ದಳಪತಿ ವಿಜಯ್ ನಟಿಸುತ್ತಿರೋಮ ಕಟ್ಟ ಕಡೆಯ ಚಿತ್ರ ಜನನಾಯಗನ್. ಓರ್ವ ಸ್ಟಾರ್ ನಟನಾಗಿ ಬೇರೆ ಸ್ಟಾರುಗಳೇ ಕರುಬುವ ಮಟ್ಟಕ್ಕೆ ಫ್ಯಾನ್ ಬೇಸ್ ಹೊಂದಿರುವಾತ ವಿಜಯ್. ಈವತ್ತಿಗೆ ಆತ ರಾಜಕೀಯ ಪಕ್ಷವೊಂದನ್ನು ಕಟ್ಟಿ, ಪೂರ್ಣ ಪ್ರಮಾಣದ ರಾಜಕಾರಣಿಯಾಗುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. ಈಗಾಗಲೇ ಒಂದಷ್ಟು ಸಾರ್ವಜನಿಕ ಶಕ್ತಿ ಪ್ರದರ್ಶನದಂಥಾ ಸಮಾವೇಶಗಳೂ ನಡೆದಿವೆ. ಅಲ್ಲಿ ನೆರೆದಿದ್ದ ಜನಸ್ತೋಮ ಕಂಡು ತಮಿಳುನಾಡಿದ ರಾಜಕೀಯ ರಂಗ ಅಕ್ಷರಶಃ ಅವಾಕ್ಕಾಗಿ ಬಿಟ್ಟಿದೆ. ಹಾಗೆ ದಳಪತಿಗೆ ರಾಜಕೀಯವಾಗಿ ಬೆಂಬಲ ಸಿಗುತ್ತಿರೋದರ ಹಿಂದಿರೋದು, ಸಿನಿಮಾ ಮೂಲಕ ದಕ್ಕಿದ ಅದ್ಭುತ ಜನಪ್ರಿಯತೆಯಲ್ಲದೆ ಬೇರೇನೂ ಅಲ್ಲ. ಇಂಥಾ ನಟನೋರ್ವನ ಕಡೇ ಸಿನಿಮಾದ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಹೈಪ್ ಸೃಷಿಯಾಗೋದು ಸಹಜ!
ವಿಜಯ್ ಎಂಬ ನಟನೋರ್ವ ದಳಪತಿ ಎಂಬೋ ಬಿರುದಾಂಕಿತನಾಗಿ ಮೆರೆಯಲು ಕಾರಣವಾಗಿದ್ದದ್ದು ಸಿನಿಮಾ ರಂಗ. ತನ್ನದೇ ಆದ ನಟನೆಯ ಶೈಲಿ ಹೊಂದಿರುವ ಈತ, ಮೂಲತಃ ಸಿನಿಮಾ ಪ್ರೇಮಿಗಳಾದ ತಮಿಳರನ್ನು ಆವರಿಸಿಕೊಂಡ ರೀತಿಯೇ ಅದ್ಭುತ. ಹಾಗಿರುವಾಗ ಆತನ ಕಡೆಯ ಚಿತ್ರವಾದ ಜನನಾಯಗನ್ ಅನ್ನು ಅತ್ಯಂತ ಆಸ್ಥೆಯಿಂದ ರೂಪಿಸುತ್ತಾರೆಂಬ ನಿರೀಕ್ಷೆ ಎಲ್ಲರೊಳಗಿರುತ್ತದೆ. ಆದರೆ ಅದೇಕೋ ಈ ಹಿನ್ನೆಲೆಯಲ್ಲಿ ಅಭಿಮಾನಿ ಬಳಗಕ್ಕೆಲ್ಲ ನಿರಾಸೆಯಾಗುವಂಥಾ ರೂಮರುಗಳೇ ಆರಂಭದಿಂದಲೂ ಹಬ್ಬಿಕೊಂಡಿದ್ದವು. ಅದರಲ್ಲಿಯೂ ಅಭಿಮಾನ ಇಗಳು ಕಂಗಾಲಾಗುವಂತೆ ಮಾಡಿದ್ದದ್ದು ಈ ಸಿನಿಮಾ ತೆಲುಗು ಚಿತ್ರವೊಂದರ ರೀಮೇಕ್ ಎಂಬವ ವಿಚಾರ. ಆದರೆ, ನಿರ್ದೇಶಕನಾಗಲಿ, ವಿಜಯ್ ಆಗಲಿ ಒಂದು ಹಂತದ ವರೆಗೆ ಆ ಬಗ್ಗೆ ಯಾವ ಸ್ಪಷ್ಟೀಕರಣವನ್ನೂ ಕೊಡದೆ ಮುಂದುವರೆದಿದ್ದರು.
ನಿರ್ದೇಸಕ ಹೆಚ್ ವಿನೋದ್ ಅಂತೂ ಆರಂಭದಿಂದಲೂ ಈ ಬಗ್ಗೆ ಮುಗುಮ್ಮಾಗಿದ್ದರು. ಇದೀಗ ಜನನಾಯಗನ್ ಸಿನಿಮಾ ತೆಲುಗಿನ ಸೂಪರ್ ಹಿಟ್ ಚಿತ್ರ ಭಗವಂತ ಕೇಸರಿಯ ರೀಮೇಕ್ ಎಂಬ ವಿಚಾರವನ್ನು ತೆರೆದಿಟ್ಟಿದ್ದಾನೆ. ಆತನ ಪ್ರಕಾರ ಹೇಳೋದಾದರೆ, ಭಗವಂತ ಕೇಸರಿಯನ್ನು ಜನನಾಯಗನ್ ಆಗಿ ನೇರಾನೇರ ಭಟ್ಟಿ ಇಳಿಸಿಲ್ಲ. ಆ ಕಥನವನ್ನು ತಮಿಳಿನ ನೇಟಿವಿಟಿಗೆ ಹೊಂದಿಸಿಕೊಂಡು ಅರವತ್ತು ಬಾಗದಷ್ಟು ಬಳಸಿಕೊಳ್ಳಲಾಗಿದೆ. ಅಲ್ಲಿಗೆ ಇಪ್ಪತ್ತು ಪರ್ಸೆಂಟಿನಷ್ಟು ಮಾತ್ರವೇ ಸ್ವಂತದ ಸರಕಿನೊಂದಿಗೆ ವಿನೋದ್ ಈ ಸಿನಿಮಾವನ್ನು ರೂಪಿಸಿರೋದು ಪಕ್ಕಾ ಆದಂತಾಗಿದೆ. ಈ ವಿಚಾರವೀಗ ದಳಪತಿಯ ಅಭಿಮಾನಿ ಬಳಗವನ್ನು ತೀವ್ರ ಮುಜುಗರಕ್ಕೆ ತಳ್ಳಿದೆ. ತಮ್ಮ ನೆಚ್ಚಿನ ನಟನ ಕಡೇಯ ಸಿನಿಮಾ ರೀಮೇಕ್ ಎಂಬ ವಿಚಾರವನ್ನ ಅರಗಿಸಿಕೊಳ್ಳಲಾರದೆ ಅಭಿಮಾನಿ ಬಳಗ ತತ್ತರಿಸಿ ಹೋಗಿದೆ!
ದಳಪತಿ ವಿಜಯ್ ಯಾಕಿಂಥಾ ನಿರ್ಧಾರ ಕೈಗೊಂಡರೆಂಬುದೇ ಯಕ್ಷಪ್ರಶ್ನೆ. ಬಿಲ್ಡಪ್ಪುಗಳ ಮೂಲಕವೇ ಸ್ಟಾರ್‌ಗಿರತಿ ಪಡೆದುಕೊಂಡಿರುವ ಬಾಲಯ್ಯ ತೆಲುಗು ಸೀಮೆಯಲ್ಲಿ ಸ್ಟಾರ್ ನಟ ಅನ್ನೋದು ನಿಜ. ಆದರೆ, ವಿಜಯ್ ಸ್ಟಾರ್‌ಡಮ್ಮಿನ ಮುಂದೆ ಬಾಲಯ್ಯ ತೀರಾ ಮಂಕಾಗಿ ಕಾಣಿಸುತ್ತಾರೆ. ಅಂಥಾ ನಟನ ಸಿನಿಮಾವನ್ನು ರೀಮೇಕ್ ಮಾಡುವಷ್ಟು ದಳಪತಿ ಪಾತಾಳಕ್ಕಿಳಿದರಾ? ಕಡೆಯ ಸಿನಿಮಾ ನೆಲಮೂಲದ್ದಾಗಿರಬೇಕೆಂಬ ಸೂಕ್ಷ್ಮತೆ ಮರೆತರಾ? ಹೇಗಿದ್ದರೂ ಸೂಪರ್ ಹಿಟ್ಟಾಗುತ್ತೆ ಎಂಬ ಅತೀ ಆತ್ಮವಿಶ್ವಾಸದಿಂದ ಇಂಥಾ ನಿರ್ಧಾರಕ್ಕೆ ಅಂಟಿಕೊಂಡರಾ? ಬೇರೆಯವರ ಮಾತು ಹಾಗಿರಲಿ; ಖುದ್ದು ದಳಪತಿಯ ಆರಾಧಕರನ್ನೇ ಇಂಥಾ ಅನೇಕ ಪ್ರಶ್ನೆಗಳು ಕೊರೆಯುತ್ತಿವೆ. ಇದುವೇ ಜನನಾಯಗನ್ ಬಗೆಗಿನ ಕ್ರೇಜ್ ಅನ್ನೂ ಕೊಂಚ ಕಡಿಮೆಯಾಗಿಸಿದೆ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ!

