ಈವತ್ತಿಗೆ ಪ್ಯಾನಿಂಡಿಯಾ ಮಟ್ಟದಲ್ಲಿ ಬಹುತೇಕ ಭಾಷೆಗಳ ಚಿತ್ರರಂಗಗಳು ಸದ್ದು ಮಾಡುತ್ತಿವೆ. ಹಲವಾರು ಉತ್ಕೃಷ್ಟ ತಂತ್ರಜ್ಞಾನಗಳಿಗೆ ಸಿನಿಮಾ ಜಗತ್ತು ತೆರೆದುಕೊಂಡಿದೆ. ಒಂದು ಕಾಲದಲ್ಲಿ ಕೆಲ ಸಿನಿಮಾಗಳೇ ವೈಜ್ಞಾನಿಕ ವಿಚಾರಧಾರೆಗಳಿಗೆ ತೆರೆದುಕೊಂಡು ಮೌಢ್ಯ ನಿವಾರಣೆಗೆ ಪ್ರಯತ್ನಿಸಿದ್ದೂ ಇದೆ. ಇಂಥಾ ಭಾರತೀಯ ಸಿನಿಮಾ ರಂಗವನ್ನು ಈವತ್ತಿಗೂ ಮೌಢ್ಯಗಳು ಒಳಗಿಂದೊಳಗೇ ಆಳುತ್ತಿದೆ ಅಂದರೆ ಅಚ್ಚರಿಯಾಗದಿರೋದಿಲ್ಲ. ಹಾಗಂದಾಕ್ಷಣ ಮುಹೂರ್ತ ಸಮಾರಂಭ ಮುಂತಾದವುಗಳಲ್ಲಿ ನಡೆಯೋ ಪೂಜೆ ಪುನಸ್ಕಾರಗಳ ವಿಚಾರ ಅಂದುಕೊಳ್ಳುವಂತಿಲ್ಲ. ಅದೇನು ಮೌಢ್ಯ ಅನ್ನಲಾಗೋದಿಲ್ಲ. ಈಗ ಹೇಳ ಹೊರಟಿರೋದು ಚಿತ್ರರಂಗ ಈವತ್ತಿಗೂ ನೆಚ್ಚಿಕೊಂಡಿರುವ ಚಿತ್ರವಿಚಿತ್ರವಾದ ಮೂರ್ಖ ನಂಬಿಕೆಗಳ ಬಗ್ಗೆ!
ಇಲ್ಲಿ ಒಂದೆರಡು ಸೋಲುಗಳೆದುರಾದರೂ ಅಂಥವರನ್ನು ಐರನ್ ಲೆಗ್ ಅಂತೆಲ್ಲ ಮೂದಲಿಸಲಾಗುತ್ತೆ. ನಾಯಕ ನಟರು ಇಂಥಾ ಮೌಢ್ಯದಿಂದ ಹೇಗೋ ಬಚಾವಾಗುತ್ತಾರೆ. ಆದರೆ, ಅದರ ನೇರ ಪರಿಣಾಮವಾಗುತ್ತಿರೋದು ನಟಿಯರ ಮೇಲೆ. ಇದೆಲ್ಲವನ್ನೂ ಹೇಳಲು ಕಾರಣವಾಗಿರೋದು ಮಂಗಳೂರು ಹುಡುಗಿ ಪೂಜಾ ಹೆಗ್ಡೆ ಈವತ್ತಿಗೆ ತಲುಪಿಕೊಂಡಿರುವ ಹೀನಾಯ ಸ್ಥಿತಿ. ಆಕೆ ಈಗೊಂದಷ್ಟು ವರ್ಷಗಳಿಂದ ನಟಿಸಿದ ಚಿತ್ರಗಳೆಲ್ಲ ಸೋಲು ಕಂಡು ಕಂಗಾಲಾಗಿದ್ದಾಳೆ. ಈ ಕಾರಣದಿಂದಲೇ ಕಳೆದೊಂದು ವರ್ಷದಿಂದ ಅವಕಾಶಗಳಿಲ್ಲದೆ ಪರಿತಪಿಸುವಂತಾಗಿದೆ. ಒಂದಷ್ಟು ಸಿನಿಮಾಗಳಲ್ಲಿ ಪೂಜಾ ನಾಯಕಿ ಅಂತ ಆರಂಭದಲ್ಲಿ ಸುದ್ದಿಯಾದರೂ ಕೂಡಾ ಕಡೇ ಕ್ಷಣದಲ್ಲಿ ಅವಕಾಶ ಕೈತಪ್ಪುತ್ತಿದೆ. ಇದೀಗ ಮಲೆಯಾಳಂ ಚಿತ್ರದಲ್ಲೂ ಪೂಜಾಗೆ ಅಂಥಾದ್ದೇ ಆಘಾತ ಎದುರಾಗಿದೆ.
ಪೂಜಾ ಹೆಗ್ಡೆ ದುಲ್ಕರ್ ಸಲ್ಮಾನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಳೆಂಬ ಸುದ್ದಿಯೊಂದು ಇತ್ತೀಚೆಗೆ ಹರಿದಾಡಿತ್ತು. ಆದರೆ, ಅದರ ಬೆನ್ನಲ್ಲಿಯೇ ಆಕೆ ಆ ಸಿನಿಮಾದಿಂದಲೂ ಹೊರ ಬಂದಿದ್ದಾಳೆ. ಅದಕ್ಕೇನು ಕಾರಣ ಅಂತ ಹುಡುಕ ಹೋದರೆ, ಎದುರಾಗೋದು ಮತ್ತದೇ ಮೌಢ್ಯ. ಪೂಜಾಳನ್ನು ನಾಯಕಿಯನ್ನಗಿಸಿಕೊಂಡು ಸಿನಿಮಾ ಮಾಡಿದರೆ ಬರಖತ್ತಾಗೋದಿಲ್ಲ ಎಂಬ ಭಯದಿಂದಲೇ ಚಿತ್ರತಂಡ ಪೂಜಾಗೆ ದೋಖಾ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ನಿಜವೇ ಆಗಿದ್ದರೆ, ಮಲೆಯಾಳಂ ಚಿತ್ರರಂಗದ ಮಂದಿಗೆ ಮೂರ್ಖರೆಂದೇ ಅರ್ಥ. ಪೂಜಾ ಈ ಹಿಂದೆ ನಟಿಸಿದ್ದ ಸಿನಿಮಾಗಳು ಸೋಲಲು ಸಾವಿರ ಕಾರಣಗಳಿದ್ದಾವೆ. ಆಕೆಯ ಭಾಗವನ್ನು ಪೂಜಾ ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾಳೆ. ಹಾಗಿದ್ದರೂ ಸಿನಿಮಾ ಸೋಲಿಗೆ ಪೂಜಾಳನ್ನು ಮಾತ್ರವೇಧ ಹೊಣೆಯಾಗಿಸೋದು ವಿಕೃತಿಯಲ್ಲದೆ ಬೇರೇನೂ ಅಲ್ಲ.