ಜೈಲರ್ ಸರಣಿಯ ಗೆಲುವಿನಿಂದ ಮತ್ತೆ ಲಕಲಕಿಸಿದ್ದ ರಜನಿಗೆ ಕೂಲಿಯ ದೆಸೆಯಿಂದ ಒಂದಷ್ಟು ಹಿನ್ನಡೆ ಉಂಟಾಗಿದೆ. ರಜನೀಕಾಂತ್ ಸಿನಿಮಾ ಅಂದಮೇಲೆ ಒಂದು ಮಟ್ಟದ ಗಳಿಕೆಗೆ ತತ್ವಾರವಿರೋದಿಲ್ಲ. ಹಾಕಿದ ಬಂಡವಾಳಕ್ಕಿಂತಲೂ ಒಂದಷ್ಟು ಹೆಚ್ಚು ಗಳಿಕೆಯಾದ ಮಾತ್ರಕ್ಕೆ ರಜನಿ ಸಿನಿಮಾ ಗೆದ್ದಿತೆಂದು ಹೇಳಲಾಗೋದಿಲ್ಲ. ಅಭಿಮಾನದಾಚೆಗೂ ಸರ್ವರೂ ಸಂಭ್ರಮಿಸಿ ಕೊಂಡಾಡುವಂತಾದರೆ ಮಾತ್ರವೇ ರಜನಿಯಂಥಾ ಸೂಪರ್ ಸ್ಟಾರ್‌ಗಳ ಸಿನಿಮಾ ಗೆದ್ದಿತೆಂದು ಅಂದುಕೊಳ್ಳಬಹುದು ಆ ನಿಟ್ಟಿನಲ್ಲಿ ನೋಡಹೋದರೆ ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಚಿತ್ರ ಹೀನಾಯವಾಗಿ ಸೋತಿತ್ತು!

ಅಚ್ಚರಿಯೆಂದರೆ, ಇಂಥಾ ಹಿನ್ನಡೆಯ ನಂತರವೂ ಲೋಕೇಶ್ ಕನಗರಾಜ್‌ಗೆ ರಜನಿ ಮತ್ತೊಂದು ಅವಕಾಶ ಕೊಟ್ಟಿದ್ದರೆಂಬ ಗುಲ್ಲೆದ್ದಿತ್ತು. ಅದರ ಹಿಂದೆ ಸತ್ಯವೂ ಇತ್ತು. ಕೂಲಿ ನೀರಸವಾಗಿ ಮೂಡಿ ಬಂದಿದೆ ಅಂದ ಮಾತ್ರಕ್ಕೆ ಅದ್ಭುತ ಸಿನಿಮಾ ಮಾಡೋ ಕಸುವನ್ನು ಲೋಕಿ ಕಳೆದುಕೊಂಡಿದ್ದಾರೆಂದು ತೀರ್ಮಾನಿಸುವಂತಿಲ್ಲ. ಇಂಥಾ ಹತ್ತಾರು ಸೋಲು ಕಂಡಿರುವ ರಜನಿ, ಈ ಎಳೇ ಹುಡುಗಮನಿಗೆ ಮತ್ತೊಂದು ಅವಕಾಶ ಕೊಟ್ಟಿರೋದು ಅನೇಕರಿಗೆ ಸರಿಯೆನ್ನಿಸಿತ್ತು. ಲೋಕೇಶ್ ಪಾಲಿಗೂ ಕೂಡಾ ಅದು ಒಂದು ಸೋಲನ್ನು ನೀಗಿಕೊಳ್ಳುವ ಅವಕಾಶದಂತಾಗಿತ್ತು. ಈ ಕಾರಣದಿಂದಲೇ ಆತ ಹೊಸಾ ಪ್ರಾಜೆಕ್ಟುಗಳತ್ತ ಗಮನ ಹರಿಸದೆ ರಜನಿ ಜೊತೆಗಿನ ಚಿತ್ರಕ್ಕಾಗಿ ತಯಾರಿ ಆರಂಭಿಸಿದ್ದರು.

ಆದರೀಗ ಲೋಕೇಶ್ ಕನಗರಾಜ್ ಸಿದ್ಧಪಡಿಸಿದ್ದ ಕಥೆಗೆ ರಜನೀಕಾಂತ್ ಒಲ್ಲೆ ಅಂದಿದ್ದಾರೆಂಬ ಸುದ್ದಿಯೊಂದು ಜಾಹೀರಾಗಿದೆ. ಲೋಕೇಶ್ ಕೂಲಿಗೂ ಹಿಂದೆಯೇ ಬಿಗ್ ಬಜೆಟ್ ಕಥೆಯೊಂದನ್ನು ರಜನಿಗೆ ಹೇಳಿದ್ದರಂತೆ. ಅದರಲ್ಲೊಂದಷ್ಟು ಬದಲಾವಣೆ ಸೂಚಿಸಿದ್ದ ರಜನಿಕೂಲಿಯ ನಂತರ ಅದನ್ನ ಕೈಗೆತ್ತಿಕೊಳ್ಳುವ ಭರವಸೆ ಕೊಟ್ಟಿದ್ದರಂತೆ. ಇದೀಗ ಅದೇ ಕಥೆಗೆರ ಪಾಲೀಶು ಮಾಡಿದ ಲೋಕೇಶ್ ರಜನಿಗೆ ಹೇಳಿದ್ದಾರೆ. ಇದನ್ನು ಕೇಳಿದ ತಲೈವಾ ಆಪ್ತ ಬಳಗಕ್ಕೂ ಮತ್ತೊಂದು ಕೂಲಿಯಂಥಾ ಸಿನಿಮಾವಾಗುವ ಸೂಚನೆ ಸಿಕ್ಕಿದೆ. ಈ ಕಾರಣದಿಂದಲೇ ಆ ಕಥೆ ಬೇಡ ಅಂದಿದ್ದಾರಂತೆ ರಜನಿ. ಈ ಆಘಾತದಿಂದ ಕಂಗಾಲಾಗಿರವ ಲೋಕೇಶ್ ಕನಗರಾಜ್ ಸದ್ಯ ಕೈಥಿ೨ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

