ಲವ್ ಮಾಕ್ಟೇಲ್3 ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಮಾರ್ಚ್ 19ರಂದು ಯುಗಾದಿಯ ಶುಭ ಘಳಿಗೆಯಲ್ಲಿ ಬಿಡುಗಡೆಗೊಳ್ಳಲಿರುವ ಲವ್ ಮಾಕ್ಟೇಲ್3ಗೆ ಎಲ್ಲ ಕೋನಗಳಿಂದಲೂ ಹಸನಾದ ವಾತಾವರಣ ತಂತಾನೇ ಸೃಷ್ಟಿಯಾಗಿದೆ. ಈ ಸಿನಿಮಾದ ಕಳೆದೆರಡು ಆವೃತ್ತಿಗಳಿಗೆ ಹೋಲಿಸಿದರೆ, ಈ ಬಾರಿ ಮತ್ತೊಂದಷ್ಟು ಗಾಢವಾದ ಗೆಲುವಿನ ಸೂಚನೆಗಳು ಕಾಣಿಸುತ್ತಿವೆ. ಇದೆಲ್ಲದಕ್ಕೆ ಕಾರಣವಾಗಿರೋದು ಪ್ರೇಕ್ಷಕ ವಲಯದಲ್ಲಿ ಮಾಯಕವೆಂಬಂತೆ ಪ್ರತಿಷ್ಠಾಪಿಸಲ್ಪಟ್ಟಿರುವ ಗಾಢ ನಂಬಿಕೆ. ಟಾಕ್ಸಿಕ್ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋದರೂ ಕೂಡಾ ಧುರಂಧರ್ ಎಂಬ ದೊಡ್ಡ ಸಿನಿಮಾ ಆ ದಿನವೇ ಬಿಡುಗಡೆಗೊಳ್ಳಲಿದೆ. ಆ ಬಿರುಗಾಳಿಗೂ ಅಂಜದೆ ಕಾಲೂರಿ ನಿಲ್ಲುವ ಧೈರ್ಯ ಮಾಡಿರುವ ಡಾರ್ಲಿಂಗ್ ಕೃಷ್ಣ ದಂಪತಿಯ ಆತ್ಮವಿಶ್ವಾಸವಿದೆಯಲ್ಲಾ? ಅದನ್ನು ಕಂಡ ಪ್ರೇಕ್ಷಕರಿಗೆಲ್ಲ ಲವ್ ಮಾಕ್ಟೇಲ್೩ ಬಗೆಗಿನ ಭರವಸೆ ಮತ್ತಷ್ಟು ತೀವ್ರಗೊಂಡಿದೆ!
ಮಾರ್ಚ್ ೧೯ಕ್ಕೆ ಯುಗಾದಿ ರಜೆ ಇರೋದರಿಂದ, ವೀಕೆಂಡ್ ಸಾಥ್ ಕೊಡೋದರಿಂದ ಆ ದಿನಾಂಕದತ್ತ ಅನೇಕ ಕನ್ನಡ ಚಿತ್ರಗಳು ಕಣ್ಣಿಟ್ಟಿದ್ದವು. ಯಾವಾಗ ಟಾಕ್ಸಿಕ್ ಮತ್ಗತು ಧುರಂಧರ್ ಆ ದಿನವೇ ಲಗ್ಗೆಯಿಡಲಿರೋ ಸುದ್ದಿ ಹೊರ ಬಿತ್ತೋ, ನಜ್ಜುಗುಜ್ಜಾಗುವ ಭಯದಿಂದ ಬಹುತೇಕರು ಕಣದಿಂದ ಹಿಂದೆ ಸರಿದಿದ್ದರು. ಆದರೆ, ಟಾಕ್ಸಿಕ್ ಮುಂದಕ್ಕೆ ಹೋಗುತ್ತಲೇ, ಲವ್ ಮಾಕ್ಟೇಲ್ ವಿತರಣೆಯ ಜವಾಬ್ದಾರಿ ಹೊತ್ತಿದ್ದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಅಚ್ಚರಿದಾಯಕ ನಿರ್ಧಾರ ತಳೆದಿತ್ತು. ಆ ದಿನವೇ ಲವ್ ಮಾಕ್ಟೇಲ್ ೩ ಬಿಡುಗಡೆಗೆ ಹಸಿರು ನಿಶಾನೆ ತೋರಿಸುತ್ತಲೇ ಡಾರ್ಲಿಂಗ್ ದಂಪತಿ ತುಸುವೂ ಹಿಂದೇಟು ಹಾಕದೆ ಒಪ್ಪಿಕೊಂಡಿದ್ದರು. ಇಂಥಾ ಆತ್ಮವಿಶ್ವಾಸದ ಹಿಂದಿರೋದು ಲವ್ ಮಾಕ್ಟೇಲ್೩ ಚಿತ್ರದ ಕಂಟೆಂಟಿನ ಕಸುವು. ಬಹುಶಃ ಒಟ್ಟಾರೆ ಸಿನಿಮಾ ಚೆಂದಗೆ ಮೂಡಿ ಬಾರದಿದ್ದಿದ್ದರೆ, ಮಾರ್ಚ್ ೧೯ ಅದೆಂಥಾ ಒಳ್ಳೆ ಘಳಿಗೆಯಾಗಿದ್ದರೂ ಕೂಡಾ ಬಿಡುಗಡೆಗೆ ಸಜ್ಜಾಗುವ ಧೈರ್ಯ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಟಾಕ್ಸಿಕ್ ಬಿಡುಗಡೆಗೊಳ್ಳದಿದ್ದರೂ ಧುರಂಧರ್ ಹಾವಳಿ ಪಕ್ಕಾ ಆಗಿದೆ. ಹೇಳಿಕೇಳಿ ಇದು ಬಹುನಿರೀಕ್ಷಿತ ಚಿತ್ರ. ಇಂಥಾ ಸಿನಿಮಾಗಳು ತೆರೆಗಂಡಾಗ ಕನ್ನಡ ಚಿತ್ರಗಳು ನಾನಾ ಪಡಿಪಾಟಲು ಪಟ್ಟಿದ್ದಿದೆ. ಆದರೆ, ಡಾರ್ಲಿಂಗ್ ಕೃಷ್ಣ ಮುಖದಲ್ಲಿ ಆ ಆತಂಕದ ಸಣ್ಣ ಗೆರೆಯೂ ಕಾಣಿಸುತ್ತಿಲ್ಲ. ಬಹುಶಃ ಅಂಥಾ ಭಯವಿದ್ದಿದ್ದರೆ, ಕೊರೋನಾ ಕಾಲದಲ್ಲಿ ಲವ್ ಮಾಕ್ಟೇಲ್ ಚಿತ್ರವನ್ನು ರೂಪಿಸಲೂ ಸಾಧ್ಯವಾಗುತ್ತಿರಲಿಲ್ಲ. ಕೊರೋನಾ ಕಾಲದಲ್ಲಿ ವರ್ಷಗಟ್ಟಲೆ ಲಾಕ್ಡೌನ್ ಆಗಿ ಚಿತ್ರರಂಗ ನಿತ್ರಾಣಗೊಂಡಿತ್ತು. ಚಿತ್ರಮಂದಿರಗಳು ಯಾವಾಗ ಬಾಗಿಲು ತೆರೆದುಕೊಳ್ಳುತ್ತವೆ? ಕೊಂದೇ ಬಿಡುವ ವೈರಸ್ಸಿನ ಭಯ ಮೀರಿಕೊಂಡು ಪ್ರೇಕ್ಷಕರು ಚಿತ್ರಮಂದಿರಗಳತ್ತ ಬರಬಹುದಾ? ಇಂತಾ ಆತಂಕ, ಅನುಮಾನಗಳಿರುವಾಗಲೇ ಕೃಷ್ಣ ತಮ್ಮ ವೃತ್ತಿ ಬದುಕಿನ ಮಹತ್ವದ ತೀರ್ಮಾನ ಕೈಗೊಂಡಿದ್ದರು.
ತಾವೇ ನಿರ್ದೇಶನಕ್ಕಿಳಿಯೋ ಮನಸು ಮಾಡಿದ್ದ ಕೃಷ್ಣ ಲವ್ ಮಾಕ್ಟೇಲ್ ಸಿನಿಮಾವನ್ನು ಲಾಕ್ಡೌನ್ ಹಿಂಚುಮುಂಚಲ್ಲಿಯೇ ಚಾಲೂ ಮಾಡಿದ್ದರು. ಕೊರೋನಾ ಕಂಟಕದ ಕಾಲದಲ್ಲಿಯೇ ಬಿಡುಗಡೆಗೊಳಿಸಿ ಸಮ್ಮೋಹಕ ಗೆಲುವು ದಕ್ಕಿಸಿಕೊಂಡಿದ್ದರು. ಕೊರೋನಾ ಗ್ರಹಣ ನೀಗಿಸಿ ಚಿತ್ರರಂಗದತ್ತ ಭರವಸೆಯ ಬೆಳಕೊಂದು ಹಾಯುವಲ್ಲಿ ಲವ್ ಮಾಕ್ಟೇಲ್ ಚಿತ್ರದ ಪಾತ್ರ ಹಿರಿದಾಗಿದೆ. ದುರಿತ ಕಾಲದಲ್ಲಿ ಧೈರ್ಯ ಮಾಡಿ ಡಾರ್ಲಿಂಗ್ ಕೃಷ್ಣ ಹಚ್ಚಿಟ್ಟ ಲವ್ ಮಾಕ್ಟೇಲ್ ಎಂಬ ಹಣತೆಯ ಪ್ರಭೆಯಲ್ಲಿಯೇ ಚಿತ್ರರಂಗ ಭರವಸೆಯತ್ತ ಮುಖ ಮಾಡಿತ್ತು. ಆ ನಂತರದಲ್ಲಿ ಲವ್ ಮಾಕ್ಟೇಲ್೨ ಚಿತ್ರಕ್ಕೂ ಗೆಲುವು ಸಿಕ್ಕಿತ್ತು. ಆ ಸರಣಿಯ ಕೊನೇಯ ಅಧ್ಯಾಯದಂತಿರೋ ಲವ್ ಮಾಕ್ಟೇಲ್೩ ಇದೀಗ ಅದ್ದೂರಿಯಾಗಿ ತೆರೆಗಾಣಲು ಸಜ್ಜಾಗಿದೆ. ಕಥೆ, ನಿರ್ದೇಶನ ಸೇರಿದಂತೆ ಎಲ್ಲದರಲ್ಲಿಯೂ ಹೊಸತನವಿಟ್ಟಿರೋ ಡಾರ್ಲಿಂಗ್ ಕೃಷ್ಣರ ಪ್ರಯತ್ನಕ್ಕೆ ಪ್ರೇಕ್ಷಕರ ಕಡೆಯಿಂದ ಎಂಥಾ ಪ್ರತಿಕ್ರಿಯೆ ಸಿಗಲಿದೆ ಅನ್ನೋದಕ್ಕೆ ಇನ್ನೆರಡು ದಿನಗಳಲ್ಲಿ ನಿಖರ ಉತ್ತರ ಸಿಗಲಿದೆ.
keywords: love mocktail3, darling krishna, milana nagaraj, sandalwood

