ಜೈಲರ್ ಚಿತ್ರದ ಭಾರೀ ಯಶಸ್ಸಿನ ನಂತರ ರಜನೀಕಾಂತ್ ಜೈಲರ್೨ನತ್ತ ಮುಖ ಮಾಡಿದ್ದಾರೆ. ಆರಂಭದಲ್ಲಿ ಲೋಕೇಶ್ ಕನಗರಾಜನ್ ಪ್ರವರ ಕೇಳಿ, ಆತ ಸಿದ್ಧಪಡಿಸಿದ್ದ ಕಥೆಗೆ ನೋ ಅಂದ ನಂತರವೀಗ ತಲೈವಾ ಗಮನವೆಲ್ಲ ಜೈಲರ್೨ನತ್ತ ಕೇಂದ್ರೀಕರಿಸಿಕೊಂಡಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ತಾರಾಗಣದ ಆಯ್ಕೆ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಭಾರತೀಯ ಸಿನಿಮಾ ರಂಗದ ಘಟಾನುಘಟಿ ನಟ ನಟಿಯರೆಲ್ಲ ರಜನೀಕಾಂತ್ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಗಬಹುದಾ ಎಂಬಂತೆ ಆಸೆಗಣ್ಣಿನಿಂದ ಕಾಯಲಾರಂಭಿಸಿದ್ದಾರೆ. ಈ ನಡುವೆ ಜೈಲರ್೨ ಅಡ್ಡಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದರನ್ವಯ ಹೇಳೊದಾದರೆ, ಶಾರೂಖ್ ಖಾನ್ ಈ ಸಿನಿಮಾದಲ್ಲಿ ಬಹುಮುಖ್ಯವಾದ ಪಾತ್ರವೊಂದನ್ನು ನಿಭಾಯಿಸಲು ಒಪ್ಪಿಗೆ ಸೂಚಿಸಿದ್ದಾರೆ!
ಈಗ ಹಬ್ಬಿಕೊಂಡಿರೋ ಸುದ್ದಿಯನ್ನು ಆಧರಿಸಿ ಹೇಳುವುದಾದರೆ, ಶಾರೂಖ್ ಖಾನ್ ಜೈಲರ್೨ನ ಭಾಗವಾಗುತ್ತಿರೋ ಸುದ್ದಿ ರೂಮರ್ ಅಲ್ಲ. ಖುದ್ದು ರಜನೀಕಾಂತ್ ಈಗಾಗಲೇ ಶಾರೂಖ್ ಜೊತೆ ಮಾತಾಡಿದ್ದಾರೆ. ಆ ನಂತರವೇ ನಿರ್ದೇಶಕ ನೆಲ್ಸನ್ ಶಾರೂಖ್ಗೆ ಪಾತ್ರದ ಬಗ್ಗೆ ವಿವರಿಸಿ ಹೇಳಿದ್ದಾರೆ. ಶಾರೂಖ್ ಕೂಡಾ ಆ ಪಾತ್ರದ ಚಹರೆಯಿಒಂದಲೇ ಥ್ರಿಲ್ ಆಗಿ ರಜನಿಯೊಂದಿಗೆ ನಟಿಸಲು ಒಪ್ಪಿಕೊಂಡಿದ್ದಾರೆ. ಕಡಿಮೆ ಅವಧಿಯದ್ದೇ ಆದರೂ ಇಡೀ ಸಿನಿಮಾದ ಪ್ರಧಾನ ಆಕರ್ಷಣೆಯಾಗಿ, ತಿರುವ ನೀಡುವ ಪಾತ್ರವ ಆಗಿ ಶಾರೂಖ್ ಕಾಣಿಸಿಕೊಳ್ಳಲಿದ್ದಾರಂತೆ. ಮುಂದಿನ ವರ್ಷದ ಆರಂಭದಲ್ಲಿಯೇ ಶಾರೂಖ್ ಖಾನ್ ಮೂರು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.
ರಜನೀಕಾಂತ್ ಸಿನಿಮಾದಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರು ಅತಿಥಿಗಳಾಗಿ ನಟಿಸೋದೇನೂ ಹೊಸತಲ್ಲ. ಆದರೆ, ಶಾರೂಖ್ ಖಾನ್ ದಕ್ಷಿಣ ಭಾರತೀಯ ಚಿತ್ರವೊಂದರಲ್ಲಿ ನಟಿಸುತ್ತಿರೋದು ಆತನ ಅಬಿಮಾನಿಗಳನ್ನು ಥ್ರಿಲ್ ಆಗಿಸಿದೆ. ಈ ಹಿಂದೆ ಕೂಲಿ ಚಿತ್ರದಲ್ಲಿ ಆಮೀರ್ ಖಾನ್ ಒಂದು ಪಾತ್ರದಲ್ಲಿ ನಟಿಸಿದ್ದರು. ಆದರೆ ಅದೇಕೋ ಆ ಪಾತ್ರ ಪಕ್ಕಾ ಕಾಮಿಡಿ ಪೀಸಿನಂತೆ ಕಾಣಿಸುವ ಮೂಲಕ ನಿರಾಸೆ ಮೂಡಿಸಿತ್ತು. ಖುದ್ದು ಆಮೀರ್ ಅಭಿಮಾನಿಗಳೇ ಆ ಪಾತ್ರವನ್ನು ನೋಡಿ ಕಂಗಾಲೆದ್ದಿದ್ದರು. ಆದರೆ, ಜೈಲರ್೨ನಲ್ಲಿ ಶಾರೂಖ್ ಪಾತ್ರ ಅಭಿಮಾನಿ ಬಳಗವನ್ನು ಖುಷಿಗೊಳಿಸವಂತಿರಲಿದೆಯಂತೆ. ಅಂದಹಾಗೆ, ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ವಿನಾಯಗನ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ನಮ್ಮ ಶಿವರಾಜ್ಕುಮಾರ್ಗೂ ಚೆಂದದ ಪಾತ್ರ ರೆಡಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಜೈಲರ್2ನ ತಾರಾಗಣ ಭರ್ತಿಯಾಗಲಿದೆ.

