ಲವ್ ಮಾಕ್ಟೇಲ್3 ಚಿತ್ರತಂಡವೀಗ ಬಿಡುಗಡೆಗೆ ಪ್ರಶಸ್ತವಾದ ಘಳಿಗೆ ನಿಗಧಿಯಾದ ಖುಷಿಯಲ್ಲಿದೆ. ಇದೇ ಮಾರ್ಚ್ 19ರಂದು ತೆರೆಗಾಣಲಿರುವ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಸಾಮಾನ್ಯವಾಗಿ ಇಂಥಾ ಸಿನಿಮಾ ಟ್ರೈಲರ್ಗಳನ್ನು ಅತಿರಥ ಮಹಾರಥರಿಂದ ಬಿಡುಗಡೆಗೊಳಿಸೋದು ವಾಡಿಕೆ. ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಡಾರ್ಲಿಂಗ್ ಕೃಷ್ಣ ಕೂಡಾ ಅಂತಾ ಸಿದ್ಧಸೂತ್ರಕ್ಕೆ ಅಂಟಿಕೊಂಡಿದ್ದರು. ಅದರ ಭಾಗವಾಗಿಯೇ ಮೊದಲ ಆವೃತ್ತಿಯ ಟ್ರೈಲರ್ ಕಿಚ್ಚ ಸುದೀಪ್ ಕಡೆಯಿಂದ ಅನಾವರಣಗೊಂಡಿತ್ತು. ಲವ್ ಮಾಕ್ಟೇಲ್3 ಟ್ರೈಲರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಬಿಡುಗಡೆಗೊಳಿಸಿದ್ದರು. ಈ ಟ್ರೈಲರ್ ಅನ್ನು ಬಿಡುಗಡೆಗೊಳಿಸಿರೋದು ಡಾರ್ಲಿಂಗ್ ಕೃಷ್ಣ-ಮಿಲನಾ ದಂಪತಿಯ ಪ್ರೀತಿಯ ಮಗಳು ಪರಿ!
ಅಚ್ಚುಕಟ್ಟಾದ ಪತ್ರಿಕಾಗೋಷ್ಠಿಯ ಮೂಲಕ ಲವ್ ಮಾಕ್ಟೇಲ್3 ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ. ಈ ಸಮಾರಂಭದಲ್ಲಿ ಮೊಗ್ಗಿನ ಮನಸು ಖ್ಯಾತಿಯ ನಿರ್ದೇಶಕ ಶಶಾಂಕ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅವರಿಬ್ಬರೂ ಡಾರ್ಲಿಂಗ್ ಕೃಷ್ಣ ಮತ್ತು ಒಂದಿಡೀ ಚಿತ್ರತಂಡಕ್ಕೆ ಶುಭ ಕೋರಿದರು. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿ ಈ ಸಿನಿಮಾ ರೂಪುಗೊಂಡ ಬಗೆ, ಅದರ ವಿಶೇಷತೆ, ಈ ಹಿಂದೆ ಎರಡು ಸರಣಿಗಳಿಗೆ ದಕ್ಕಿದ ಗೆಲುವು ಹಾಗೂ ಈ ಸಿನಿಮಾ ಗೆದ್ದೇ ಗೆಲ್ಲುತ್ತದೆಂಬಂಥಾ ಗಾಢ ನಂಬಿಕೆಯ ಪಸೆಯಿರುವಂಥಾ ಮಾತುಗಳನ್ನಾಡಿದ್ದಾರೆ.
ಸಾಮಾನ್ಯವಾಗಿ, ಧುರಂಧರ್ ಥರದ ಯಾವುದೇ ಪ್ಯಾನಿಂಡಿಯಾ ಚಿತ್ರಗಳ ಮುಂದೆ ತೆರೆಗಾಣಲು ಸಿನಿಮಾ ತಂಡಗಳು ಹಿಂದೇಟು ಹಾಕೋದಿದೆ. ಆದರೆ, ಟಾಕ್ಸಿಕ್ ಚಿತ್ರ ಮುಂದೂಡಲ್ಪಟ್ಟ ನಂತರ ಧುರಂಧರ್ ಹಾವಳಿಯನ್ನೂ ಲೆಕ್ಕಿಸದೆ ಲವ್ ಮಾಕ್ಟೇಲ್೩ ಚಿತ್ರ ಬಿಡುಗಡೆಗೆ ಅಣಿಗೊಂಡಿದೆ. ಅಂಥಾ ದೊಡ್ಡ ಚಿತ್ರದ ಮುಂದೆ ತೆರೆಗಾಣುವ ಧೈರ್ಯ ಹೇಗೆ ಬಂತೆಂದು ಅನೇಕರು ಪ್ರಶ್ನಿಸಿದ್ದಾರಂತೆ. ಈ ಬಗ್ಗೆ ಪ್ರಧಾನವಾಗಿ ಮಾತಾಡಿರುವ ಮಿಲನಾ ನಾಗರಾಜ್, ಈ ಸಿನಿಮಾ ಮೂಡಿ ಬಂದಿರುವ ಬಗೆಗಿನ ನಂಬಿಕೆ, ಗೆದ್ದೇ ಗೆಲ್ಲುತ್ತೇವೆಂಬ ಭರವಸೆಯಿಂದಲೇ ಆ ರೀತಿಯದ್ದೊಂದು ಗಟ್ಟಿ ನಿರ್ಧಾರ ತಳೆದಿರೋದಾಗಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಚಿತ್ರದ ನಿರ್ದೇಶಕರೂ ಆಗಿರುವ ಡಾರ್ಲಿಂಗ್ ಕೃಷ್ಣ ಒಲವ್ ಮಾಕ್ಟೇಲ್೩ ಚಿತ್ರದ ಕಥೆ ಹುಟ್ಟಿದ ಕುರಿತಾದ ಒಂದಷ್ಟು ರಸವತ್ತಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಎರಡು ಸರಣಿಗಳು ಗೆದ್ದಿದ್ದರಿಂದ ಮೂರನೇ ಆವೃತ್ತಿಗೆ ಕಥೆ ಸಿದ್ಧಪಡಿಸಲು ವರ್ಷಗಟ್ಟಲೆ ಕೃಷ್ಣ ಸರ್ಕಸ್ಸು ನಡೆಸಿದ್ದರಂತೆ. ಕಡೆಗೂ ಒಂದು ದಿನ ಕಥಾ ಎಳೆಯೊಂದು ಹೊಳೆದಿದ್ದೇ, ಮಡದಿ ಮಿಲನಾಗೆ ಹೇಳಿ ಸೀದಾ ಹೋದದ್ದು ಗೋವಾಕ್ಕೆ. ಅಲ್ಲಿ ಮೂರು ದಿನಗಳ ಕಾಲ ಬೀಡುಬಿಟ್ಟಿದ್ದ ಕೃಷ್ಣ, ಕಥೆಯನ್ನು ಅಚ್ಚುಕಟ್ಟಾಗಿ ಸಿನಿಮಾ ಚೌಕಟ್ಟಿಗೊಗ್ಗಿಸಿ, ಚಿತ್ರಕಥೆಯ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ವಾಪಾಸಾಗುವ ಮೂಲಕ ಲವ್ ಮಾಕ್ಟೇಲ್3ಗೆ ವಿದ್ಯುಕ್ತ ಚಾಲನೆ ಸಿಕ್ಕಿದ್ದಾಗೆ ಡಾರ್ಲಿಂಗ್ ಕೃಷ್ಣ ಹೇಳಿಕೊಂಡಿದ್ದಾರೆ.
ಇನ್ನುಳಿದಂತೆ ಜೋ ಎಂಬ ಲವ್ ಮಾಕ್ಟೇಲ್ ಪಾತ್ರದ ಮೂಲಕ ಹೆಸರಾಗಿರುವ ಅಮೃತಾ ಅಯ್ಯಂಗಾರ್ ಕೂಡಾ ಈ ಸಿನಿಮಾದಲ್ಲೊಂದು ಪಾತ್ರವಾಗಿದ್ದಾರೆ. ಅವರೂ ಆ ಪಾತ್ರ ಮತ್ತು ಒಟ್ಟಾರೆ ಚಿತ್ರೀಕರಣದ ಅನುಭವಗಳನ್ನು ತೆರೆದಿಟ್ಟಿದ್ದಾರೆ. ಖುದ್ದು ಡಾರ್ಲಿಂಗ್ ಕೃಷ್ಣ ತಮ್ಮ ಸಿನಿಮಾದಲ್ಲಿ ನಟಿಸಿರುವ ಎಲ್ಲರನ್ನು ಪರಿಚಯಿಸಿ, ಅವರ ಪ್ರತಿಭೆಯ ಬಗ್ಗೆ ಹೇಳಿಕೊಂಡಿದ್ದು ವಿಶೇಷ. ಒಟ್ಟಾರೆಯಾಗಿ, ಟ್ರೈಲರ್ ಬಿಡುಗಡೆಯ ಅಂಗವಾಗಿ ಒಟ್ಟುಗೂಡಿದ್ದ ಚಿತ್ರತಂಡದಲ್ಲಿ ಗೆಲುವಿನ ಭರವಸೆ ಸ್ಪಷ್ಟವಾಗಿಯೇ ಮಿರುಗುತ್ತಿರುವಂತೆ ಭಾಸವಾಗಿತ್ತು. ತಂದೆ ಮಗಳ ಬಾಂಧವ್ಯದ ಕೇಂದ್ರದಲ್ಲಿರುವ, ಎಲ್ಲರ ಮನಸಿಗೂ ನಾಟುವಂಥಾ ಸೂಕ್ಷ್ಮ ಕಥನದ ಸೂಚನೆಯನ್ನು ಈ ಟ್ರೈಲರ್ ಬಿಟ್ಟುಕೊಟ್ಟಂತಿದೆ.
ಈ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಹಾಗೂ ಈ ಚಿತ್ರಕ್ಕೊಂದು ಹಾಡನ್ನು ಬರೆದಿರುವ ಶಶಾಂಕ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ಅಮೃತಾ ಅಯ್ಯಂಗಾರ್, ಗೀತರಚನೆಕಾರ ರಾಘವೇಂದ್ರ ಕಾಮತ್, ನಟ ಜಗದೀಶ್, ರೆಚೆಲ್ ಡೇವಿಡ್, ಶ್ರೀ ಕ್ರೇಜಿ ಮೈಂಡ್ಸ್, ಸಂವೃತ, ಅಭಿಲಾಶ್, ರಜನಿ, ನಯಾರಾ ಮುಂತಾದವರು ಉಪಸ್ಥಿತರಿದ್ದರು. ಕ್ರಿಸ್ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
keywords: love mocktaile3, darling krishna, milana nagaraj, amrutha iyyengar, sandalwood

