ಬಿಗ್ ಬಾಸ್ ಎಂಬ ಬಕ್ವಾಸ್ ಶೋಗೆ ಕಿಚ್ಚಾ ಸುದೀಪ್ ಅದೇಕೋ ಅಡಿಕ್ಟ್ ಆದಂತೆ ಕಾಣಿಸುತ್ತಿದ್ದಾರೆ. ಈತ ಅದೆಷ್ಟೇ ಗಂಭೀರವಾಗಿ, ನಯ ನಾಜೂಕಿನಿಂದ ವಾರದಂಚಿನಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡರೂ ಅಸಲೀಯತ್ತೆಂಬುದು ಪದೇ ಪದೆ ಪ್ರೇಕ್ಷಕರತ್ತ ರಾಚುತ್ತಲೇ ಇರುತ್ತೆ. ಕಳೆದ ಸೀಜನ್ನಿನಲ್ಲಿ ಹುಟ್ಟಾ ಫ್ರಾಡ್ ಕೇಸಿನಂತಿರುವ ದ್ರೋನ್ ಪ್ರತಾಪನನ್ನು ಸಂತ್ರಸ್ತನೆಂಬಂತೆ ಬಿಂಬಿಸಲು ಹೆಣಗಿದಾಗಲೇ ಕಿಚ್ಚನ ಘನತೆ ಮುಕ್ಕಾಗಿ ಬಿಟ್ಟಿತ್ತು. ಇಂಥಾ ಶೋಗಾಗಿಯೇ ವರ್ಷದ ಬಹುಭಾಗವನ್ನು ಮೀಸಲಿಡುತ್ತಾ ಬಂದಿರೋ ಸುದೀಪ್ ಸಿನಿಮಾದತ್ತ ತಾತ್ಸಾರ ಮನೋಭಾವ ಬೆಳೆಸಿಕೊಂಡಿದ್ದಾರೆಂಬ ತಕರಾರು ಖುದ್ದು ಆತನನ್ನು ಆರಾಧಿಸುವ ಅಭಿಮಾನಿ ಬಳಗದಲ್ಲಿಯೇ ಹಬ್ಬಿಕೊಂಡಿತ್ತು. ಅದಕ್ಕೆ ಸರಿಯಾಗಿ, ಸಂಭ್ರಮಿಸುವಂಥಾ ಪುಷ್ಕಳ ಗೆಲುವು ಇತ್ತೀಚಿನ ವರ್ಷಗಳಲ್ಲಿ ದಕ್ಕುತ್ತಿಲ್ಲವೆಂಬ ಅಸಮಾಧಾನವೂ ಜೊತೆಯಾಗಿತ್ತು. ಅಂಥಾ ಎಲ್ಲ ಕುದಿತಗಳನ್ನೂ ಮಾಫಿ ಮಾಡುವತ್ತ ಮಾರ್ಕ್ ಟ್ರೈಲರ್ ಈಗ ದಾಪುಗಾಲಿಡುತ್ತಿದೆ!
ಈ ಟ್ರೈಲರ್‌ಗೆ ಬಿಡುಗಡೆಗೊಂಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಬೆರಗಾಗುವಂಥಾ ವೀವ್ಸ್ ಸಿಗುತ್ತಿದೆ. ಹೀಗೆ ಮಾರ್ಕ್ ಪಡೆದುಕೊಳ್ಳುತ್ತಿರುವ ಅಬ್ಬರ ಕಂಡ ದರ್ಶನ್ ಅಭಿಮಾನಿಗಳು ಇದು ಪೇಯ್ಡ್ ವೀವ್ಸ್ ಅಂತೆಲ್ಲ ಆಪಾದಿಸುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದಷ್ಟೇ ನಿಖರವಾದ ಮಾಹಿತಿ, ಸ್ಪಷ್ಟೀಕರಣ ಹೊರಬೀಳಬೇಕಿದೆ. ಇದರಾಚೆ ನೋಡಿದರೆ, ಟ್ರೈಲರಿನಲ್ಲೊಂದು ಲವಲವಿಕಿ ಕಾಣಿಸುತ್ತಿದೆ. ಮಕ್ಕಳ ಅಪಹರಣದ ಸುತ್ತಾ ಘಟಿಸುವ ಕಥೆಯಹೊಂದನ್ನು ನಿರ್ದೇಶಕ ವಿಜಯ್ ಕಾರ್ತಿಕೇಯ ಕೈಗೆತ್ತಿಕೊಂಡಿರುವ ಲಕ್ಷಣವೂ ಗೋಚರಿಸಿದೆ. ಇದೆಲ್ಲದರ ಮಧ್ಯೆ ಕಿಚ್ಚನ ಅಭಿಮಾನಿಗಳು ಮಾರ್ಕ್ ಟ್ರೈಲರ್ ಅನ್ನು ಸಂಭ್ರಮಿಸುತ್ತಿದ್ದಾರೆ. ಇಂಥಾ ಅಭಿಮಾನದ ಪ್ರಭೆಯಾಚೆಗೂ ಸದರಿ ಟ್ರೈಲರಿನ ಸಕಾರಾತ್ಮಕ ವಿಚಾರ ಹಬ್ಬಿಕೊಂಡಿದೆ.
Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!
ಈ ಹಿಂದೆ ಮ್ಯಾಕ್ಸ್ ಎಂಬ ಚಿತ್ರವನ್ನು ಇದೇ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದರು. ಅತ್ಯಂತ ಸಾಧಾರಣ ಕಥೆಯನ್ನು ಬೋರಾಗಿಸದಂತೆ ಕಟ್ಟಿ ಕೊಡುವ ಮೂಲಕ ಒಂದು ಮಟ್ಟದ ಗೆಲುವು ದಾಖಲಿಸಿದ್ದರು. ಈ ಬಾರಿಯೂ ಅವರು ಮಕ್ಕಳ ಅಪಹರಣವನ್ನು ಭೇದಿಸುವಂಥಾ ಕಥನವನ್ನು ಕೈಗೆತ್ತಿಕೊಂಡಂತಿದೆ. ಕಳೆದ ಬಾರಿ ಮಾರ್ಕ್ ಸಿನಿಮಾ ಸಾಧಾರಣ ಅನ್ನಿಸಿದ್ದರೂ ಕೂಡಾ ನಿರ್ದೇಶನದಲ್ಲಿನ ಅಚ್ಚುಕಟ್ಟುತನದಿಂದ ವಿಜಯ್ ಮನಗೆದ್ದಿದ್ದರು. ಮ್ಯಾಕ್ಸ್ ಬಗ್ಗೆ ಕೇಳಿ ಬಂದಿದ್ದ ನಕಾರಾತ್ಮಕ ಅಂಶಗಳನ್ನು ಮನನ ಮಾಡಿಕೊಂಡು, ಹಳೇ ಜಾಡನ್ನು ಮೀರಿಕೊಂಡು ಮ್ಯಾಕ್ಸ್ ರೂಪಿಸಿದ್ದರೆ, ಅದು ನಿರೀಕ್ಷೆಯಂತೆಯೇ ಚೆಂದಗಿದ್ದರೆ ಖಂಡಿತವಾಗಿಯೂ ವರ್ಷಾಂತ್ಯದಲ್ಲಿ ಚಿತ್ರರಂಗ ಗೆಲುವಿನಿಂದ ಕಳೆಗಟ್ಟಿಕೊಳ್ಳಲಿದೆ.
ಈ ಬಾರಿಕ ಕಿಚ್ಚನ ಮ್ಯಾಕ್ಸ್‌ಗೆ ಬೇರೆ ಭಾಷೆಗಳ ಪ್ರಸಿದ್ಧ ನಟರು ಸಾಥ್ ಕೊಟ್ಟಿದ್ದಾರೆ. ಖ್ಯಾತ ತಮಿಳು ನಟ ಯೋಗಿ ಬಾಬು, ಮಲೆಯಾಳಂನ ಶೈನ್ ಟಾಮ್ ಚಾಕೋ ಮುಂತಾದವರು ಮಾರ್ಕ್ ಭಾಗವಾಗಿದ್ದಾರೆ. ಜೊತೆಗೆ ಕೆಲ ಸಿನಿಮಾಗಳಿಗೆ ಬೇಕಾಬಿಟ್ಟಿ ಸಂಗೀತ ಸಂಯೋಜನೆ ಮಾಡಿ ಭಯ ಹುಟ್ಟಿಸುವ ಅಜನೀಶ್ ಲೋಕನಾಥ್ ಮ್ಯಾಕ್ಸ್ ಮೂಲಕ ಮತ್ತೆ ಮ್ಯಾಜಿಕ್ಕು ಮಾಡಬಹುದಾದ ಸೂಚನೆಗಳೂ ಇದ್ದಾವೆ. ಕಿಚ್ಚನ ಅಭಿಮಾನಿಗಳ ಒಂದು ಭರ್ಜಧರಿ ಗೆಲುವಿಗಾಗಿ ಹಲವು ವರ್ಷಗಳಿಂದ ಬಕಪಕ್ಷಿಗಳಂತೆ ಕಾದು ಕೂತಿದ್ದರು. ಅದು ಮ್ಯಾಕ್ಸ್ ಮೂಲಕ ಕೈಗೂಡಬಹುದಾ? ಕಿಚ್ಚಾ ಸುದೀಪ್ ತಮ್ಮ ಮೇಲಿರುವ ಅಸಮಾಧಾನಗಳನ್ನೆಲ್ಲ ಕೊಡವಿಕೊಳ್ಳಲು ಸಾಧ್ಯವಾಗುತ್ತದಾ? ಇಂಥಾ ಪ್ರಶ್ನೆಗಳಿಗೆಲ್ಲ ಈ ತಿಂಗಳ ಕಡೇಯ ಭಾಗದಲ್ಲಿ ನಿಖರ ಉತ್ತರ ಸಿಗಲಿದೆ. ಯಾಕೆಂದರೆ, ಮ್ಯಾಕ್ಸ್ ಕ್ರಿಸ್‌ಮಸ್ ಹಬ್ಬದ ಹಿಂಚುಮುಂಚಿನಲ್ಲಿ ತೆರೆಗಾಣುವ ಸಾಧ್ಯತೆಗಳಿದ್ದಾವೆ!

