹಾಗೂ ವಿಕ್ರಮ್ ಇಬ್ಬರೂ ಒಂದರ ಹಿಂದೊಂದರಂತೆ ಪ್ರಯತ್ನ ಪಟ್ಟರೂ ಕೂಡಾ ಗೆಲವು ಮರೀಚಿಕೆಯಾಗಿದೆ. ಹೀಗಿರುವಾಗಲೇ ರವಿಪುತ್ರ ಮನೋರಂಜನ್ ಮತ್ತೊಂದು ಚಿತ್ರದತ್ತ ವಾಲಿಕೊಂಡಿದ್ದಾರೆ. ಆ ಸಿನಿಮಾಗೀಗ ಮುಹೂರ್ತ ಕೂಡಾ ನಡೆದಿದೆ. ವೈ ಎಸ್ ಪ್ರೊಡಕ್ಷನ್ ಮೂಲಕ ಶ್ರೀನ ಇವಾಸ್ ನಿರ್ಮಾಣ ಮಾಡಲಿರುವ ಈ ಚಿತ್ರವನ್ನು ರುದ್ರೇಶ್ ನಿರ್ದೇಶನ ಮಾಡಲಿದ್ದಾರೆ. ಹೊನ್ನಾವರದ ಹುಡುಗಿ ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಲಿದ್ದಾರೆ. ಕಳೆದ ಸೀಜನ್ನಿನ ಬಿಗ್ ಬಾಸ್ ನಂತರ ಕಣ್ಮರೆಯಾದಂತಿದ್ದ ಅನುಷಾ ರೈ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯಕ್ಕೆ ಸದರಿ ಚಿತ್ರದ ಬಗ್ಗೆ ಇವಿಷ್ಟು ವಿಚಾರಗಳು ಮಾತ್ರವೇ ಜಾಹೀರಾಗಿವೆ. ಮಿಕ್ಕುಳಿದ ವಿವರಗಳು ಇಷ್ಟರಲ್ಲಿಯೇ ಪ್ರೇಕ್ಷಕರನ್ನು ತಲುಪಿಕೊಳ್ಳಬಹುದು.
ಈಗಾಗಲೇ ಎರಡ್ಮೂರು ಸಿನಿಮಾಗಳಲ್ಲಿ ಮನೋರಂಜನ್ ನಟಿಸಿದ್ದಾರೆ. ಮೊದಲ ಸಿನಿಮಾದಲ್ಲಂತೂ ಆತನ ಭಾಷಾ ಪ್ರಯೋಗದ ಬಗ್ಗೆಯೇ ಭಾರೀ ಅಪಸ್ವರಗಳು ಕೇಳಿ ಬಂದಿದ್ದವು. ನಟನಾಗಿ ರೂಪುಗೊಳ್ಳಬೇಕಾದರೆ ಇನ್ನೂ ಒಂದಷ್ಟು ತಾಲೀಮು ನಡೆಸಬೇಕು ಎಂಬಂಥಾ ವಿಮರ್ಶೆಗಳೂ ಬಂದಿದ್ದವು. ಅದಾದ ಮೇಲೂ ಮತ್ತೊಂದೆರಡು ಸಿನಿಮಾಗಳಲ್ಲಿ ನಟಿಸಿದರೂ ಮನು ಪಾಲಿಗೆ ಗೆಲುವು ಸಿಕ್ಕಲಿಲ್ಲ. ಇದೀಗ ಒಂದಷ್ಟು ಹೊಸಾ ಹುರುಪು ತುಂಬಿಕೊಂಡು ಆತ ಮತ್ತೊಂದು ಪ್ರಯತ್ನಕ್ಕೆ ಅಣಿಗೊಂಡಿದ್ದಾರೆ. ಈ ಬಾರಿ ಸದರಿ ಪಾತ್ರಕ್ಕಾಗಿ ಮನು ಒಂದಷ್ಟು ತಯಾರಿ ಮಾಡಿಕೊಂಡಿದ್ದಾರೆಂಬಂಥಾ ಮಾತುಗಳೂ ಕೇಳಿ ಬರುತ್ತಿವೆ. ರವಿಪುತ್ರನಿಗೆ ಇನ್ನಾದರೂ ಗೆಲುವು ಸಿಗಬಹುದಾ ಎಂಬ ಪ್ರಶ್ನೆಗೆ ಇಷ್ಟರಲ್ಲಿಯೇ ಉತ್ತರ ಸಿಗಲಿದೆ.