ಕರ್ನಾಟಕದ ದಿಕ್ಕಿನಿಂದ ಪ್ಯಾನಿಂಡಿಯಾ ಮಟ್ಟದಲ್ಲಿ ಆಧ್ಯಾತ್ಮಿಕ ಗಾಳಿ ಬೀಸಲಾರಂಭಿಸಿದೆ. ಒಂದು ಕಾಲದಲ್ಲಿ ನಾನಾ ಮಹಾತ್ಮೆಗಳ ಸಿದ್ಧಸೂತ್ರದ ದೇವರ ಸಿನಿಮಾಗಳು ರೂಪುಗೊಂಡು, ಅದರಲ್ಲೊಂದಷ್ಟು ಭರ್ಜರಿ ಯಶ ಕಂಡಿದ್ದೂ ಇದೆ. ಆದರೀಗ ಪಕ್ಕಾ ಕಮರ್ಶಿಯಲ್ ಪಥದಲ್ಲಿಯೇ ಪ್ಯಾನಿಂಡಿಯಾ ಮಟ್ಟದಲ್ಲಿ ಆಧ್ಯಾತ್ಮಿಕ ಪಸೆಯಿರೋ ಚಿತ್ರಗಳನ್ನು ಗೆಲ್ಲಿಸಿಕೊಳ್ಳಬಹುದೆಂಬುದಕ್ಕೆ ಕಾಂತಾರ ಸರಣಿ ಚಿತ್ರಗಳು ಸಾಕ್ಷಿಯಾಗಿವೆ. ಇದೇ ಧಾಟಿಯಲ್ಲಿ ತೆಲುಗಿನಲ್ಲೂ ಒಂದು ಚಿತ್ರ ಶುರುವಾಗಿದೆ. ಮಾಸ್ ರಾಜ ಅಂತಲೇ ಖ್ಯಾತನಾಗಿರುವ ರವಿತೇಜಾ ನಾಯಕನಾಗಿ ನಟಿಸುತ್ತಿರೋ ಸದರಿ ಸಿನಿಮಾಕ್ಕೆ ಇರುಮುಡಿ ಎಂಬೋ ಹೆಸರಿಡಲಾಗಿದೆ. ಈ ಸಿನಿಮಾಕ್ಕೀಯ ತಮನ್ನಾ ನಾಯಕಿಯಾಗಿ ಎಂಟರಿ ಕೊಟ್ಟಿದ್ದಾಳೆ.
ರವಿತೇಜಾ ಅಭಿನಯಿಸಿದ್ದ ಚಿತ್ರವೊಂದು ಸಂಕ್ರಾಂತಿಯಂದು ತೆರೆಗಂಡಿತ್ತು. ಸಾಧಾರಣ ಗೆಲುವು ಪಡೆದಿದ್ದ ಆ ಸಿನಿಮಾ ಹೆಚ್ಚೇನೂ ಸದ್ದು ಮಾಡಿರಲಿಲ್ಲ. ಆದರೀಗ ಅಯ್ಯಪ್ಪ ಸ್ವಾಮಿಯ ಕಥಾ ಬಿಂದು ಹೊಂದಿರೋ ಇರುಮುಡಿ ಎಂಬ ಚಿತ್ರದಲ್ಲಿ ರವಿತೇಜಾ ಬ್ಯುಸಿಯಾಗಿದ್ದಾರೆ. ಈಗಾಗಲೇ ಪ್ರಿಯಾ ಭವಾನಿ ನಾಯಕಿಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿರುವಾಗಲೇ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಎರಡನೇ ನಾಯಕಿಯಾಗಿ ಆಗಮಿಸೋದು ಬಹುತೇಕ ಖಚಿತವಾಗಿದೆ. ಈ ಮೂಲಕ ಚಿತ್ರೀಕರಣ ಮತ್ತಷ್ಟು ವೇಗ ಪಡೆದುಕೊಂಡಿದೆ. ಆದರೆ, ತಮನ್ನಾ ಭಾಟಿಯಾ ಯಾವ ಪಾತ್ರ ಮಾಡುತ್ತಿದ್ದಾರೆ? ಅದರ ರೂಪುರೇಷೆಗಳೇನೆಂಬ ವಿಚಾರಗಳನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ.
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ. ಶಿವ ನಿರ್ವಣ ನಿರ್ದೇಶನ ಮಾಡುತ್ತಿರುವ ಸದರಿ ಚಿತ್ರ ದೇವರ ವರವೆಂಬಂತೆ ಜನಿಸಿದ ಮಗಳೊಬ್ಬಳನ್ನು ಕಾಪಾಡಿಕೊಳ್ಳಲು ತಂದೆಯೊಬ್ಬ ಶ್ರಮಿಸುವ, ಆಧ್ಯಾತ್ಮಿಕ ಅಂಶಗಳೊಂದಿಗೆ ಪಕ್ಕಾ ಮಾಸ್ ಅಂಶಗಳಿರುವ ಕಥೆ ಹೊಂದಿದೆಯಂತೆ. ಖುದ್ದು ರವಿತೇಜಾ ಹಲವಾರು ಸಂದರ್ಶನಗಳಲ್ಲಿ ತನಗೆ ಇರುಮುಡಿಯ ಬಗ್ಗೆ ಗಾಢ ಭರವಸೆ ಇರೋದಾಗಿ ಹೇಳಿಕೊಂಡಿದ್ದಾರೆ. ಈಗ ಅತ್ಯಂತ ವೇಗವಾಗಿ ಚಿತ್ರೀಕರಣ ಚಾಲೂ ಆಗಿದೆ. ಸದ್ಯಕ್ಕೆ ನಿರ್ಮಾಪಕರು ತಮನ್ನಾ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮಿಲ್ಕಿ ಬ್ಯೂಟಿ ಚಿತ್ರೀಕರಣದಲ್ಲಿ ಭಾಗಿಯಾಗೋ ಸಾಧ್ಯತೆಗಳಿದ್ದಾವೆ.
keywords: tamannah bhatia, irumudi movie, raviteja, tollywood, irumudi movie

