ಬಾಲಿವುಡ್ಡಿನಲ್ಲಿ ಮತ್ತೊಂದು ಸಂಸಾರ ಹಳ್ಳ ಹಿಡಿದ ಸ್ಪಷ್ಟ ಸೂಚನೆಯೊಂದು ರವಾನೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಅವತಾರವೆತ್ತುತ್ತಾ ಬಂದಿದ್ದ, ಮುಖ ಮುಚ್ಚಿಕೊಂಡೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ (raj kundra) ಕುಂದ್ರಾ ಏಕಾಏಕಿ ಸೋಶಿಯಲ್ ಮೀಡಿಯಾ ಮೂಲಕ ಬಾಂಬು ಸಿಡಿಸಿದ್ದಾನೆ. ತಾನು ಮತ್ತು ಶಿಲ್ಪಾ ಶೆಟ್ಟಿ (actress shilpa shetty) ಪರಸ್ಪರ ದೂರಾಗಿದ್ದೇವೆ ಅನ್ನೋದು ಅದರ ಸಾರಾಂಶ. ಅಷ್ಟಕ್ಕೂ ಈ ಸುದ್ದಿ ಯಾರಿಗೂ ಆಘಾತ ತಂದಿಲ್ಲ. ಯಾಕೆಂದರೆ, ಈ ಸೆಲೆಬ್ರಿಟಿಗಳ ವಿಚಾರದಲ್ಲಿ ಡಿವೋರ್ಸ್ ಎಂಬುದು ಮದುವೆಯಷ್ಟೇ ಸಾಮಾನ್ಯ ಸಂಗತಿ. ಶಿಲ್ಪಾ ಶೆಟ್ಟಿ ದಾಂಪತ್ಯದ ವಿಚಾರದಲ್ಲಿ ಹೇಳೋದಾದರೆ, ಯಾವಾಗ ರಾಜ್ ಕುಂದ್ರಾ ಕೊರೋನಾ ಹೊತ್ತಲ್ಲಿ ಜೈಲು ಸೇರಿಕೊಂಡನೋ, ಆ ಮೂಲಕ ಆತನ ಅಸಲೀ ದಂಧೆ ಜಗಜ್ಜಾಹೀರಾಗುತ್ತಲೇ ಸಂಸಾರದಲ್ಲಿ ಬಿರುಗಾಳಿ ಶುರುವಾಗಿತ್ತು. ಅದೀಗ ಇಬ್ಬರನ್ನೂ ಎರಡು ದಿಕ್ಕಿಗೆ ಎತ್ತೆಸೆದ ಲಕ್ಷಣಗಳು ಗೋಚರಿಸುತ್ತಿವೆ!

ಹಾಗೆ ನೋಡಿದರೆ, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ದಾಂಪತ್ಯದ ಬಗ್ಗೆ ರೂಮರುಗಳು ಹಬ್ಬಲಾರಂಭಿಸಿದ್ದು ಇಂದು ನಿನ್ನೆಯೇನಲ್ಲ. ಕುಂದ್ರಾನ ನೀಲಿ ಚಿತ್ರದ ಲೀಲಾವಳಿಗಳು ಜಾಹೀರಾಗುತ್ತಲೇ ಶಿಲ್ಲಾ ಶೆಟ್ಟಿ ಕಂಗಾಗಾಲಾಗಿ ಹೋಗಿದ್ದಳಂತೆ. ಒಂದಷ್ಟು ಮಂದಿ ಈ ವಿಚಾರ ಶಿಲ್ಪಾಗೆ ತಿಳಿಯದೇ ನಡೆದಿರೋದಿಲ್ಲ ಅಂತಲೇ ಮಾತಾಡಿಕೊಂಡಿದ್ದರು. ಆದರೆ, ಅಸಲೀ ವಿಚಾರ ಅದಕ್ಕೆ ತದ್ವಿರುದ್ಧವಾಗಿದೆ. ಕುಂದ್ರಾ ಕೋಟಿ ಕುಳ. ಆ ಹಬೆಯೇ ಬಳುಕೋ ಬಳ್ಳಿಯಂಥಾ ಶಿಲ್ಪಾ ಶೆಟ್ಟಿಯನ್ನ ಕುಂದ್ರಾನತ್ತ ಸೆಳೆದಿತ್ತು. ಹಾಗಿಲ್ಲದೇ ಹೋಗಿದ್ದರೆ, ಅದಾಗಲೇ ಒಂದು ಮದುವೆಯಾಗಿದ್ದ ರಾಜ್ ಕುಂದ್ರಾನೊಂದಿಗೆ ಶಿಲ್ಪಾ ಶೆಟ್ಟಿಯ ಸಂಬಂಧ ಕುದುರಲು ಸಾಧ್ಯವಿರುತ್ತಿರಲಿಲ್ಲ. ಹಾಗೆ ಶಿಲ್ಪಾಳನ್ನು ಮದುವೆಯಾಗೋ ಹೊತ್ತಿಗೆಲ್ಲ ರಾಜ್ ಕುಂದ್ರಾ ಅಕ್ಷರಶಃ ಕುಬೇರನಾಗಿದ್ದ. ಆತನ ಉದ್ದಿಮೆ, ವ್ಯವಹಾರ ಕಣ್ಣಳತೆಗೆ ನಿಲುಕದಷ್ಟು, ಸಲೀಸಾಗಿ ಅಂದಾಜಿಸಲಾರದಷ್ಟು ವಿಸ್ತಾರವಾಗಿ ಬೆಳೆದುಕೊಂಡಿತ್ತು.

ಇಂಥಾ ವ್ಯವಹಾರಗಳಲ್ಲಿ ತೊಗಲು ದಂಧೆಯೂ ಸೇರಿಕೊಂಡಿದೆ ಎಂಬ ಸಣ್ಣ ಸುಳಿವೂ ಕೂಡಾ ಶಿಲ್ಪಾ ಶೆಟ್ಟಿಗಿರಲಿಲ್ಲ. ಕಂಡೋರ ಮನೆ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ, ಅದನ್ನು ಚಿತ್ರೀಕರಿಸಿ ಪೋರ್ನ್ ಸೈಟ್ ಗಳಿಗೆ ಮಾರೋದನ್ನೇ ಕುಂದ್ರಾ ದಂಧೆಯಾಗಿಸಿಕೊಂಡಿದ್ದ. ಹೊರ ಜಗತ್ತಿಗೆ ಯಶಸ್ವೀ ಉದ್ಯಮಿ ಅಂತ ತೋರಿಸಿಕೊಂಡಿದ್ದ ಕುಂದ್ರಾನ ಒಟ್ಟಾರೆ ಆದಾಯ ನೀಲಿ ಚಿತ್ರಗಳಿಂದಲೇ ಬರುತ್ತಿತ್ತೆಂದು ಹೇಳುವವರೂ ಇದ್ದಾರೆ. ಅದೇ ದಂಧೆಯ ಸಂಬಂಧವಾಗಿ ಜೈಲು ಪಾಲಾದನಲ್ಲಾ ಕುಂದ್ರಾ? ಆ ತನಿಖೆಯ ಸಂದರ್ಭದಲ್ಲಿ ಪೊಲೀಸರು ಆಘಾತಕರ ಮಾಹಿತಿಗಳನ್ನು ಕಲೆ ಹಾಕಿದ್ದರು. ಆ ವಿವರ ಕೇಳಿ ಖುದ್ದು ಶಿಲ್ಪಾ ಶೆಟ್ಟಿ ಅವಾಕ್ಕಾಗಿ ಬಿಟ್ಟಿದ್ದಳಂತೆ. ಹೇಗೋ ಹಣ ಬಲ ಬಳಸಿ ಜಾಮೀನು ಪಡೆದು ಹೊರ ಬಂದಿದ್ದ ಕುಂದ್ರಾ, ಹೊರ ಜಗತ್ತಿಗೆ ಮುಖ ತೋರಿಸದೆ ಓಡಾಡಲಾರಂಭಿಸಿದ್ದ. ಅದೇ ಹೊತ್ತಲ್ಲಿ ತನ್ನದೇ ಹೆಂಡತಿಗೂ ಮುಖ ತೋರಿಸದಂಥಾ ಪಾತಾಳಕ್ಕಿಳಿದು ಬಿಟ್ಟಿದ್ದ.  

ಆ ಹಂತದಿಂದಲೇ ಶಿಲ್ಪಾ ಮತ್ತು ಕುಂದ್ರಾ ಸಂಸಾರದಲ್ಲಿ ಬಿರುಕು ಮೂಡಿಕೊಂಡಿತ್ತು. ಅಂಥಾ ಆಘಾತಗಳನ್ನು ನೆನೆದು ಶಿಲ್ಪಾ ಕೆಲವಾರು ಶೋಗಳಲ್ಲಿ ಕಣ್ತುಂಬಿಕೊಂಡಿದ್ದೂ ಇದೆ. ಒಂದಷ್ಟು ಕಾಲ ಹೊಂದಿಕೊಂಡಸಸು ಹೋಗುವ ಸರ್ಕಸ್ಸೂ ಕೂಡಾ ಶಿಲ್ಪಾಳ ಕಡೆಯಿಂದ ನಡೆದಿದೆ. ಆದರೆ, ಅದಾಗಲೇ ನೀಲಿ ಲೋಕದೊಳಗೆ ಮುಳುಗಿದ್ದ ಕುಂದ್ರಾ ಈ ಜನುಮದಲ್ಲಿ ಬದಲಾಗೋದಿಲ್ಲ ಎಂಬ ವಿಚಾರ ಶಿಲ್ಪಾಗೆ ಮನದಟ್ಟಾದಂತಿದೆ. ಅದೆಲ್ಲದರ ಫಲವಾಗಿ ಶಿಲ್ಪಾ ಮತ್ತು ಕುಂದ್ರಾ ದಾಂಪತ್ಯ ಜೀವನ ತಿಂಗಳುಗಳ ಹಿಂದೆಯೇ ಸಮಾಪ್ತಿಗೊಂಡಿದೆ. ಅದನ್ನೀಗ ಖುದ್ದು ಕುಂದ್ರಾ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾನಷ್ಟೇ?

ಹಾಗಾದರೆ, ಈ ರಾಜ್ ಕುಂದ್ರಾ ಯಾರು? ಆತ ಹುಟ್ಟು ಶ್ರೀಮಂತನಾ? ಕುಂದ್ರಾನ ಶ್ರೀಮಂತಿಕೆಯ ಮೂಲ ಯಾವುದು? ಹೀಗೆ ನಾನಾ ಪ್ರಶ್ನೆಗಳು ಹುಟ್ಟಿಕೊಳ್ಳೋದು ಸಹಜ. ಈ ಬಗ್ಗೆ ಕೆದಕುತ್ತಾ ಹೋದರೆ, ಮಧ್ಯಮ ವರ್ಗದ ಲಂಡನ್ನಿನ ಹುಡುಗನೊಬ್ಬ ದೇಶ ದೇಶಗಳ ಗಡಿ ದಾಟಿ, ಥರ ಥರದ ದಂಧೆ ನಡೆಸುತ್ತಾ ಕೋಟಿ ಕುಳವಾದ ರೋಚಕ ಕಥನವೊಂದು ತೆರೆದುಕೊಳ್ಳುತ್ತೆ. ಆ ಕಥೆಯ ಬೇರುಗಳಿರೋದು ದೂರದ ದೇಶ ಲಂಡನ್ನಿನಲ್ಲಿ. 1975ರಲ್ಲಿ ಲಂಡನ್ನಿನ ಬಡ ಮಧ್ಯಮ ವರ್ಗದಲ್ಲಿ ಜನಿಸಿದ್ದವನು ರಾಜ್ ಕುಂದ್ರಾ. ಈಗ ಅವನು ವಿಶ್ವ ಮಟ್ಟದಲ್ಲಿ ಬ್ಯುಸಿನೆಸ್‍ಮ್ಯಾನ್ ಆಗಿ ಗುರುತಿಸಿಕೊಂಡಿದ್ದಾನೆ. ಆತನ ವೈಭೋಗ ಕಂಡವರೆಲ್ಲ ಕುಂದ್ರಾ ಓರ್ವ ಹುಟ್ಟು ಶ್ರೀಮಂತ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ, ಹುಟ್ಟಿದಂದಿನಿಂದ ಯೌವನಾವಸ್ಥೆ ತಲುಪೋವರೆಗೂ ಕುಂದ್ರಾ ಭಾರೀ ಬಡತನವನ್ನೇ ಕಂಡುಂಡು ಬೆಳೆದಿದ್ದ.

ಎಳವೆಯಿಂದಲೂ ಚಾಲಾಕಿಯಾಗಿದ್ದ ಕುಂದ್ರಾ ಮೂಲತಃ ಭಾರತದ ಪಂಜಾಬಿನ ಲೂಧಿಯಾನ ಮೂಲದವನೇ. ಆತನ ಹೆತ್ತವರು ಬಹು ವರ್ಷಗಳ ಹಿಂದೆ ಲಂಡನ್ನಿಗೆ ಹೋಗಿ ನೆಲೆಸಿದ್ದರಷ್ಟೆ. ಈತನ ನಿಜವಾದ ಹೆಸರು ರಿಪು ಸುದನ್ ಕುಂದ್ರಾ. ಒಂದು ಕಾಲದಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ತಂದೆ ಬಾಲಕೃಷ್ಣ ಕುಂದ್ರಾ, ಆ ನಂತರ ಸಣ್ಣ ಮಟ್ಟದ್ದೊಂದು ಉದ್ಯಮ ಆರಂಭಿಸಿದ್ದರು. ಅದರಲ್ಲಿ ಸಂಸಾರ ನಿಭಾಯಿಸಲು ಸಾದ್ಯವಾಗದಿದ್ದಾಗ ಕುಂದ್ರಾನ ಅಮ್ಮ ರೀನಾ ಕುಂದ್ರಾ ಅಂಗಡಿಯೊಂದರಲ್ಲಿ ಸಹಾಯಕಿಯಾಗಿ ದುಡಿಯಲಾರಂಭಿಸಿದ್ದರು. ಇಂಥಾ ಕುಟುಂಬ ಕೂಸಾದ ರಾಜ್ ಕುಂದ್ರಾ, ಹದಿನೆಂಟರ ಹೊತ್ತಿಗೆಲ್ಲ ಪರಿಚಿತರ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆ ನಂತರ ಹೀಗೇ ಇದ್ದರೆ ಬಡತನ ಬದುಕನ್ನು ನುಂಗಿ ಹಾಕುತ್ತದೆಂದು ಗೊತ್ತಾಗಿ ಹೋಗಿತ್ತೇನೋ; ಸ್ವಂತ ಉದ್ಯಮ ಕಟ್ಟುವ ಕನಸು ಕಂಡ ಕುಂದ್ರಾ, ದುಬೈಗೆ ಹಾರಿದವನೇ ಡೈಮಂಡ್ ಬ್ಯುಸಿನೆಸ್ ಆರಂಭಿಸಿದ್ದ. ಆದರೆ, ಆರಂಭಿಕವಾಗಿಯೇ ಆತನಿಗೆ ಸೋಲು ಸುತ್ತಿಕೊಂಡಿತ್ತು.

ಒಂದಷ್ಟು ಸಾಲ ಮಾಡಿಕೊಂಡು ದುಬೈನಿಂದ ನೇಪಾಳಕ್ಕೆ ಬಂದಿಳಿದ ಕುಂದ್ರಾ, ಅಲ್ಲಿ ಬೇಡಿಕೆಯಿದ್ದ ಮೈ ಬೆಚ್ಚಗಾಗಿಸೋ ಉಡುಪುಗಳನ್ನು ಮಾರಾಟ ಮಾಡೋ ಕೆಲಸ ಶುರುವಿಟ್ಟುಕೊಂಡಿದ್ದ. ನೇಪಾಳದಿಂದ ನೂರು ಉಡುಪುಗಳನ್ನು ಖರೀದಿಸಿ, ಲಂಡನ್ನಿಗೆ ತೆರಳಿದವನೇ ಅಲ್ಲಿನ ಫ್ಯಾಶನ್ ಕಂಪೆನಿಗೆ ಮಾರಿ ಒಂದಷ್ಟು ಲಾಭ ಕಂಡಿದ್ದ. ನಂತರ ಅದನ್ನೇ ಪ್ರಧಾನ ಕಸುಬಾಗಿಸಿಕೊಂಡು ಯಶ ಕಂಡು ಬಿಟ್ಟಿದ್ದ. ಆ ವ್ಯವಹಾರದಲ್ಲಿ ಅದ್ಯಾವ ಪರಿಯಾಗಿ ಖ್ಯಾತಿ ಗಳಿಸಿದನೆಂದರೆ, 2004ರ ಹೊತ್ತಿಗೆಲ್ಲ ಯುಕೆ ಯ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಕುಂದ್ರಾನ ಯಶೋಗಾಥೆ ಪ್ರಕಟವಾಗಿ ಬಿಟ್ಟಿತ್ತು!

ಹೀಗೆ ಉದ್ಯಮದಲ್ಲಿ ಯಹಶ ಕಾಣುತ್ತಲೇ 2003ರಲ್ಲಿ ಪಂಜಾಬ್ ಮೂಲಕದ ವ್ಯಾಪಾರಿಯ ಮಗಳು ಕವಿತಾಳನ್ನ ಮದುವೆಯಾಗಿದ್ದ. ಆದರೆ, ಎರಡೇ ವರ್ಷ ಕಳೆಯೋದರೊಳಗೆ, ಎರಡು ತಿಂಗಳ ಪುಟ್ಟ ಮಗಳನ್ನೂ ಲೆಕ್ಕಿಸದೆ ಮಡದಿಗೆ ಡಿವೋರ್ಸ್ ಕೊಟ್ಟಿದ್ದ. 2007ರ ಹೊತ್ತಿಗೆಲ್ಲ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಸುಗಂಧ ದ್ರವ್ಯ ಕಂಪೆನಿಯೊಂದಕ್ಕೆ ರಾಯೌಭಾರಿಯಾಗಿದ್ದಳು. ಅದರದ್ದೊಂದು ಕಾರ್ಯಕ್ರಮ ಲಂಡನ್ನಿನಲ್ಲಿ ಆಯೋಜನೆಗೊಂ ಡಿತ್ತು. ಅದರಲ್ಲಿ ಕುಂದ್ರಾ ಕೂಡಾ ಭಾಗಿಯಾಗಿದ್ದ. ಅಲ್ಲಿಂದಲೇ ಅವರಿಬ್ಬರ ನಡುವೆ ಪರಿಚಯವಾಗಿ, ಪ್ರೀತಿ ಮೊಳೆತುಕೊಂಡಿತ್ತು. 2009ರಲ್ಲಿ ಅವರಿಬ್ಬರೂ ಮದುವೆಯಾಗಿದ್ದರು.

ಕೇವಲ 29 ವರ್ಷಕ್ಕೆಲ್ಲ ಯಶಸ್ವೀ ಉದ್ಯಮಿಯಾಗಿದ್ದ ಕುಂದ್ರಾ, ಶಿಲ್ಪಾಳನ್ನು ಮದುವೆಯಾದ ನಂತರ ಭಾರತಕ್ಕೆ ಮರಳಿದ್ದ. ಇಲ್ಲಿಯೇ ನಾನಾ ಥರದ ದಂಧೆ ನಡೆಸುತ್ತಾ ತನ್ನ ಕೋಟಿ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದ. ಅಸಾಧ್ಯ ಮಹತ್ವಾಕಾಂಕ್ಷಿಕಯಾಗಿದ್ದ ಕುಂದ್ರಾ, ಭಾರತದಲ್ಲಿಯೂ ಪ್ರತಿಷ್ಟಿತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ. ಈತ ಡೈಮಂಡ್ ವ್ಯವಹಾರದಲ್ಲಿ ನೆಲಕಚ್ಚಿದ್ದಾಗ ಕೈ ಹಿಡಿದದ್ದು ನೇಪಾಳದ ಬೆಚ್ಚನೆಯ ಉಡುಪುಗಳ ದಂಧೆ. ಆ ದಿರಿಸುಗಳನ ನು ಹಿಮಾಲಯದ ತಪ್ಪಲ್ಲಲ್ಲಿ ವಾಸಿಸುವ ಒಂದು ತಳಿಯ ಕುರಿಗಳ ಚರ್ಮ, ಉಣ್ಣೆಯಿಂದ ಮಾಡುತ್ತಿದ್ದರಂತೆ. ಹೀಗೆ ಕುಸಿದಾಗ ಕೈ ಹಿಡಿದದ್ದು ಕುರಿಗಳ ತೊಗಲು. ಹೇಗಿದ್ದರೂ ತೊಗಲು ದಂಧೆ ಕೈ ಹಿಡಿಯುತ್ತೆ ಅಂತ ನಂಬಿಕೊಂಡನೋ ಏನೋ; ಕಂಡೋರ ಮನೆ ಹೆಣ್ಣುಮಕ್ಕಳನ್ನು ಮಂಚಕ್ಕೆ ಕೆಡವಿ ನೀಲಿ ಚಿತ್ರ ತಯಾರಿಸೋ ದಂಧೆ ಶುರುವಿಟ್ಟುಕೊಂಡಿದ್ದ.  ಅದರಿಂದಲೇ ಈಗ ಕುಂದ್ರಾನ ಖಾಸಗೀ ಬದುಕು ಮತ್ತೆ ಛಿದ್ರಗೊಂಡಿದೆ. ಅತ್ತ ಉದ್ಯಮಿಯಾಗಿಯೂ ಕಿಮ್ಮತ್ತು ಕಳೆದುಕೊಂಡಿರುವ ಕುಂದ್ರಾಗೀಗ ಅಕ್ಷರಶಃ ಕೇಡುಗಾಲ ಶುರುವಾದಂತಿದೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!