ಸಿನಿಮಾ ನಟ ನಟಿಯರನ್ನು ಅಭಿಮಾನಿಗಳು ದೇವರ ಸ್ಥಾನದಲ್ಲಿಟ್ಟು ಆರಾಧಿಸುತ್ತಾರೆ. ತಮ್ಮ ಕಷ್ಟಕೋಟಲೆಗಳನ್ನೆಲ್ಲ ಬದಿಗಿಟ್ಟು ಪದೇ ಪದೆ ಸಿನಿಮಾ ನೋಡಿ ಗೆಲ್ಲಿಸುತ್ತಾರೆ. ಯಾವುದೇ ಸ್ಟಾರ್ ನಟರ ಸಿನಿಮಾಗಳು ಕೋಟಿ ಕೋಟಿ ಬಾಚಿಕೊಂಡಿತೆಂದು ಸುದ್ದಿಯಾಗುತ್ತದಲ್ಲಾ? ಅದೆಲ್ಲವೂ ಇಂಥಾ ನಿಸ್ವಾರ್ಥ ಅಭಿಮಾನದ ಒಟ್ಟು ಮೊತ್ತವಷ್ಟೆ. ಹೀಗೆ ಜೀವಕ್ಕಿಂತಲೂ ಹೆಚ್ಚಾಗಿ ತಮ್ಮನ್ನು ಪ್ರೀತಿಸುವ ಪ್ರೇಕ್ಷಕರ ಬಗ್ಗೆ ನಟ ನಟಿಯರಿಗೆ ಎಂಥಾ ಕಾಳಜಿ ಇದೆ? ಈ ಪ್ರಶ್ನೆಯನ್ನಿಟ್ಟುಕೊಂಡುಜ ಹುಡುಕಾಟಕ್ಕಿಳಿದರೆ ಬಹತೇಕರದ್ದು ಡೌಲು ಪುರಾಣವೇ. ತಾನೊಂದು ಹೆಜ್ಜೆ ಮುಂದಿಟ್ಟರೆ ತನ್ನನ್ನು ಅನುಸರಿಸುವ ಅಭಿಮಾನಿಗಳ ಮೇಲೆ ಎಂಥಾ ಪರಿಣಾಮವಾಗುತ್ತದೆಂದು ಆಲೋಚಿಸುವ ಕಾಳಜಿ ಬಹುತೇಕ ನಟ ನಟಿಯರಿಗಿಲ್ಲ. ಈ ವಾಸ್ತವ ಮತ್ತೆ ಮತ್ತೆ ಸಾಬೀತಾಗಿದೆ.
ಅದು ಮತ್ತೊಮ್ಮೆ ಜಾಹೀರಾಗಿರೋದು ಬೆಟ್ಟಿಂಗ್ ಆಪ್ ಪ್ರಮೋಷಚನ್ನುಗಳ ಮೂಲಕ. ಈ ಹಿಂದೆ ಶಾರೂಖ್ ಖಾನ್, ಅಜಯ್ ದೇವಗನ್ ಥರದ ನಟರು ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಾಗ ಪ್ರಜ್ಞಾವಂತರು ಹೀನಾಮಾನ ಝಾಡಿಸಿದ್ದರು. ಆದರೆ, ಕೋಟಿ ರೊಕ್ಕದ ಅಮಲಿಗೆ ಬಿದ್ದ ಈ ಅವಿವೇಕಿ ನಟರು ಮತ್ತೆ ಮತ್ತೆ ಅಂಥಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾ ತಾವೆಂಥಾ ಕೃತಘ್ನರೆಂಬುದನ್ನು ಜಾಹೀರು ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಆನ್ಲೈನ್ ಬೆಟ್ಟಿಂಗ್ ಆಪ್ಗಳಿಗೆ ಪ್ರಚಾರ ನೀಡುವ ಮೂಲಕ ಮತ್ತೊಂದಷ್ಟು ನಟ ನಟಿಯರ ದಗಲ್ಬಾಜಿತನ ಬಟಾಬಯಲಾಗಿದೆ!
ಈ ಸಂಬಂಧವಾಗಿ ವರ್ಷಗಳ ಹಿಂದೆಯೇ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್ ರೈ ಸೇರಿದಂತೆ ಇಪ್ಪತ್ತೊಂಬತ್ತಕ್ಕೂ ಹೆಚ್ಚು ನಟ ನಟಿಯರ ಮೇಲೆ ಪ್ರಕರಣ ದಾಖಲಾಗಿದ್ದರು. ಈ ಸಂಬಂಧವಾಗಿ ರಾಣಾ ದಗ್ಗುಬಾಟಿಯನ್ನು ಇದೀಗ ಮತ್ತೆ ಪೊಲೀಸ್ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಇವರೆಲ್ಲ ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಹಾಗಿರುವಾಗ ಆನ್ ಲೈನ್ ಬೆಟ್ಟಿಂಗ್ ಆಪ್ಗಳ ಮೂಲಕ ಕಾಸು ಪಡೆದು, ಪ್ರಚಾರ ನಡೆಸಿ ಯಾರದ್ದೋ ಬದುಕನ್ನು ಬರ್ಬಾದು ಮಾಡೋ ದರ್ದು ಇವರಿಗೆಲ್ಲ ಅದೇನಿದೆಯೋ. ಕನ್ನಡದ ಕಿಚ್ಚ ಸುದೀಪ ಕೂಡಾ ಇಂಥಾದ್ದೇ ಆಪ್ ಪ್ರಮೋಟ್ ಮಾಡಿದ್ದರು. ಇದೀಗ ಸಮಾಜ ಸುಧಾರಕನಂತೆ ಪೋಸು ಕೊಡುತ್ತಿರುವ ಪ್ರಕಾಶ್ ರೈ ಕೂಡಾ ಇಂಥಾ ಜೂಜಿನ ಕಾಸಿನ ಮೋಹಕ್ಕೆ ಬೀಳುತ್ತಾರೆಂದರೆ, ಈ ನಟರ ದಗಲುಬಾಜಿತನಗಳ ಬಗ್ಗೆ ನಿಜಕ್ಕೂ ಅಸಹ್ಯ ಮೂಡಿಕೊಳ್ಳುತ್ತೆ.