ಕೆಲ ಮಹಿಳಾ ಪ್ರಧಾನ ಚಿತ್ರಗಳಲ್ಲಿ ರಗಡ್ ಲುಕ್ಕಿನಲ್ಲಿ ಮಿಂಚಿದ ಬಳಿಕ ಅನುಷ್ಕಾ ಶೆಟ್ಟಿ ಒಂದಷ್ಟು ಸೌಂಡು ಮಾಡಿದ್ದದ್ದು ಬಾಹುಬಲಿ ಮೂಲಕ. ಆದರೆ, ಅಂಥಾ ದೊಡ್ಡ ಮಟ್ಟದಲ್ಲಿ ಯಶ ಕಂಡ ನಂತರವೂ ಒಂದು ಸುದೀರ್ಘವಾದ ಶುಷ್ಕ ವಾತಾವರಣ ಅನುಷ್ಕಾಳ ವೃತ್ತಿ ಬದುಕಿಗೆ ಕವುಚಿಕೊಂಡಿತ್ತು. ಈ ಅವಧಿಯ ತುಂಬೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಗೌಜು, ಗದ್ದಲ ಸೃಷ್ಟಿಸಿದ್ದು ಆಕೆಯ ಮದುವೆ ಮ್ಯಾಟರ್ ಮಾತ್ರ. ಅನುಷ್ಕಾ ಮದುವೆಯ ಸುತ್ತ ಒಂದಷ್ಟು ಮಂದಿ ನಾನಾ ದಿಕ್ಕಿನ ರೂಮರು ಹಬ್ಬಿಸಿದ್ದು ಬಿಟ್ಟರೆ, ಆಕೆಯ ಕಡೆಯಿಂದೇನೂ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೀಗ ಒಂದು ಸುದೀರ್ಘ ಮೌನದ ನಂತರ ಅನುಷ್ಕಾ ಘಾಟಿಯಾಗಿ ಮರಳಿದ್ದಾರೆ!
ಅನುಷ್ಕಾ ಶೆಟ್ಟಿ ಘಾಟಿ ಅಂತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಬಗ್ಗೆ ವರ್ಷಗಳ ಹಿಂದಿನಿಂದಲೇ ಗುಲ್ಲೆದ್ದಿತ್ತು. ಕ್ರಿಶ್ ಜಗರ್ಲಮುಡಿ ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಹಿಂದೆ ಅದರ ಒಂದಷ್ಟು ಝಲಕ್ಕುಗಳು ಬಿಡುಗಡೆಗೊಂಡಿದ್ದವು. ಅದನ್ನು ನೋಡಿದ ಮಂದಿ ಇದೊಂದು ನಕ್ಸಲ್ ಹೋರಾಟದ ಕಥನವೆಂಬ ಬಗ್ಗೆ ಗುಲ್ಲೆಬ್ಬಿಸಿದ್ದರು. ಇದೀಗ ಬಹು ಕಾಲದ ನಂತರ ಘಾಟಿ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಅನುಷ್ಕಾ ಶೆಟ್ಟಿ ಅದರಲ್ಲಿ ಕಾಣಿಸಿಕೊಂಡಿರುವ ಪರಿ ಕಂಡು ಅಭಿಮಾನಿಗಳೆಲ್ಲ ಖುಷಿಗೊಂಡಿದ್ದಾರೆ. ಇಲ್ಲಿ ಡಿ ಗ್ಲಾಮ್ ಲುಕ್ಕಿನಲ್ಲಿ, ಪಕ್ಕಾ ರಗಡ್ ಶೈಲಿಯಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ.
ಒಂದು ಗಟ್ಟಿ ಕಂಟೆಂಟಿನೊಂದಿಗೆ ಕ್ರಿಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರ ಸ್ಪಷ್ಟ ಸುಳಿವು ಟ್ರೈಲರ್ ಮೂಲಕ ಸಿಕ್ಕಿದೆ. ಆದರೆ, ಒಟ್ಟಾರೆ ಸಿನಿಮಾದ ಸುತ್ತಾ ಒಂದಷ್ಟು ರೂಮರುಗಳೂ ಕೂಡಾ ಹಬ ಬಿಕೊಂಡಿದ್ದಾವೆ. ಅದರನ್ವಯ ಹೇಳೋದಾದರೆ, ನಿರ್ದೇಶಕ ಕ್ರಿಶ್ ಪಕ್ಕಾ ನಕ್ಸಲ್ ಕಥನಕ್ಕೆ ದೃಶ್ಯ ರೂಪ ನೀಡಲು ಮುಂದಾಗಿದ್ದರಂತೆ. ಆದರೆ, ಪ್ರಸಿದ್ಧ ನಟರೂ ಸೇರಿದಂತೆ ಹಿತೈಶಿಗಳು ಅದನ್ನು ಬದಲಾಯಿಸುವಂತೆ ಸಲಹೆ ನೀಡಿದ್ದರಂತೆ. ಆಂಧ್ರದಲ್ಲಿ ಈಗ ಪವನ್ ಕಲ್ಯಾಣ್ ಥರದವರು ಹಿಂದೂತ್ವದ ಜಪ ಮಾಡುತ್ತಿದ್ದಾರೆ. ಇಂಥಾ ಹೊತ್ತಿನಲ್ಲಿ ಅದಕ್ಕೆ ವಿರುದ್ಧವಾದ ನಕ್ಸಲ್ ಕಥನ ಹೇಳಿದರೆ ತೊಂದರೆಯಾಗುವ ಭಯದಿಂದ ಕ್ರಿಶ್ ಕಥೆಯನ್ನೇ ಬದಲಿಸಿದರಾ? ಅದರಿಂದಾಗಿಯೇ ಕಾಸ್ಟ್ಯೂಮ್ ಕೂಡಾ ಬದಲಾಗಿದೆಯಾ? ಟ್ರೈಲರ್ ನೋಡಿದವರಲ್ಲಿ ಇಂಥಾ ಪ್ರಶ್ನೆಗಳು ಮೂಡಿಕೊಂಡಿವೆ!