ರಜನೀಕಾಂತ್ ಅಭಿನಯದ ಕೂಲಿ ಚಿತ್ರವೀಗ ಭರ್ಜರಿ ಕಲೆಕ್ಷನ್ನು ಮಾಡುತ್ತಾ ಮುಂದುವರೆಯುತ್ತಿದೆ. ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಪಕ್ಕಾ ಆಕ್ಷನ್ ಪ್ಯಾಕೇಜಿನಂತೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ನಿರ್ದೇಶನ ವಿಭಾಗದಲ್ಲಿ ಅದೇಕೋ ನೈಜವಾದ ಲೋಕೇಶ್ ಕನಕರಾಜ್ ಫ್ಲೇವರ್ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯ ಪ್ರೇಕ್ಷಕರಲ್ಲಿದೆ. ಆದರೆ, ಪಕ್ಕಾ ರಜನೀ ಶೈಲಿಯಲ್ಲಿ ಕೂಲಿ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಸೃಷ್ಟಿಸುತ್ತಿರೋದು ಸುಳ್ಳಲ್ಲ. ಹೈಪಿಗೆ ಒಂದಷ್ಟು ಹತ್ತಿರಾಗಿ ಮೂಡಿ ಬಂದಿದ್ದರೂ ದೊಡ್ಡ ಮಟ್ಟದಲ್ಲಿ ಹಿಟ್ ಆಗೋ ಅವಕಾಶದಿಂದ ಕೂಲಿ ವಂಚಿತವಾದಂತಿದೆ. ಇದೇ ಹೊತ್ತಿನಲ್ಲಿ ಕೂಲಿ ನಿರ್ದೇಶಕ ಲೋಕೇಶ್ ಕನಕರಾಜ್ ಮೇಲೆ ನಂಬಿಕೆಯಿಟ್ಟು ಮತ್ತೊಂದು ದೊಡ್ಡ ಸಿನಿಮಾಗೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಇದು ನಿಜಕ್ಕೂ ವಿಶೇಷವಾದ ಸಿನಿಮಾ. ಯಾಕೆಂದರೆ, ಇಲ್ಲಿ ರಜನೀಕಾಂತ್ ಮತ್ತು ಕಮಲ್ ಹಾಸನ್ ಒಟ್ಟಾಗಿ ನಟಸಲಿದ್ದಾರೆ. ಇದೊಂದು ರೀತಿಯಲ್ಲಿ ಅಪೂರ್ವ ಸಂಗಮ ಅನ್ನಲಡ್ಡಿಯಿಲ್ಲ. ಭರ್ತಿ ನಾಲಕ್ಕು ದಶಕಗಳ ನಂತರ ಈ ಇಬ್ಬರು ನಟರು ಒಂದೇವ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆಂದರೆ, ಅದು ಸಿನಿಮಾ ಪ್ರೇಮಿಗಳ ಪಾಲಿಗೆ ಪಕ್ಕಾ ಥ್ರಿಲ್ಲಿಂಗ್ ವಿಚಾರ. ೧೯೭೯ರಲ್ಲಿ ಅಲ್ಲಾವುದ್ದೀನಮ್ ಅಲ್ಬೂತ ವಿಲಕ್ಕುಮ್ ಎಂಬ ಸಿನಿಮಾದಲ್ಲಿ ರಜನಿ ಮತ್ತು ಕಮಲ್ ಜೊತೆಯಾಗಿ ನಟಿಸಿದ್ದರು. ಅದೇ ಕೊನೆ; ಇಂದಿನವರೆಗೂ ಈ ಜೋಡಿ ತಾರೆಯರನ್ನು ಒಟ್ಟಾಗಿ ನೋಡುವ ಭಾಗ್ಯ ಕೂಡಿ ಬಂದಿರಲಿಲ್ಲ. ಲೋಕೇಶ್ ಕನಕರಾಜ್ ಅದನ್ನು ಸಾಧ್ಯವಾಗಿಸುವ ಹೊಸ್ತಿಲಿನಲ್ಲಿದ್ದಾರೆ.
ಇದು ಗ್ಯಾಂಗ್‌ಸ್ಟರ್‌ಗಳ ಕಥೆಯಾಧಾರಿತ ಸಿನಿಮಾ. ಲೋಕೇಶ್ ಕನಕರಾಜ್ ಕೊರೋನಾ ಕಾಲದಲ್ಲಿಯೇ ಈ ಕಥೆಯನ್ನು ಸಿದ್ಧಗೊಳಿಸಿದ್ದರಂತೆ. ಆ ಕಥೆ ಸಿದ್ಧಗೊಳ್ಳುವ ಹಾದಿಯಲ್ಲಿಯೇ ರಜನಿ ಮತ್ತು ಕಮಲ್ ಜೊತೆಯಾಗಿ ನಟಿಸಬೇಕೆಂಬುದು ಲೋಕಿ ಕನಸಾಗಿತ್ತು. ಕೂಲಿ ಸಿನಿಮಾ ಸಂದರ್ಭದಲ್ಲಿಯೇ ರಜನಿ ಬಳಿ ಲೋಕೇಶ್ ಈ ಬಗ್ಗೆ ಪ್ರಸ್ತಾಪವಿಟ್ಟಿದ್ದರಂತೆ. ಆ ಘಳಿಗೆಯಲ್ಲಿಯೇ ಮೊದಲು ಕೂಲಿ ಮುಗಿಸಿಕೊಂಡು ಆ ನಂತರ ಅದರ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ತಲೈವಾ ಹೇಳಿದ್ದರು. ಇದೀಗ ಮತ್ತೆ ರಜನಿ ಚಿತ್ರ ಆ ಪ್ರಾಜೆಕ್ಟಿನತ್ತ ಹೊರಳಿಕೊಂಡಿದೆ. ಎಲ್ಲವೂ ಈಗ ಮಾತುಕತೆಯ ಹಂತದಲ್ಲಿದೆ. ಅದಾದೇಟಿಗೆ ಅಧಿಕೃತ ಮಾಹಿತಿಗಳು ಜಾಹೀರಾಗಲಿವೆ.