ಇತ್ತೀಚೆಗಷ್ಟೇ ಟಾಕ್ಸಿಕ್ ಚಿತ್ರದಲ್ಲಿ ಯಶ್ ಪಾತ್ರ ಪರಿಚಯದ್ದೊಂದು ಟೀಸರ್ ಬಿಡುಗಡೆಗೊಂಡಿತ್ತು. ಅದರಲ್ಲಿ ರಾಕಿಭಾಯ್ ಕಾಣಿಸಿಕೊಂಡಿದ್ದ ಪರಮ ಪೋಲಿ ಅವತಾರ ಕಂಡು ಖುದ್ದು ಅಭಿಮಾನಿಗಳೇ ಬೆಚ್ಚಿಬಿದ್ದಿದ್ದರು. ಒಂದಷ್ಟು ಉರಗಗಳು ಮಡಿವಂತಿಕೆಯ ಪೊರೆಯೊಳಗೆ ಮಿಸುಕಾಡುತ್ತಾ ಸಂಭ್ರಮಿಸುತ್ತಲೇ, ಸೋಶಿಯಲ್ ಮೀಡಿಯಾದಲ್ಲಿ ಸುಭಗರೆಂಬಂತೆ ಪೋಸು ಕೊಟ್ಟಿದ್ದವು. ಇದರಾಚೆಗೆ ಕನ್ನಡದ ನೈಜ ಸಿನಿಮಾ ಪ್ರೇಮಿಗಳೂ ಕೂಡಾ ಹಾಲಿವುಡ್ ಫಾರ್ಮುಲಾವನ್ನು ಎರಕಹೊಯ್ದಂತಿದ್ದ ಆ ಪೋಲಿ ಸೀನುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆ, ತಮ್ಮ ಅಸ್ತ್ರ ಸರಿಯಾದ ಸ್ಥಳಗಳಿಗೆ ಹೆಟ್ಟಿಕೊಂಡು, ಭರ್ಜರಿ ಮೈಲೇಜು ಸಿಕ್ಕ ಖುಷಿಯೊಂದು ಟಾಕ್ಸಿಕ್ ತಂಡವನ್ನು ಆವರಿಸಿಕೊಂಡಿತ್ತು. ಇಂಥಾ ಚರ್ಚೆಗಳ ಹಬೆ ಆರೋ ಮುನ್ನವೇ ಟಾಕ್ಸಿಕ್ ಟೀಸರ್ ಲಾಂಚ್ ಆಗಿದೆ!
ರಾಯನ ಲುಕ್ ರಿವೀಲ್ ಮಾಡಿದ್ದ ಟೀಸರ್ ಬಗ್ಗೆ ಒಂದಷ್ಟು ನಕಾರಾತ್ಮಕ ವಿಮರ್ಶೆಗಳು ಕೇಳಿ ಬಂದಿದ್ದವಲ್ಲಾ? ಅದನ್ನೇ ಅಪಪ್ರಚಾರಕ್ಕೆ ಬಳಸಿಕೊಂಡಿದ್ದ ಬಾಲಿವುಡ್ ಮಂದಿ ಧುರಂಧರ್೨ ಚಿತ್ರವನ್ನು ಮುಂದಿಟ್ಟುಕೊಂಡು ಮೆರೆಯಲು ಹವಣಿಸಿದ್ದರು. ಬೇರೆ ಭಾಷೆಗಳ ಸಿನಿಮಾಗಳ ಗೆಲುವು ಕಂಡು ಬ್ಯಾಕು ಸುಟ್ಟುಕೊಂಡಿದ್ದ ಕೆಲ ಹಿಂದಿವಾಲಾಗಳಂತೂ ಧುರಂಧರ್ ಮುಂದೆ ಟಾಕ್ಸಿಕ್ ಮಣ್ಣುಮಕ್ಕುತ್ತದೆ ಎಂಬರ್ಥದಲ್ಲಿ ಟ್ರೋಲುಗಳನ್ನು ಮಾಡುತ್ತಾ ಸಂಭ್ರಮಿಸಿದ್ದರು. ಇದೀಗ ಬಿಡುಗಡೆಗೊಂಡಿರುವ ಟಾಕ್ಸಿಕ್ ಟೀಸರ್ ತನ್ನ ಕಸುವಿನಿಂದಲೇ ಅದೆಲ್ಲದಕ್ಕೂ ಸೆಡ್ಡು ಹೊಡೆದಿಕದೆ. ಕನ್ನಡದ ಭೂಮಿಕೆಯಲ್ಲಿರೋ ಟಾಕ್ಸಿಕ್ ಟೀಸರ್ ಹವಾ ಕಂಡು ಬಾಲಿವುಡ್ ಮಂದಿ ಅಕ್ಷರಶಃ ಕಂಗಾಲೆದ್ದಿದ್ದಾರೆ. ಅಂಥಾ ಉರಿ ಸಾಮಾಜಿಕ ಜಾಲತಾಣದ ಅಲ್ಲಲ್ಲಿ ಧಗಧಗಿಸುತ್ತಿದೆ.
Toxic Movie Controvercy: ತತ್ತರಿಸಿದ ಹಿಂದಿವಾಲಾಗಳ ಟಾಕ್ಸಿಕ್ ವಾರ್!
ಆದರೆ, ಕನ್ನಡದ ಯಶ್ ನಟಿಸಿರೋ ಈ ಸಿನಿಮಾ ಟೀಸರ್ ಮೂಲಕ ಸೃಷ್ಟಿಸಿರುವ ಕ್ರೇಜ್ ಕನ್ನಡ ಸಿನಿಮಾ ರಂಗದ ಘನತೆ ಗೌರವರಗಳನ್ನು ಮತ್ತಷ್ಟು ಹೆಚ್ಚಿಸಿರೋದು ಸುಳ್ಳಲ್ಲ. ಅಬ್ಬರದ ದೃಷ್ಯಗಳಿಗೆನ ಒತ್ತು ಕೊಡೋ ಭರದಲ್ಲಿ ಕಥಾ ಹಂದರದತ್ತ ಕೌತುಕ ಮೂಡಿಸುವುದರತ್ತ ನಿರ್ದೇಶಕಿ ಗಮನ ಹರಿಸಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇದೂ ಕೂಡಾ ಭಾಷೆಯ ನೆಲೆಯಲ್ಲಿನ ಅಸಮಧಾನದ ಫಲವೆಂಬಂತೆಯೇ ಕಾಣಿಸುತ್ತಿದೆ. ಇದೆಲ್ಲದರಾಚೆಗೆ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಟೀಸರ್ನ ವೀಕ್ಷಣೆಗಳು ಜ್ವರದೋಪಾದಿಯಲ್ಲಿ ಏರಿಕೊಳ್ಳುತ್ತಿದೆ. ಧುರಂಧರ್೨ ಮೂಲಕ ಟಾಕ್ಸಿಕ್ ಅನ್ನು ಮಣಿಸಿ, ಮತ್ತೆ ಭಾರತೀಯ ಸಿನಿಮಾ ರಂಗದ ಮೇಲೆ ಅಧಿಪತ್ಯ ಸಾಧಿಸುವ ಬಾಲಿವುಡ್ ಮಂದಿಯ ಕನಸಿಗೂ ಈ ಟೀಸರ್ ತಣ್ಣೀರೆರಚಿದೆ. ಟಾಕ್ಸಿಕ್ ಅಬ್ಬರದ ನಡುವೆ ಧುರಂಧರ ಮಾಯವಾಗಿ ಬಿಡುವ ಗಾಢ ಭಯವೊಂದು ಬಾಲಿವುಡ್ಡನ್ನು ಆವರಿಸಿಕೊಂಡಿದೆ. ಇದಕ್ಕಿಂತ ದೊಡ್ಡ ಗೆಲುವು ಮತ್ಯಾವುದಿರಲು ಸಾಧ್ಯ?
keywords: toxic, yash, toxic teaser, bollywood, sandalwood

