ಸತ್ಯಪ್ರಕಾಶ್ ನಿರ್ದೇಶನದ ಎಕ್ಸ್ ಆಂಡ್ ವೈ ಚಿತ್ರ ಇತ್ತೀಚೆಗಷ್ಟೇ ತೆರೆಗಂಡು ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಚಿತ್ರದಲ್ಲಿ ಚೆಂದದ ಪ್ರಧಾನ ಪಾತ್ರವೊಂದರಲ್ಲಿ ನಟಿಸುವ ಮೂಲಕ ಗಮನ ಸೆಳೆದಿರುವವರು ಅಥರ್ವ ಪ್ರಕಾಶ್. ಈ ಪಾತ್ರವನ್ನು ಪ್ರಕಾಶ್ ಸೃಷ್ಟಿಸಿದ್ದ ರೀತಿಯೇ ಪಳಗಿದ ನಟರಿಗೂ ಸವಾಲಿನಂತಿತ್ತು. ಆರಂಭಿಕವಾಗಿ ಅದರ ಬಗ್ಗೆ ಯಾವ ಸುಳಿವಬೂ ಇಲ್ಲದೆ, ಆ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದ ಈ ಹುಡುಗನ ನಟನಾ ಚಾತುರ್ಯ ಕಂಡವರು ಭೇಶ್ ಅಂದಿದ್ದರು. ಹೀಗೆ ಕನ್ನಡ ಚಿತ್ರರಂಗ ಹಾಗೂ ತುಳುವಿನಲ್ಲಿಯೂ ನಟನೆಯ ಯಾನವನ್ನು ಸಂಭಾಳಿಸಿಕೊಂಡು ಸಾಗುತ್ತಿರುವ ಅಥರ್ವ ಪಾಲಿಗೀಗ ಒಂದರ ಹಿಂದೊಂದರಂತೆ ಚೆಂದದ ಅವಕಾಶಗಳು ಕೂಡಿಕೊಳ್ಳುತ್ತಿವೆ. ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಏಕಕಾಲದಲ್ಲಿಯೇ ನಾಯಕ ನಟನಾಗಿ ಮಿಂಚುತ್ತಿರುವ ಅರ್ಥರ್ವ ಸಿನಿಮಾ ಪ್ರೇಮಿಗಳ ಅಚ್ಚರಿಗೆ ಕಾರಣರಾಗಿದ್ದಾರೆ.
ಇದೀಗ ಒಂದಷ್ಟು ಸಿನಿಮಾಗಳ ಭಾಗವಾಗಿರುವ ಅಥರ್ವ ಪ್ರಕಾಶ್ ಮಂಗಳೂರು ಸೀಮೆಯವರು. ಕಲೆಯ ವಾತಾವರಣದಲ್ಲಿಯೇ ಬೆಳೆದಿದ್ದ ಅವರ ಪಾಲಿಗೆ ಹದಿನಾರನೇ ವಯಸ್ಸಿನಲ್ಲಿಯೇ ಒಂದೊಳ್ಳೆ ಅವಕಾಶ ಕೂಡಿ ಬಂದಿತ್ತು. ತುಳುವಿನಲ್ಲಿ ಸೂಪರ್ ಹಿಟ್ ಆಗಿದ್ದ, ಐನೂರು ದಿನಗಳ ಕಾಲ ಯಶಸ್ವೀ ಪ್ರದರ್ಶನ ಕಂಡಿದ್ದ ಚಾಲಿ ಪೋಲಿಲು ಚಿತ್ರದಲ್ಲಿ ನಟಿಸುವ ಅವಕಾಶವೊಂದು ಅಥರ್ವಗೆ ಸಿಕ್ಕಿತ್ತು. ಆ ಚಿತ್ರದಲ್ಲಿ ಬಾಲ ನಟನಾಗಿ, ನಾಯಕನ ಬಾಲ್ಯದ ಪಾತ್ರಕ್ಕೆ ಜೀವ ತುಂಬಿದ್ಧ ಅಥರ್ವ ಪಾಲಿಗೆ ಆ ದಿನಗಳಿಂದಲೇ ನಟನಾಗಿ ಬೆಳೆದು ನಿಲ್ಲುವ ಹಂಬಲವಿತ್ತು. ಆ ನಂತರದಲ್ಲಿ ಓದಿನ ನಡುವೆಯೇ ನಟನಾಗೋ ತಾಲೀಮು ನಡೆಸುತ್ತಾ ಬಂದು, ಇದೀಗ ಎಂಥಾ ಸವಾಲಿನ ಪಾತ್ರವನ್ನಾದರೂ ಸಲೀಸಾಗಿ ನಿಭಾಯಿಸುವ ಕಸುವು ತುಂಬಿಕೊಂಡಿರೋದು ಅಥರ್ವನ ಹೆಚ್ಚುಗಾರಿಕೆ.
ಹೀಗೆ ತುಳು ಚಿತ್ರರಂಗದಲ್ಲಿ ದೇವದಾಸ್ ಕಾಪಿಕಾಡ್, ಶೋಭರಾಜ್ ಮುಂತಾದ ನಿರ್ದೇಶಕರ ಗರಡಿಯಲ್ಲಿ ನಟನಾಗಿ ಪಳಗಿಕೊಂಡಿದ್ದ ಅಥರ್ವ ಕನ್ನಡಕ್ಕೆ ಅಡಿಯಿರಿಸಿದ್ದದ್ದು ಪಿಆರ್ಕೆ ಪ್ರೊಡಕ್ಷನ್ಸ್ ಮೂಲಕ. ನವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸುತ್ತಾ ಬಂದಿದ್ದ ಪುನೀತ್ ರಾಜ್ ಕುಮಾರ್ ತನ್ನ ಬ್ಯಾನರ್ ಮೂಲಕ ಮ್ಯಾ ಆಫ್ ದ ಮ್ಯಾಚ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದ ಮೂಲಕ ಅಥರ್ವ ಕನ್ನಡ ಸಿನಿಮಾಭಿಮಾನಿಗಳನ್ನು ನಾಯಕ ನಟನಾಗಿ ಮುಖಾಮುಖಿಯಾಗಿದ್ದರು. ಚೇತನ್ ಮುಂಡಾಡಿ ಜನಿರ್ದೇಶನದ ಭಾವಪೂರ್ಣ ಚಿತ್ರದಲ್ಲಿಯೂ ಪ್ರಧಾನ ಪಾತ್ರವನ್ನು ನಿರ್ವಹಿಸಿ ಸೈ ಅನ್ನಿಸಿಕೊಂಡಿದ್ದರು. ಅದಾದ ನಂತರ ಮತ್ತೆ ಸತ್ಯಪ್ರಕಾಶ್ ಸಾರಥ್ಯದ ಎಕ್ಸ್ ಆಂಡ್ ರೇ ಸಿನಿಮಾ ಮೂಲಕ ಮತ್ತೆ ನಾಯಮಕನಾಗಿ ಗಮನ ಸೆಳೆದುಕೊಂಡಿದ್ದಾರೆ.
ಕಣ್ಣಾಮುಚ್ಚೆ ಕಾಡೇಗೂಡೆ ಎಂಬ ಚಿತ್ರದಲ್ಲಿಯೂ ನಾಯಕನಾಗಿ ನಟಿಸಿದ್ದ ಅಥರ್ವ ನಾನ್ವೆಜ್ ಅಂತೊಂದು ಚಿತ್ರದಲ್ಲಿಯೂ ನಟಿಸಿದ್ದಾರೆ. ಆ ಸಿನಿಮಾ ಮುಂದಿನ ತಿಂಗಳು ತೆರೆಗಾಣುವ ಸಾಧ್ಯತೆಗಳಿದ್ದಾವೆ. ಇದೀಗ ತುಳು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳಲಿರುವ ಚಿತ್ರಕ್ಕಾಗಿ ತಯಾರಿ ಆರಂಭವಾಗಿದೆ. ವಿಶೇಷವೆಂದರೆ, ಪೃಥ್ವಿ ಅಂಬಾರ್ ಆ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಮೂಲತಃ ಆರ್ಕಿಟೆಕ್ಟ್ ಆಗಿರುವ ಅಥರ್ವ ಪಾಲಿಗೆ ಮೊದಲು ಸಿನಿಮಾ ಮೋಹ ಶುರುವಾದದ್ದು ಮೋಹನ್ ಲಾಲ್ ಅಭಿನಯದ ಸಿನಿಮಾ ಮೂಲಕ. ಅದರೊಂದಿಗೆ ಸಿನಿಮಾ ಸೆಳೆತಕ್ಕೆ ಬಿದ್ದಿದ್ದ ಅಥರ್ವ, ಕಾಲೇಜು ದಿನಗಳಲ್ಲಿ ತಮ್ಮ ಮಿತಿಯಲ್ಲಿಯೇ ಒಂದಷ್ಟು ತಯಾರಿ, ಪ್ರಯೋಗಗಳನ್ನು ಮಾಡಿದ್ದರು. ಕಡೆಗೂ ಕನಸಿನ ಹಾದಿಯಲ್ಲಿ ಕಾಲೂರಿ ನಿಂತಿರುವ ಅವರೀಗ ಕನ್ನಡ ಮತ್ತು ತುಳುವಿನಲ್ಲಿ ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ…