ಮಾಡೆಲಿಂಗ್ ಜಗತ್ತಿನಿಂದ ಬಂದು ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ನಟಿಯರ ಸಾಲಿನಲ್ಲಿ ಸೇರ್ಪಡೆಗೊಳ್ಳುವವರು ನಿಮಿಕಾ ರತ್ನಾಕರ್. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ನಿಮಿಕಾ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆದದ್ದು ಕ್ರಾಂತಿ ಚಿತ್ರ ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕ. ಈವತ್ತಿಗೂ ಸ್ಯಾಂಡಲ್ವುಡ್ ಪುಷ್ಪವತಿ ಅಂತಲೇ ಕರೆಸಿಕೊಳ್ಳುವ ನಿಮಿಕಾಗೆ ಮದುವೆ ಫಿಕ್ಸಾಗಿದೆ. ಈ ವಿಚಾರವನ್ನು ಖುದ್ದು ನಿಮಿಕಾ ಅಧಿಕೃತವಾಗಿಯೇ ಹಂಚಿಕೊಂಡಿದ್ದಾರೆ.
ಅಂದಹಾಗೆ, ನಿಮಿಕಾ ಮದುವೆಯಾಗುತ್ತಿರುವ ವರ ಮುಂಬೈ ಮೂಲದ ಉದ್ಯಮಿ. ಇದೇ ಏಪ್ರಿಲ್ ಆರನೇ ತಾರೀಕಿನಂದು ಮದುವೆಗೆ ಮುಹೂರ್ತ ನಿಗಧಿಯಾಗಿದೆ. ಮಂಗಳೂರು ಅಥವಾ ಬೆಂಗಳೂರಿನಲ್ಲಿ ನಿಮಿಕಾ ಕಲ್ಯಾಣ ನಡೆಯಲಿದೆ. ನಿಮಿಕಾ ಮಾಡೆಲ್ ಆಗಿದ್ದುಕೊಂಡು, ಗಾಯಕಿಯಾಗಿಯೂ ಒಂದಷ್ಟು ಹೆಸರು ಗಳಿಸಿದ ನಂತರ ನಟಿಯಾಗಬೇಕೆಂಬ ಕನಸಿನ ಕರೆಗೆ ಓಗೊಟ್ಟವರು. ಕನ್ನಡ ಚಿತ್ರರಂಗದಲ್ಲಿ ಹಂತ ಹಂತವಾಗಿ ನಾಯಕಿಯಾಗಿ ನೆಲೆ ಕಂಡುಕೊಂಡಿರುವ ನಿಮಿಕಾ, ವೃತ್ತಿಬದುಕಿನ ಏರುಹಾದಿಯಲ್ಲಿರುವಾಗಲೇ ವೈವಾಹಿಕ ಬದುಕಿಗೆ ಅಡಿಯಿರಿಸುತ್ತಿದ್ದಾರೆ.
ಮಂಗಳೂರು ಮೂಲದ ನಿಮಿಕಾ ರತ್ನಾಕರ್, ಮುಂಬೈನಲ್ಲಿ ಬೆಳೆದರೂ ಕೂಡಾ ಕನ್ನಡ ಪ್ರೇಮವನ್ನು ಕಾಪಿಟ್ಟುಕೊಂಡಿದ್ದವರು. ತನ್ನ ಬೇರುಗಳಿರುವ ಕರುನಾಡಲ್ಲಿಯೇ ನಟಿಯಾಗಿ ಹೆಸರಾಗಬೇಕೆಂಬ ಕನಸಿಟ್ಟುಕೊಂಡಿದ್ದ ನಿಮಿಕಾ, ರಾಮಧಾನ್ಯ ಚಿತ್ರದ ಮೂಲಕ ಸ್ಯಾಂಡಲ್ವುಡ್ಡಿಗೆ ಎಂಟ್ರಿ ಕೊಟ್ಟಿದ್ದರು. ಆ ನಂತರ ಒಂದಷ್ಟು ಸಿನಿಮಾಗಳಲ್ಲಿ ಭಿನ್ನವಾದ ಪಾತ್ರಗಳನ್ನು ನಿರ್ವಹಿಸಿದ್ದ ನಿಮಿಕಾ ಪಾಲಿಗೆ ದರ್ಶನ್ ಜೊತೆ ಕ್ರಾಂತಿ ಚಿತ್ರದಲ್ಲಿ ಹೆಜ್ಜೆ ಹಾಕುವ ಅವಕಾಶ ಕೂಡಿ ಬಂದಿತ್ತು. ಆ ಹಾಡಿನ ಪ್ರಭೆಯಲ್ಲಿಯೇ ಒಂದಷ್ಟು ಮಹತ್ವದ ಸಿನಿಮಾಗಳ ಭಾಗವಾಗುತ್ತಾ ಬಂದಿರೂ ನಿಮಿಕಾ ಇದೀಗ ವೈಲ್ಡ್ ಟೈಗರ್ ಸಫಾರಿ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ.
keywords: nimika ratnakar, nimika ratnakar marriage, sandalwood, cinishodha

