ಈ ವರ್ಷದ ಆರಂಭಿಕ ಘಟ್ಟದಲ್ಲಿಯೇ ಒಂದಷ್ಟು ಯುವ ಆವೇಗದ, ವಿಶಿಷ್ಟ ಕಥಾನಕವನ್ನೊಳಗೊಂಡಿರುವ ಸಿನಿಮಾಗಳು ರೂಪುಗೊಳ್ಳುತ್ತಿವೆ. ಆ ಪಥದಲ್ಲಿರುವ, ರಂಗಭೂಮಿಯ ನವ ಪ್ರತಿಭೆಗಳೇ ತುಂಬಿರುವ `ಲವ್ ಸೀಸನ್ಸ್’ ಚಿತ್ರವೀಗ ಸದ್ದೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡಿದೆ. ರಂಗಭೂಮಿ, ಸಿನಿಮಾ ರಂಗದಲ್ಲಿ ದಶಕಗಳಿಂದೀಚೆಗೆ ಪಳಗಿಕೊಂಡಿರುವ ಕೃತ್ವಿಕ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿದ್ದಾರೆ. ಯಾವುದೇ ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರುವ ಲವ್ ಸೀಸನ್ಸ್ ಇದೀಗ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಕಾರ್ಯಗಳತ್ತ ಹೊರಳಿಕೊಂಡಿದೆ. ಈ ಮೂಲಕ ರಂಗಭೂಮಿಯ ಗಟ್ಟಿತನ ಹೊಂದಿರೋ ಒಂದಷ್ಟು ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಸಾಮಾನ್ಯವಾಗಿ ನೆಲಮೂದಲ ಕಥೆ ಹೊಂದಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ಅನೇಕ ಸಿನಿಮಾಗಳು ಭಾಜನವಾಗೋದಿದೆ. ಲವ್ ಸೀಸನ್ಸ್ನಲ್ಲಿ ನಮ್ಮೆಲ್ಲರನ್ನೂ ಅಚ್ಚರಿಗೀಡು ಮಾಡಬಲ್ಲಿ ಗಲ್ಲಿ ಗಲ್ಲಿಯ ಕಥೆಯಿದೆಯಂತೆ. ನಮ್ಮೆಲ್ಲರ ಬದುಕಿನ ಜೀವ ಬಿಂದುವಿನಂತಿರುವ ನಂಬಿಕೆಯೆಂಬ ಮಾಯೆಯ ಸುತ್ತಾ ಹೊಸೆದುಕೊಂಡಿರುವ ಗಟ್ಟಿ ಕಥೆಯನ್ನು ನವಿರು ಪ್ರೇಮದ ಮೂಲಕ ದಾಟಿಸುವ ಭಿನ್ನ ಪಥವನ್ನು ನಿರ್ದೇಶಕ ಕೃತ್ವಿಕ್ ಅನುಸರಿಸಿದ್ದಾರಂತೆ. ಈಗಾಗಲೇ ಒಂದಷ್ಟು ಸಿನಿಮಾಗಳ ಭಾಗವಾಗಿದ್ದುಕೊಂಡು, ನಿರ್ದೇಶಕನಾಗೋ ಕನಸು ಕಂಡಿದ್ದ ಕೃತ್ವಿಕ್ ಕನಸು ಈ ಚಿತ್ರದ ಮೂಲಕ ನನಸಾಗಿದೆ. ಕಥೆಯ ಕಸುವಿನ ಮೇಲೆ ನಂಬಿಕೆಯಿಟ್ಟಿರೋ ಕೃತ್ವಿಕ್, ಹೊಸಬರನ್ನೇ ಚಿತ್ರತಂಡಕ್ಕೆ ಸೇರಿಸಿಕೊಂಡು ಲವ್ ಸೀಸನ್ಸ್ ಅನ್ನು ರೂಪಿಸಿದ್ದಾರಂತೆ.
ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆಯಲ್ಲಿ ಕೋರ್ಸ್ ಪೂರೈಸಿಕೊಂಡಿರುವ ಮುಕುಂದ ರಾಮಸ್ವಾಮಿ ಈ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ದಿಯಾ ಕೀರ್ತಿ, ಚಂದನ ಗೌಡ ಮತ್ತು ಶ್ವೇತಾ ಕೊಗ್ಲೂರ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಒಂದು ಮಹತ್ತರವಾದ ಸಂದೇಶವನ್ನು ರವಾನಿಸುತ್ತಲೇ, ಈ ಜನರೇಷನ್ನಿಗೆ ಪೂರ್ತಿಯಾಗಿ ಕನೆಕ್ಟಾಗುವ, ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವ ಸಿನಿಮಾ ಮಾಡಬೇಕೆಂಬ ತುಡಿತದೊಂದಿಗೆ ಕೃತ್ವಿಕ್ ಈ ಕಥೆಯನ್ನು ಸಿದ್ಧಪಡಿಸಿದ್ದಾರೆ. ಈಗಿನ ದಿನಮಾನದಲ್ಲಿ ನಂಬಿಕೆಯೆಂಬುದು ಅಕ್ಷರಶಃ ದುಬಾರಿಯಾಗುತ್ತಿದೆ. ಅದು ಎರಡಲಗಿನ ಕತ್ತಿಯಂತೆ ಪ್ರತಿಯೊಬ್ಬರ ಬದುಕಿನಲ್ಲೂ ವರಸೆ ಪ್ರದರ್ಶಿಸುತ್ತಿದೆ. ಅಂಥಾದ್ದೊಂದು ಸೂಕ್ಷ್ಮ ಕಥಾ ಬಿಂದುವಿನೊಂದಿಗೆ ಘಟಿಸುವ ಚೇತೋಹಾರಿ ಘಟನಾವಳಿಗಳ ಗುಚ್ಛದಂತೆ ಈ ಸಿನಿಮಾ ಮೂಡಿ ಬಂದಿದೆ ಎಂಬುದು ನಿರ್ದೇಶಕರ ಮಾತು.
ಎನ್.ಆರ್ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಎನ್.ಆರ್ ಮಂಜುನಾಥ್ (ನೀಲೇರಿ) ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಪ್ರೇಮ ಹೊಂದಿರೋ ಮಂಜುನಾಥ್ ಪಾಲಿಗಿದು ಮೊದಲ ಹೆಜ್ಜೆ. ಈ ಮೂಲಕ ಮತ್ತೊಂದಷ್ಟು ಹೊಸಬರಿಗೆ ಅವಕಾಶ ಕೊಡುವ ಮೂಲಕ ಅವರು ಗಮನ ಸೆಳೆದಿದ್ದಾರೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರಿನ ಹಲವಾರು ಏರಿಯಾಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಇನ್ನೇನು ಕೆಲ ದಿನಗಳಲ್ಲಿಯೇ ಟೀಸರ್ ಬಿಡುಗಡೆಗೊಳಿಸಲು ತಯಾರಿ ಆರಂಭವಾಗಿದೆ. ಅದರ ಬೆನ್ನಲ್ಲಿಯೇ ವೀರ್ ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳು ಬಿಡುಗಡೆಗೊಳ್ಳಲಿವೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಲೋಕಿ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ.
keywords: love seasons movie, kruthvik, nr manjunatha, mandya ramesh, sandalwood

