ನಾಕಾಣೆ ಕೆಲಸ ಮಾಡಿ ಎಂಟಾಣೆ ಪೋಸು ಕೊಡೋ ನೌಟಂಕಿ ಪಟ್ಟುಗಳಲ್ಲಿ ನಿರ್ದೇಶಕ ಪ್ರೇಮ್ ನಿಸ್ಸೀಮ. ಕ್ರಿಯಾಶೀಲ ಕ್ಷೇತ್ರದಲ್ಲಿರುವವರಿಗೆ ಬಾಯಿಬೇಧಿ ಅತಿಯಾದರೆ ಏನನ್ನೂ ಸೃಷ್ಟಿಸಲಾರದ ನಿರ್ಜಲೀಕರಣ ಬಾಧಿಸುತ್ತೆ. ಆ ಬಳಿಕ ನಿರ್ಲಜ್ಜ ನಡೆ ಅನುಸರಿಸಬೇಕಾಗುತ್ತೆ. ಸದ್ಯಕ್ಕೆ ರಕ್ಷಿತಾ ಗಂಡ ಪ್ರೇಮ್ ಅಂಥಾ ಸ್ಥಿತಿ ತಲುಪಿಕೊಂಡಿದ್ದಾನೆ. ದ ವಿಲನ್ ಸಂದರ್ಭದಲ್ಲೇ ಪ್ರೇಮ್ ಓರ್ವ ನಿರ್ದೇಶಕನಾಗಿ ಖಾಲಿಯಾಗಿದ್ದಾನೆಂಬ ಸ್ಪಷ್ಟ ಸಂದೇಶ ರವಾನೆಯಾಗಿತ್ತು. ಈ ಸಿನಿಮಾದ ಭೂಮಿಕೆಯಲ್ಲಿ ಪ್ರೇಮ್ ಪ್ರಯೋಗಿಸಿದ್ದ ಪ್ರಚಾರದ ಪಟ್ಟುಗಳು ಪ್ರೇಕ್ಷಕರಲ್ಲೊಂದು ರೇಜಿಗೆ ಮೂಡಿಸಿತ್ತು. ಆ ನಂತರದಲ್ಲಿ ಕೊಂಚ ಬದಲಾದಂತೆ ಕಂಡಿದ್ದ ಪ್ರೇಮ್ ಇದೀಗ ಧ್ರುವ ಸರ್ಜಾ ಅಭಿನಯದ ಕೆಡಿ ದ ಡೆವಿಲ್ ಎಂಬ ಚಿತ್ರದ ಸಾರಥಿಯಾಗಿದ್ದಾನೆ. ಈ ಸಿನಿಮಾದ ಒಂದು ಐಟಂ ಸಾಂಗ್ ಇದೀಗ ಜೋಗಿ ಪ್ರೇಮ್ ಮಾನವನ್ನು ಗಾಂಧಿನಗರದ ಗಟಾರದಂಚಿಗೆ ತಂದು ನಿಲ್ಲಿಸಿದೆ.
ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ ಎಂಬ ಹಾಡು ಬಿಡುಗಡೆಗೊಂಡೇಟಿಗೆ ಉಗುಳುಗಳ ಮೂಲಕವೇ ಪ್ರೇಕ್ಷಕರು ಅದ್ದೂರಿ ಸ್ವಾಗತ ಕೋರಿದ್ದಾರೆ. ಪ್ರೇಕ್ಷಕರ ಅಭಿರುಚಿಯನ್ನು ಪ್ರೇಮ್ನಂಥವರು ತಪ್ಪಾಗಿ ಗ್ರಹಿಸೋದೇ ಹೆಚ್ಚು. ಬಹುಶಃ ಸೋಶಿಯಲ್ ಮೀಡಿಯಾದ ಚಪ್ರಿ ಗ್ಯಾಂಗೊಂದನ್ನು ದೃಷ್ಟಿಯಲ್ಲಿಟ್ಟುಕೊಂಡು, ಆ ಪಡೆಯ ಮೂಲಕವೇ ಅದ್ದೂರಿ ಹಿಟ್ ಆಗುತ್ತದೆಂಬ ಭ್ರಮೆಯ ಮೂಲಕ ಪ್ರೇಮ್ ಈ ಹಾಡು ಬರೆದಿದ್ದಿರಬಹುದು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಮಂದಿ ಈ ಹಾಡಿನ ವಿರುದ್ಧ ಕೊತಗುಡುತ್ತಿರುವ ರೀತಿಯಿದೆಯಲ್ಲಾ? ಅದು ಪ್ರೇಮ್ಗೆ ಮಾತ್ರವಲ್ಲ; ಈತನಂತೆ ತಾತ್ಕಾಲಿಕ ಜನಪ್ರಿಯತೆಯ ತಲುಬಿಗೆ ಬಿದ್ದು ಅಶ್ಲೀಲ ಸಾಹಿತ್ಯ ಗೀಚೋ ಮಂದಿಗೆಲ್ಲ ಅಕ್ಷರಶಃ ಯಕ್ಕಡದೇಟಿನಂತಿದೆ.
ಪ್ರೇಮ್ ಓರ್ವ ಅದ್ಭುತ ಗೀತ ಸಾಹಿತಿ ಅನ್ನೋದರಲ್ಲಿ ಎರಡು ಮಾತಿಲ್ಲ. ಜೋಗಿ ಚಿತ್ರದ ಹಾಡುಗಳ ಮೂಲಕವೇ ಅದು ಸಾಬೀತಾಗಿದೆ. ಆ ನಂತರವೂ ಪ್ರೇಮ್ ಕಡೆಯಿಂದ ಅಂಥಾದ್ದೊಂದು ಮ್ಯಾಜಿಕ್ಕು ಹಂತ ಹಂತವಾಗಿ ನಡೆಯುತ್ತಾ ಬಂದಿದೆ. ತಾಯಿ ಸೆಂಟಿಮೆಂಟ್, ಪ್ರೇಮಗೀತೆಗಳಾಚೆಗೆ ಬಿಡುಬೀಸಾದ ಶೈಲಿಯ ಹಾಡುಗಳನ್ನೂ ಈತ ಬರೆದಿದ್ದ. ಆದರೆ, ಅವ್ಯಾವುದರಲ್ಲಿಯೂ ಅಶ್ಲೀಲತೆಯ ಛಾಯೆ ಇರಲಿಲ್ಲ. ಕೆಡಿ ಹಾಡಿನಲ್ಲಿ ಮಾತ್ರ ಅಶ್ಲೀಲ ಸಾಹಿತ್ಯ ಬಿಟ್ಟು ಬೇರೇನೂ ಇಲ್ಲ. ಬಹುಶಃ ಪ್ರೇಮ್ಸ್ ಗಡಂಗಿನಲ್ಲಿ ಕೂತು ಈ ಹಾಡು ಬರೆದಿರಬಹುದೇನೋ… ದುರಂತವೆಂದರೆ, ಹೆಣ್ಣು ಕುಲಕ್ಕೆ ಅವಮಾನದಂತಿರೋ ಈ ಹಾಡನ್ನು ರಕ್ಷಿತಾ ಬಿಡಿಗಡೆಗೊಳಿಸಿದ್ದಾರೆ. ಆಂಕರ್ ಅನುಶ್ರೀ ಅದೇ ಗಲೀಜು ಗೀತೆಗೆ ಕುಣಿದು ಸಂಭ್ರಮಿಸಿದ್ದಾಳೆ. ಇದೆಲ್ಲವೂ ಸಿನಿಮಾ ಜಗತ್ತು ಕಾಣುತ್ತಿರೋ ಬೌಧಿಕ ಅದಃಪತನದ ಸ್ಪಷ್ಟ ಸೂಚನೆಯೆಂಬಂತೆ ಕಾಣಿಸುತ್ತಿದೆ.
ಸಿನಿಮಾ ಹಾಡುಗಳ ಮಟ್ಟಿಗೆ ಕನ್ನಡದಲ್ಲೊಂದು ಸಂಪನ್ನ ಹಿನ್ನೆಲೆಯಿದೆ. ಆಗಾಗ ಪೋಲಿ ಸಾಂಗುಗಳು ಹುಟ್ಟಿಕೊಂಡರೂ ತೀರಾ ಸೆರಗು ಸರ್ಸೆ ಅಂತ ಬೇಲಾಡೋ ಕಾಮುಕ ಮಟ್ಟಕ್ಕಿಳಿದಿರಲಿಲ್ಲ. ಹೇಳಿಕೇಳಿ ಜೋಗಿ ಪ್ರೇಮ್ ಮಾತುಗಾರ. ಈ ವಿವಾದಕ್ಕಾತ ಚಾಲಾಕಿತನದ ಉತ್ತರ ಕೊಟ್ಟು ನುಣುಚಿಕೊಳ್ಳಬಹುದು. ಆದರೆ, ಇದೊಂದು ಹಾಡಿನ ಮೂಲಕ ಇಷ್ಟೂ ವರ್ಷಗಳ ಕಾಲ ಹುರಿಗೊಂಡಿದ್ದ ಘನತೆ ಗೌರವಗಳು ಪ್ರೇಮ್ನ ಉಡುದಾರದಿಂದ ಉಣುಚಿಕೊಂಡಿರೋದಂತೂ ಸತ್ಯ. ಕೆಲಸಕ್ಕೆ ಬಾರದ ಮೀಟಿಂಗುಗಳನ್ನು ನಡೆಸುತ್ತಾ, ಜ್ವಲಂತ ಸಮಸ್ಯೆಗಳತ್ತ ಕುರುಡು ಕಿವುಡಾಗುವ ಚಲನಚಿತ್ರ ವಾಣಿಜ್ಯ ಮಂಡಳಿ ಇಂಥಾ ಅಶ್ಲೀಲ ಸಾಹಿತ್ಯಕ್ಕೆ ಕಡಿವಾಣ ಹಾಕುವಂಥಾ ಕ್ರಮಕ್ಕೂ ಮುಂದಾಗಬೇಕಿದೆ. ಇಲ್ಲದೇ ಹೋದರೆ, ಜೋಗಿ ಪ್ರೇಮ್ ಸಂತಾನಿಗರು `ಎತ್ತೇ ಎತ್ತೆ ಒಸಿ ಲಂಗಾ ಎತ್ತೆ’ ಅಂತ ಹಾಡು ಬರೆಯೋ ಕಾಲ ದೂರವೇನಿಲ್ಲ!
keywords: jogi prem, kdthedavil, kd movie, sarse sarse serga sarse song controvercy

