ಮದುವೆಯಾದ ನಂತರ ನಟಿಯ ಪಾಲಿಗೆ ಅವಕಾಶಗಳು ಕುಂಠಿತವಾಗುತ್ತವೆಂಬುದು ಸಿನಿಮಾ ರಂಗದಲ್ಲಿ ಚಾಲ್ತಿಯಲ್ಲಿರುವ ಲಾಗಾಯ್ತಿನ ನಂಬಿಕೆ. ಕೆಲವೇ ಕೆಲ ನಟಿಯರು ಮಾತ್ರ ಮದುವೆಯಾಚೆಗೂ ಪುಟಿದೆದ್ದಿದ್ದಿದೆ. ಮತ್ತೆ ಬಣ್ಣ ಹಚ್ಚಿ ಗೆದ್ದ ಉದಾಹರಣೆಗಳೂ ಇದ್ದಾವೆ. ಆದರೆ, ಮಗು ಮಡಿಲು ಸೇರಿದ ಮೇಲೆ ತಾಯ್ತನದ ಜವಾಬ್ದಾರಿಯಯ ನಡುವೆ ಅನೇಕ ನಟಿಯರು ಶಾಶ್ವತವಾಗೆಂಬಂತೆ ನೇಪಥ್ಯಕ್ಕೆ ಸರಿದ ಅದೆಷ್ಟೋ ಉದಾಹರಣೆಗಳಿದ್ದಾವೆ. ಬಾಲಿವುಡ್ ರಾಣಿಯಾಗಿ ಮೆರೆದಿದ್ದ ದೀಪಿಕಾ ಪಡುಕೋಣೆ ಕೂಡಾ ಅಂಥಾ ಸ್ಥಿತಿಯ ಅಂಚಿನಲ್ಲಿದ್ದಾಳಾ? ಹೀಗೊಂದು ಪ್ರಶ್ನೆ ಖುದ್ದು ಆಕೆಯ ಅಭಿಮಾನಿಗಳನ್ನೇ ಕಾಡಲಾರಂಭಿಸಿದೆ. ಇದಕ್ಕೆ ಕಾರಣವಾಗಿರೋದು ಸಾಲು ಸಾಲಾಗಿ ದೀಪಿಕಾ ಕೈ ತಪ್ಪಿ ಹೋಗುತ್ತಿರುವ ದೊಡ್ಡ ದೊಡ್ಡ ಅವಕಾಶಗಳು!
ಎಲ್ಲವೂ ಸೂಸೂತ್ರವಾಗಿ ಮುಂದುವರೆದಿದ್ದರೆ, ಈ ಹೊತ್ತಿಗೆಲ್ಲ ದೀಪಿಕಾ ಮತ್ತೊಂದಷ್ಟು ದೊಡ್ಡ ಗೆಲುವುಗಳೊಂದಿಗೆ ಮಿಂಚುತ್ತಿದ್ದಳು. ಆಕೆಯ ಕೈಯಲ್ಲಿ ಪ್ಯಾನಿಂಡಿಯಾ ಸಿನಿಮಾಗಳ ದೊಡ್ಡ ಪಟ್ಟಿಯೇ ಲಕಲಕಿಸುತ್ತಿತ್ತು. ಆದರೀಗ ಪದೇ ಪದೆ ದೀಪಿಕಾ ಪಡುಕೋಣೆ ದೊಡ್ಡ ಸಿನಿಮಾಗಳ ಅವಕಾಶ ಕೈತಪ್ಪಿಸಿಕೊಂಡ ಸುದ್ದಿಗಳೇ ಬಂದೆರಗಲಾರಂಭಿಸಿವೆ. ಆರಂಭದಲ್ಲಿ ಪ್ರಭಾಸ್ ನಟನೆಯ ಕಲ್ಕಿ ಚಿತ್ರಕ್ಕೆ ದೀಪಿಕಾ ನಾಯಕಿಯೆಂದು ಗುಲ್ಲೆದ್ದಿತ್ತು. ಆ ನಂತರದಲ್ಲಿ ಆ ಸಿನಿಮಾದಿಂದ ದೀಪಿಕಾ ಹೊರ ಬಂದ ಬಗ್ಗೆ ಸುದ್ದಿ ಜಾಹೀರಾಗಿತ್ತು. ಆ ಬಳಿಕ ಸ್ಪಿರಿಟ್ ಚಿತ್ರಕ್ಕೂ ದೀಪಿಕಾ ನಾಯಕಿ ಎಂಬಂಥಾ ಸುದ್ದಿ ಹಬ್ಬಿತ್ತಾದರೂ ಅದೂ ಸುಳ್ಳಾಗಿತ್ತು.
ಇದೀಗ ಹಾಲಿವುಡ್ಡಿನ ವೆಬ್ ಸೀರೀಸ್ ಒಂದಕ್ಕೂ ದೀಪಿಕಾ ಪಡುಕೋಣೆ ಒಲ್ಲೆ ಎಂದಿರೋ ಸುದ್ದಿ ಹೊರಬಿದ್ದಿದೆ. ಹಾಗಾದರೆ, ದೀಪಿಕಾ ಹೀಗೆ ವೃತ್ತಿ ಬದುಕಿಗೆ ಮುಳುವಾಗುವಂಥಾ ನಿರ್ಧಾರಗಳನ್ನು ಕೈಗೊಳ್ಳುತ್ತಿರೋದೇಕೆ? ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಅದಕ್ಕುತ್ತರವಾಗಿ ಕಾಣಿಸೋದು ಆಕೆಯ ಕಂಕುಳಲ್ಲಿರುವ ಪುಟ್ಟ ಕೂಸು. ದೀಪಿಕಾ ತನ್ನ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾಳೆ. ಈ ಕಾರಣದಿಂದ ಯಾವ ಅವಕಾಶ ಬಂದರೂ ಕೂಡಾ ಇಂತಿಷ್ಟು ಗಂಟೆಗಳ ಕಾಲ ಮಾತ್ರವೇ ಚಿತ್ರೀಕರಣದಲ್ಲಿ ಭಾಗಿಯಾಗುವ ಷರತ್ತು ಹಾಕುತ್ತಿದ್ದಾಳೆ. ಬಿಗ್ ಬಜೆಟ್ಟಿನ ಸಿನಿಮಾಗಳ ಸಮಯಕ್ಕೂ, ದೀಪಿಕಾ ಸಮಯಕ್ಕೂ ಹೊಂದಾಣಿಕೆಯಾಗದೆ ಇದುವರೆಗೂ ಮೂರ್ನಾಲಕ್ಕು ಸಿನಿಮಾ ಅವಕಾಶ ಕೈತಪ್ಪುವಂತಾಗಿದೆ. ಈಕೆ ಸಾಂಸಾರಿಕ ಜಂಜಡದಲ್ಲಿಯೇ ಕಳೆದು ಹೋಗುತ್ತಾಳಾ ಅಥವಾ ಇಷ್ಟರಲ್ಲೇ ಮತ್ತೆ ಫಾರ್ಮಿಗೆ ಮರಳುತ್ತಾಳಾ ಎಂಬಂಥಾ ಆತಂಕವೀಗ ಅಭಿಮಾನಿಗಳನ್ನು ಕಾಡಲಾರಂಭಿಸಿದೆ.
keywords: deepika padukone, bollywood, actress life

