ಕೆಲವೊಂದು ಸಿನಿಮಾಗಳ ಪಾಲಿಗೆ ಕಾಲವೆಂಬೋ ಕಾಲವೇ ಸರಿಕಟ್ಟಾಗಿ ಸಾಥ್ ಕೊಟ್ಟು ಬಿಡೋದಿದೆ. ತಿಂಗಳಿಂದೀಚೆಗೆ ಸುದ್ದಿ ಕೇಂದ್ರದಲ್ಲಿರುವ `ಸೂಪರ್ ಹಿಟ್’ ಚಿತ್ರದ ಪಾಲಿಗೂ ಅಂಥಾದ್ದೇ ಒಂದು ಪೂರಕ ಸನ್ನಿವೇಶ ತಂತಾನೇ ಕೂಡಿಬಂದಿದೆ. ವಿಜಯಾನಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಗಿಲ್ಲಿ ನಟ ನಾಯಕನಾಗಿ ನಟಿಸಿದ್ದಾರೆ. ಬಹುಶಃ ಸದರಿ ಸಿನಿಮಾ ಶುರುವಾತಿನಲ್ಲಿ ಗಿಲ್ಲಿ ಬಿಗ್ ಬಾಸ್ಗೆ ಹೋಗೋದರ ಬಗೆಗಾಗಲಿ, ಆತ ಬಿಗ್ ಬಾಸ್ ಶೋ ಗೆದ್ದು ಈ ಪರಿಯಲ್ಲಿ ಜನಪ್ರಿಯತೆ ಗಳಿಸುತ್ತಾನೆಂಬ ಸಣ್ಣ ಕಲ್ಪನೆಯಾಗಲಿ ಚಿತ್ರತಂಡಕ್ಕೆ ಇರಲಿಕ್ಕಿಲ್ಲ. ಸರಿಯಾಗಿ ಗಿಲ್ಲಿ ಬಿಗ್ ಬಾಸ್ ಅಡ್ಡೆಗೆ ತೆರಳಿ ಹವಾ ಸೃಷ್ಟಿಸುವ ಹೊತ್ತಿಗೆಲ್ಲ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯ ಮುಗಿಸಿಕೊಂಡಿದ್ದ ಸೂಪರ್ ಹಿಟ್ ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಅಚ್ಚುಕಟ್ಟಾದೊಂದು ಪತ್ರಿಕಾಗೋಷ್ಠಿಯಲ್ಲಿ, ಅರ್ಥವತ್ತಾದ ಟೀಸರ್ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕ ಘೋಶಣೆ ಮಾಡಿದೆ!
ಅದರನ್ವಯ ಹೇಳೋದಾದರೆ, ಇದೇ ಫೆಬ್ರವರಿ ೨೭ರಂದು ಸೂಪರ್ ಹಿಟ್ ಚಿತ್ರ ಕರ್ನಾಟಕದಾದ್ಯಂತ ಇನ್ನೂರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಗಾಣಲಿದೆ. ಬಿಡುಗಡೆ ದಿನಾಂಕ ಅನೌನ್ಸ್ ಮಾಡಿದ ಈ ವೇದಿಕೆಯಲ್ಲಿ ನಿರ್ದೇಶಕ ವಿಜಯಾನಂದ್, ನಿರ್ಮಾಪಕ ಜಿ. ಉಮೇಶ್, ಸಾಧು ಕೋಕಿಲಾ, ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್, ಗೌರವ್ ಶೆಟ್ಟಿ, ಶ್ವೇತಾ ಸೇರಿಕದಂತೆ ಚಿತ್ರತಂಡ ಹಾಜರಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಕ, ನಾಗೇಂದ್ರ ಪ್ರಸಾದ್ ಅವರ ಸಹೋದರರಾದ ವಿಜಯಾನಂದ್, ಸಿನಿಮಾ ಕುರಿತಾದ ಒಂದಷ್ಟು ಅಚ್ಚರಿಗಳನ್ನು ತೆರೆದಿಟ್ಟಿದ್ದಾರೆ. ಆರಂಭದಿಂದ ಇಲ್ಲಿಯವರೆಗೂ ಹೂವೆತ್ತಿಟ್ಟಷ್ಟೇ ಸರಾಗವಾಗಿ ಕೆಲಸ ಕಾರ್ಯ ಮುಗಿಸಿಕೊಂಡ ಪರಿಯನ್ನು ವಿವರಿಸಿದ ಅವರು, ಈ ಸಿನಿಮಾ ಜನಮನ ಗೆಲ್ಲವ ಗಾಢ ಭರವಸೆ ವ್ಯಕ್ತಪಡಿಸಿದ್ದಾರೆ. ನೂರು ದಿನಗಳ ಕಾಲ ಯಶಸ್ವೀ ಪ್ರದರ್ಶನ ನೀಡಿ ಹೆಸರಿಗೆ ತಕ್ಕಂತೆ ಸೂಪರ್ ಹಿಟ್ಟಾಗಲು ಪ್ರೇಕ್ಷಕರೆಲ್ಲ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!
ಇದೇ ವೇದಿಕೆಯಲ್ಲಿ ಒಂದು ಸಂಭ್ರಮದ ಸಂಗತಿಯನ್ನು ವಿಜಯಾನಂದ್ ಹಂಚಿಕೊಂಡಿದ್ದಾರೆ. ಹೊಸಾ ಸಂಸ್ಥೆಯೊಂದು ಸೂಪರ್ ಹಿಟ್ ಚಿತ್ರದ ಓಟಿಟಿ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದೆ ಎಂಬುದು ಅದರ ಸಾರಾಂಶ. ಈ ಮೂಲಕ ಒಟ್ಟಾರೆ ಸಿನಿಮಾದೊಳಗಿನ ಕಸುವಿನ ಬೆಗೆಗೊಂದು ಸ್ಪಷ್ಟ ಚಿತ್ರಣ ಪ್ರೇಕ್ಷಕರತ್ತ ದಾಟಿಕೊಂಡಂತಾಗಿದೆ. ನಂತರ ಸಾಧು ಕೋಕಿಲಾ ಮಾತನಾಡುತ್ತಾ, ಇಂಥಾ ವೇದಿಕೆಗಳಲ್ಲಿನ ಮಾತುಗಖಳಾಚೆಗೆ ಹೊರಜಗತ್ತಿನಲ್ಲಿ ಸಿನಿಮಾವೊಂದನ್ನು ಜನರಿಗೆ ಹತ್ತಿರಾಗಿಸುವ ಪಟ್ಟುಗಳು ಅದೆಷ್ಟು ಅನಿವಾರ್ಯ ಎಂಬುದನ್ನು ತಮ್ಮದೇ ಶೈಲಿಯಲ್ಲಿ ಚಿತ್ರತಂಡಕ್ಕೆ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಜೊತೆಗೆ ಗಿಲ್ಲಿಗೂ ಒಂದಷ್ಟು ಕಿವಿಮಾತುಗಳನ್ನು ಹೇಳಿದ್ದಾರೆ.
ತನ್ನ ತಮ್ಮನ ಚಿತ್ರಕ್ಕೆ ಆರಂಭದಿಂದಲೂ ಸಾಥ್ ಕೊಡುತ್ತಾ ಬಂದಿರುವ ಡಾ. ವಿ. ನಾಗೇಂದ್ರ ಪ್ರಸಾದ್ ಸೂಪರ್ ಹಿಟ್ ಚಿತ್ರದ ಸಂಗೀತ ಹಾಗೂ ಸಾಹಿತ್ಯದ ಜೊತೆಗೆ ಒಂದು ಮಹತ್ವದ ಪಾತ್ರಕ್ಕೂ ಜೀವ ತುಂಬಿದ್ದಾರೆ. ಒಟ್ಟಾರೆ ಸಿನಿಮಾ ಮೂಡಿ ಬಂದಿರೋ ರೀತಿಯನ್ನು ಇತ್ತೀಚೆಗಷ್ಟೇ ನೋಡಿರುವ ಅವರು, ಈ ಸಿನಿಮಾ ಜನಮನ ಗೆಲ್ಲುತ್ತದೆಂಬ ಭರವಸೆಯ ಮಾತುಗಳನ್ನಾಡಿದ್ದಾರೆ. ಇದೇ ಹೊತ್ತಿನಲ್ಲಿ ಗಿಲ್ಲಿಗೂ ಒಂದಷ್ಟು ಬುದ್ಧಿಮಾತುಗಳನ್ನು ಹೇಳಿದ್ದಾರೆ. ಏನೇನೂ ಅಲ್ಲದ ಘಳಿಗೆಯಲ್ಲಿ ಕೆಲಸ ಕೊಟ್ಟವರನ್ನು ಗೌರವಿಸುತ್ತಲೇ, ಅಂಥಾ ಸಿನಿಮಾಗಳಿಗೆ ತನ್ನದೇ ಮಿತಿಯಲ್ಲಿ ಪ್ರಚಾರ ನೀಡುವಂತೆ ಗಿಲ್ಲಿಗೆ ಮನವರಿಕೆ ಮಾಡಿ ಕೊಟ್ಟರು. ಇನ್ನುಳಿದಂತೆ ಪ್ರಥಮ ಹೆಜ್ಜೆಯಲ್ಲಿಯೇ ಗೆಲುವಿನ ಸೂಚನೆ ಸಿಗುತ್ತಿರುವ ಖುಷಿಯಲ್ಲಿರುವ ನಿರ್ಮಾಪಕ ಜಿ. ಉಮೇಶ್ ತಮ್ಮ ಸಿನಿಮಾ ಕನಸು, ಈ ಚಿತ್ರ ನಿರ್ಮಾಣದ ಅನುಭವ, ಆತ್ಮತೃಪ್ತಿಯ ಬಗ್ಗೆ ಮಾತಾಡುತ್ತಲೇ ಸಿನಿಮಾ ನೋಡಿ ಹರಸುವಂತೆ ಪ್ರೇಕ್ಷಕರನ್ನು ಕೇಳಿಕೊಂಡಿದ್ದಾರೆ.
ವಿಜಯಲಕ್ಷ್ಮಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗೌರವ್ ಶೆಟ್ಟಿ ಮತ್ತು, ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ.ಆ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಸಿನಿಮಾ ಫೆಬ್ರವರಿ ೨೭ರಂದು ತೆರೆಗಾಣಲಿದೆ. ಈ ಮೂಲಕ ನಗೆಹಬ್ಬವೊಂದು ಚಾಲೂ ಆಗಲಿದೆ.
keyword: gilli nata, biggboss12 winner, vijayananda, sandalwood, kfi

