ಕನ್ನಡ ಚಿತ್ರರಂಗದ ಖ್ಯಾತ ಗೀತರಚನೆಕಾರ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಸಹೋದರನ ಸಿನಿಮಾದ ಮೂಲಕ ಸುದ್ದಿ ಕೇಂದ್ರದಲ್ಲಿದ್ದಾರೆ. ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಹಾಗೂ ಗೌರವ್ ಶೆಟ್ಟಿ ನಾಯಕರಾಗಿ ನಟಿಸಿರುವ ಸೂಪರ್ ಹಿಟ್ ಚಿತ್ರಕ್ಕೆ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ನಾಗೇಂದ್ರ ಪ್ರಸಾದ್ ನಿರ್ವಹಿಸಿದ್ದಾರೆ. ತನ್ನ ಆಂತರ್ಯದ ಗಟ್ಟಿತನದ ಸುಳಿವಿನೊಂದಿಗೂ ಈ ಚಿತ್ರ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಭರ್ಜರಿ ಹಾಸ್ಯದೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗೋ ಸನ್ನಾಹದಲ್ಲಿರುವ ಸೂಪರ್ ಹಿಟ್ ಚಿತ್ರದ ಮೂಲಕ ಅಣ್ಣ ತಮ್ಮನ ಜುಗಲ್ಬಂಧಿಯೊಂದು ಘಟಿಸಿದೆ. ನಿರ್ದೇಶಕ ವಿಜಯಾನಂದ್ಗೆ ಪ್ರಸಿದ್ಧಗೀತರಚನೆಕಾರರಾದ ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಸಂಗೀತದ ಮೂಲಕ ಸಾಥ್ ಕೊಟ್ಟಿರೋದು ವಿಶೇಷ. ಕನ್ನಡ ಚಿತ್ರರಂಗದಲ್ಲಿ ತಮ್ಮ ನಿರ್ದೇಶನ ಮಾಡಿರುವ ಚಿತ್ರಕ್ಕೆ, ಅಣ್ಣ ಸಂಗೀತ ಹಾಗೂ ಸಾಹಿತ್ಯದ ಮೂಲಕ ಸಾಥ್ ಕೊಟ್ಟ ಅಪರೂಪದ ವಿದ್ಯಮಾನವೊಂದಕ್ಕೆ ಸೂಪರ್ ಹಿಟ್ ಚಿತ್ರ ಸಾಕ್ಷಿಯಾಗಿದೆ.
ಅಣ್ಣ ನಾಗೇಂದ್ರ ಪ್ರಸಾದ್ ಅವರ ನೆರಳಿನಲ್ಲಿಯೇ ಸಿನಿಮಾ ಯಾನ ಆರಂಭಿಸಿದ್ದವರು ವಿಜಯಾನಂದ್. ಇದುವರೆಗೂ ಅವರು ಸಾಕಷ್ಟು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಲ್ಲದೇ, ಚಿತ್ರ ಸಾಹಿತಿಯಾಗಿಯೂ ಗಮನ ಸೆಳೆದಿದ್ದಾರೆ. ತಾವೇ ಸ್ವತಃ ಸಾಹಿತ್ಯ ರಚನೆಯ ಛಾತಿ ಹೊಂದಿದ್ದರೂ ತಾನು ನಿರ್ದೇಶನ ಮಾಡೋ ಚಿತ್ರಗಳ ಮೂಲಕ ಹೊಸಬರಿಗೆ ಅವಕಾಶ ಕೊಡಬೇಕೆಂಬ ತುಡಿತ ವಿಜಯಾನಂದ್ ಅವರದ್ದು. ಈ ಹಿಂದೆ ಅವರು ನಿರ್ದೇಶನ ಮಾಡಿದ್ದ ಕೃಷ್ಣ ಟಾಕೀಸ್ನಲ್ಲಿ ಪ್ರಮೋದ್ ಮರವಂತೆಗೆ ಹಾಡು ಬರೆಯೋ ಅವಕಾಶ ಮಾಡಿ ಕೊಟ್ಟಿದ್ದರು. ಸೂಪರ್ ಹಿಟ್ ಚಿತ್ರದಲ್ಲಿಯೂ ಅದನ್ನೇ ಮುಂದುವರೆಸೋ ಆಲೋಚನೆ ಹೊಂದಿದ್ದ ವಿಜಯಾನಂದ್, ಅಣ್ಣನ ಬಳಿಯೂ ಹಾಡು ಬರೆಸುವ ಇರಾದೆ ಹೊಂದಿದ್ದರು.
ಸಿನಿಮಾ ವಿಚಾರದಲ್ಲಿ ಎಲ್ಲ ಬಂಧಗಳಾಚೆ ನಿಂತು ಯೋಚಿಸುವ ನಾಗೇಂದ್ರ ಪ್ರಸಾದ್, ತಮ್ಮ ಹೇಳಿದ ಕಥೆ ಕೇಳಿ ಖುಷಿಗೊಂಡಿದ್ದರಂತೆ. ಆ ಬಲದಿಂದಲೇ ಹಾಡು ಬರೆಯೋದರ ಜೊತೆಗೆ ಸಂಗೀತದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು. ಅದರ ಭಾಗವಾಗಿಯೇ ಒಂದು ಹಾಡಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಒದಗಿಸಿದ್ದಾರೆ. ಒಟ್ಟು ಮೂರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿ, ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರೆ. ವಿಶೇಷವೆಂದರೆ, ಕವಿರತ್ನ ಡಾ.ವಿ ನಾಗೇಂದ್ರ ಪ್ರಸಾದ್ ಒಂದು ಹಾಡಿಗೆ ಸಾಹಿತ್ಯ ಬರೆದಿದ್ದರೆ, ಮತ್ತೆರಡು ಹಾಡುಗಳನ್ನು ಹೊಸಬರಾದ ದೊಡ್ಡಬಸವ ಮತ್ತು ರಾಜು ಎಂಬಿ ಬರೆದಿದ್ದಾರೆ. ಈ ಮೂರೂ ಹಾಡುಗಳನ್ನು ಶಮಿರ್ ಮುಡಿಪು, ಸಚಿನ್ ನಗರ್ಥ, ಚುಟುಚುಟು ಖ್ಯಾತಿಯ ರವೀಂದ್ರ ಸೊರಗಾವಿ ಹಾಡಿದ್ದಾರೆ.
ಈ ಮೂರು ಹಾಡುಗಳಲ್ಲಿ ಒಂದು ಹಾಡು ಈಗಾಗಲೇ ಬಿಡುಗಡೆಗೊಂಡಿದೆ. ಅದು ಈಗಾಗಲೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಪ್ಯಾಥೋ ಸಾಂಗ್ ಸೇರಿದಂತೆ ಇನ್ನೆರಡು ಹಾಡುಗಳು ಇಷ್ಟರಲ್ಲಿಯೇ ಬಿಡುಗಡೆಗೊಳ್ಳಲಿವೆ. ಒಟ್ಟಾರೆಯಾಗಿ, ಈ ಸಿನಿಮಾ ಮೂಲಕ ಅಣ್ಣ ತಮ್ಮನ ಜುಗಲ್ಬಂಧಿ ನಡೆದಿದೆ. ಅಹೋರಾತ್ರಿ ಶ್ರಮವಹಿಸಿರುವ ನಾಗೇಂದ್ರ ಪ್ರಸಾದ್ ಅವರು ತಮ್ಮನ ಚಿತ್ರವೆಂಬ ಸಲುಗೆಯಾಚೆಗೆ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಒಂದು ಮಹತ್ವದ ಪಾತ್ರಕ್ಕೂ ಜೀವ ತುಂಬಿದ್ದಾರೆ. ವಿಜಯಲಕ್ಷ್ಮಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗೌರವ್ ಶೆಟ್ಟಿ ಮತ್ತು, ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ.ಆ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಸಿನಿಮಾ ಫೆಬ್ರವರಿ ೨೭ರಂದು ರಾಜ್ಯಾದ್ಯಂತ ಇನ್ನೂರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಗಾಣಲಿದೆ.
keywords: super hit, dr v nagendraprasad, vijayanand, gilli nata, sandalwood

