ದಳಪತಿ ವಿಜಯ್ ಅದ್ಯಾವ ಘಳಿಗೆಯಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟನೋ, ಆ ಕ್ಷಣದಿಂದಲೇ ಆತನ ನೆಮ್ಮದಿ ಇಂಚಿಂಚಾಗಿ ಕಳಚಿ ಬೀಳಲಾರಂಭಿಸಿದೆ. ಸಾಲು ಸಾಲು ಆಘಾತಗಳಿಂದ ಕಂಗಾಲಾಗಿರುವ ದಳಪತಿಯ ವಿರುದ್ಧ ವಿರೋಧಿ ಪಾಳೆಯ ಸಂದಿಗೊಂದಿಗಳಿಂದ ನುಸುಳಿ ಬಂದಿ ಬೊಬ್ಬಿರಿಯಲಾರಂಭಿಸಿವೆ. ಪ್ರತೀ ಸಭೆಗಳಲ್ಲಿ ಕಿಕ್ಕಿರಿದು ಸೇರುತ್ತಿರೋ ಜನಸ್ತೋಮವನ್ನು ನೋಡಿ ತಮಿಳುನಾಡಿನ ರಾಜಕಾರಣದಲ್ಲಿ ಸಂಚಲನವೇ ಸೃಷ್ಟಿಯಾಗುತ್ತಿದೆ. ಇದೀಗ ಚಿತ್ರರಂಗದ ಭಾಗವಾಗಿರುವ, ರಾಜಕಾರಣದಲ್ಲಿ ಸಕ್ರಿಯರಾಗಿರುವ ನಟರೂ ಕೂಡಾ ದಳಪತಿಯನ್ನು ಮಾತಿನಲ್ಲಿಯೇ ತಿವಿಯಲಾರಂಭಿಸಿದ್ದಾರೆ. ಅಂಥಾ ಪಲ್ಲಟವೊಂದು ಶುರುವಾಗಿರೋದು ಬಾಹುಬಲಿಯ ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್ ಕಡೆಯಿಂದ!
ಸತ್ಯರಾಜ್ ನಟನಾಗಿ ನೆಲೆ ಕಂಡುಕೊಳ್ಳೋದರ ಜೊತೆ ಜೊತೆಗೇ ನೇರ ನಿಷ್ಠುರವಾದ ರಾಜಕೀಯ, ಸಾಮಾಜಿಕ ನಿಲುವುಗಳನ್ನು ಹೊಂದಿರುವಾತ. ಸಾಹಿತ್ಯ ಸೇರಿದಂತೆ ಎಲ್ಲದರಲ್ಲಿಯೂ ತಿಳಿವಳಿಕೆ ಹೊಂದಿರುವ ಸತ್ಯರಾಜ್, ಆಗಾಗ ತನ್ನ ಖಡಕ್ಕಾದ ವಿಚಾರಧಾರೆಗಳ ಮೂಲಕ ವಿವಾದವೆಬ್ಬಿಸೋದೂ ಇದೆ. ಇದೀಗ ಅದೇ ಸತ್ಯರಾಜ್ ಡಿಎಂಕೆ ಪಕ್ಷದ ವೇದಿಕೆಯೊಂದರಲ್ಲಿ ಪರೋಕ್ಷವಾಗಿ ದಳಪತಿಯ ವಿರುದ್ಧ ಕತ್ತಿ ಝಳಪಿಸಿದ್ದಾರೆ. ನಟರ ಮಾತುಗಳನ್ನು ಕೇಳೋದರಿಂದ ಜ್ಞಾನ ವೃದ್ಧಿಸೋದಿಲ್ಲ. ಅಂಥವರನ್ನು ನೋಡಲೆಂದು ಜನ ಸೇರುತ್ತಾರಷ್ಟೆ. ಆದರೆ ಮಂದಿ ಐದು ವರ್ಷದ ಹಿಂದೆ ವಾತಾವರಣ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಪರಾಮರ್ಶಿಸುವ ಶಕ್ತಿ ಹೊಂದಿದೆ ಎಂದಿದ್ದಾರೆ.
ಹೀಗೆ ಹೆಸರು ಹೇಳದೆಯೇ ಕಟ್ಟಪ್ಪ ಕತ್ತಿ ಝಳಪಿಸಿರೋದು ದಳಪತಿ ವಿಜಯ್ ವಿರುದ್ಧವೇ ಅನ್ನೋದು ತಮಿಳುನಾಡಿನ ಮಂದಿಗೆ ಅರ್ಥವಾಗಿದೆ. ಕಟ್ಟಪ್ಪನ ಈ ಮಾತುಗಳ ವಿರುದ್ಧ ಅದಾಗಲೇ ವಿಜಯ್ ವೀರಾಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಯುದ್ಧ ಆರಂಭಿಸಿದ್ದಾರೆ. ಇದೆಲ್ಲದರಾಚೆಗೆ ಸಾಮಾಜಿಕವಾಗಿ, ಖಾಸಗಿಯಾಗಿ, ನಟನಾಗಿ ಅದೇನೇ ಸವಾಲುಗಳು ಬಂದರೂ ದಳಪತಿಯ ಗಮನ ಮುಂಬರುವ ವಿಧಾನಸಭಾ ಚುನಾವಣೆಯತ್ತ ಕೇಂದ್ರೀಕರಿಸಿಕೊಂಡಿದೆ. ಈಗ ಇರುವ ಕ್ರೇಜ್ ಗಮನಿಸಿದರೆ ಮುಂದಿನ ಚುನಾವಣೆಯಲ್ಲಿ ಕ್ರಾಂತಿಕಾರಕ ಫಲಿತಾಂಶ ಬರಬಹುದಾದ ಅಲಕ್ಷಣಗಳು ದಟ್ಟವಾಗಿವೆ!
keywords: sathyaraj, thalapathy vijay, tamilnad politics

