ನಾನಾ ಸರ್ಕಸ್ಸು ನಡೆಸಿ, ಅವಮಾನಗಳನ್ನು ಎದುರಿಸಿ, ಹೆಜ್ಜೆ ಹೆಜ್ಜೆಗೂ ಕಣ್ಣೀರಾಗಿ ದಕ್ಕಿಸಿಕೊಂಡ ಗೆಲುವಿದೆಯಲ್ಲಾ? ಅದನ್ನು ಎಂಥಾ ಮುಠ್ಠಾಳನೇ ಆದರೂ ಮುಕ್ಕಾಗಲು ಬಿಡುವುದಿಲ್ಲ. ಆದರೆ, ಹಾಗೊಂದು ಗೆಲುವು ಸಿಕ್ಕಾಕ್ಷಣವೇ ಮೆರೆದಾಡುತ್ತಾ, ತಾನು ನಡೆದದ್ದೇ ದಾರಿ, ಆಡಿದ್ದೇ ಮಾತೆಂಬಂತೆ ಮೆರೆದವರೆಲ್ಲ ಇತಿಹಾಸದ ಹುದುಲಿನಲ್ಲಿ ದುರಂತಗಾಥೆಗಳಾಗಿ ಹುಗಿದು ಹೋಗಿದ್ದಾರೆ. ಕಡುಗಷ್ಟದಿಂದ ಪುಟಿದೆದ್ದು ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ ಕೂಡಾ ಓರ್ವ ಸ್ಟಾರ್ ನಟನಾಗಿ ಅಂಥಾ ದುರಂತ ಕಥೆಯಾಗುವ ಅಪಾಯದ ಅಂಚಿನಲ್ಲಿದ್ದಾನೆ. ಈಗ ದರ್ಶನ್ ತಲುಪಿಕೊಂಡಿರೋ ಸ್ಥಿತಿ ನೋಡಿದರೆ ಯಾರಿಗಾದರೂ ನೋವಾಗದಿರೋದಿಲ್ಲ. ದರ್ಶನ್ ಥರದ ನಟನೋರ್ವ ಹೇಗೆ ಇಂಥಾ ಪಾತಾಳ ತಲುಪಿದ? ಸಾಮಾಜಿಕ ಜವಾಬ್ದಾರಿ ಮರೆತಂತೆ ಮೆರೆದಾಡಿ ಯಾಕಿಂತಾ ಸ್ಥಿತಿ ತಂದುಕೊಂಡ ಎಂಬ ಪ್ರಶ್ನೆಗೆ ಉತ್ತರವಾಗಿ ನಿಲ್ಲೋದು ಆತನೊಳಗೆ ಸಾಕಿಕೊಂಡಿದ್ದ ಅಹಂ ಮತ್ತು ತನ್ನ ಸುತ್ತಾ ಸಾಕಿಕೊಂಡಿದ್ದ ಸೂಕ್ಷ್ಮತೆಯ ಪಸೆಯಿಲ್ಲದ ಅಡ್ನಾಡಿಗಳದ್ದೊಂದು ಕೂಟ!
ದೆವಿಲ್ ಸಿನಿಮಾಕ್ಕಾಗಿ ಇಂಥಾ ಪಟಾಲಮ್ಮಿಗೆ ಸೇರಿಕೊಂಡಿದ್ದ ನಿರ್ದೇಶಕ ಮಿಲನಾ ಪ್ರಕಾಶ್ ಕೂಡಾ ಸೂಕ್ಷ್ಮವಂತಿಕೆ ಕಳೆದುಕೊಂಡರಾ? ನವಿರು ಭಾವದ ರಾಯಭಾರಿಯಂತೆ ದೃಷ್ಯ ಕಟ್ಟಿ ಗೆದ್ದಿದ್ದ ಪ್ರಕಾಶ್ ಕೂಡಾ ಡೆವಿಲ್ ಅಡ್ಡೆಯಲ್ಲಿ ನಿಂತು ಬದಲಾಗಿ ಬಿಟ್ಟರಾ? ತಿಂಗಳ ಹಿಂದೆ ಇದ್ರೆ ನೆಮ್ದಿಯಾಗಿರ್ಬೇಕ್ ಅಂತೊಂದು ಡೆವಿಲ್ ಚಿತ್ರದ ಹಾಡು ಹೊರಬಂದಾಗಲೇ ಅನೇಕರನ್ನು ಇಂಥಾ ಹತ್ತಾರು ಪ್ರಶ್ನೆಗಳು ಕಾಡಿದ್ದವು. ಇದೀಗ ದರ್ಶನ್ ಅನುಪಸ್ಥಿತಿಯಲ್ಲಿ ನಡೆದಿರುವ ಡೆವಿಲ್ ಪತ್ರಿಕಾಗೋಷ್ಠಿಯಲ್ಲಿಯೂ ಈ ಹಾಡಿನ ಕುರಿತಾದೊಂದು ಪ್ರಶ್ನೆ ಪ್ರಕಾಶ್ ಅವರನ್ನು ಎದುರುಗೊಂಡಿದೆ. ಇದಕ್ಕೆ ಅತ್ಯಂತ ಸಮಚಿತ್ತದಿಂದ ಉತ್ತರಿಸಿರುವ ಪ್ರಕಾಶ್, ತೀರಾ ಇತ್ತೀಚಿಬನವರೆಗೂ ಆ ಹಾಡಿನ ಹಿನ್ನೆಲೆಯಲ್ಲಿರುವ ಕಥೆಯೇ ತನಗೆ ಗೊತ್ತಿರಲಿಲ್ಲ ಎಂದಿದ್ದಾರೆ. ಆ ಹಾಡು ರಚನೆಯಾದಾಗ, ಅದಕ್ಕೆ ಅಜನೀಶ್ ಸಂಗೀತ ಸಂಯೋಜನೆ ಮಾಡಿದಾಗ ಇಷ್ಟವಾಗಿ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಮಿಲನಾ ಪ್ರಕಾಶ್ ಒಂಥರಾ ಮೂಡಿ ಮನುಷ್ಯ. ಒಂದಷ್ಟು ಕಾಲ ಎಲ್ಲಿಯೋ ಕಳೆದು ಹೋಗಿ, ಮತ್ಯಾವಾಗಲೋ ಧುತ್ತನೆದುರಾಗುವಂಥಾ ಅವಧೂತ ಪ್ರಜ್ಞೆಯ ಮೂಲಕ ಆತ ಭಿನ್ನವಾಗಿ ಕಾಣಿಸುತ್ತಾರೆ. ಅಂಥಾ ಪ್ರಕಾಶ ಹಿನ್ನೆಲೆ ಗೊತ್ತಿದ್ದಿದ್ದರೆ ಈ ಹಾಡನ್ನು ಒಪ್ಪಿಕೊಳ್ಳುತ್ತಿರಲಿಲ್ಲವೇನೋ. ಈ ವಿಚಾರದಲ್ಲಿ ಅವರು ಕೊಟ್ಟಿರೋ ಸಮಜಾಯಿಷಿಯನ್ನು ನಂಬಲಡ್ಡಿಯಿಲ್ಲ. ಆದರೆ, ದರ್ಶನ್ ಸುತ್ತಾ ಪಿತಗುಡುತ್ತಿರುವ ಕೆಲ ಮಂದಿಗಾದರೂ ಇದ್ರೆ ನೆಮ್ದಿಯಾಗಿರ್ಬೇಕ್ ಎಂಬ ದರ್ಶನ್ ಡೈಲಾಗಿನ ಹಿನ್ನೆಲೆ ಗೊತ್ತಿರದಿರಲು ಸಾಧ್ಯವೇ? ದರ್ಶನ್ ಬದುಕೇ ಹಡಾಲೆದ್ದಿರುವ ಈ ಘಳಿಗೆಯಲ್ಲಿ, ಆತ ತನ್ನ ಹೆಂಡತಿ ವಿಜಲಕ್ಷ್ಮಿಗೆ ಒಂದು ಕಾಲದಲ್ಲಿ ಬೈದಿದ್ದ ಬೈಗುಳದ ಸಾಲೇ ಹಾಡಾಗೋದು ಬೇಡ ಅಂತ ಯಾರಿಗಾದರೂ ಅನ್ನಿಬೇಕಿತ್ತಲ್ಲಾ? ಯಾರಿಗೂ ಅನ್ನಿಸಿಲ್ಲವೆಂದರೆ, ದರ್ಶನ್ ಸುತ್ತ ಈ ಕ್ಷಣಕ್ಕೂ ಮನುಷ್ಯಮಾತ್ರರು ಇಲ್ಲವೆಂದೇ ಅರ್ಥ!
ಇನ್ನು ದರ್ಶನ್ ಮೈಸವರಿ ಸಾಕಿಕೊಂಡಿರುವ ಅಭಿಮಾನಿಗಳ ವಿಚಾರ. ಈವತ್ತಿಗೂ ದರ್ಶನ್ ಮಾಡಿರೋದು ಸರಿಯಿಲ್ಲವೆಂಬುದೂ ಸೇರಿದಂತೆ, ಆತನ ಠೇಂಕಾರಗಳ ಬಗ್ಗೆ ತಕರಾರಿಟ್ಟುಕೊಂಡಿರುವ ಅಭಿಮಾನಿ ವರ್ಗವಿದೆ. ಅಂಥವರ ಅಭಿಪ್ರಾಯದ ಎದೆ ಮೇಲೆ ಸವಾರಿ ನಡೆಸುತ್ತಿರೋದು ಪಕ್ಕಾ ಅಯೋಗ್ಯದ ದಂಡು. ದರ್ಶನ್ ಪರ ಅಂಧಾಭಿಮಾನ ಹೊಮ್ಮಿಸುತ್ತಲೇ, ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿಸುವಲ್ಲಿಯೂ ಈ ಅಯೋಗ್ಯರ ಪಾಲಿದ್ದೇ ಇದೆ. ಒಂದು ವೇಳೆ ಇವರೆಲ್ಲರ ಜಾಗದಲ್ಲಿ ತಲೆ ನೆಟ್ಟಗಿರುವವರಿದ್ದಿದ್ದರೆ ಇಂಥಾ ಹಾಡಿನ ಬಗ್ಗೆ ವಿಮರ್ಶೆ ಮಾಡುತ್ತಿದ್ದರು. ಇದು ಬೇಡವಾಗಿತ್ತೆಂಬಂಥಾ ಮಾತುಗಳನ್ನಾದರೂ ಆಡುತ್ತಿದ್ದರು. ವಿಜಯಲಕ್ಷ್ಮಿಯನ್ನು ಅತ್ತಿಗೆ ಅಂತಲೇ ಕರೆಯೋ ಈ ಮಂದಿಗೆ, ಅದೇ ಹೆಣ್ಣುಮಗಳಿಗೆ ಬೈದಿದ್ದ ಬೈಗುಳದ ಹಿಂಚುಮುಂಚಿನ ಸಾಲೊಂದು ಹಾಡಾದಾಗ ಅಸಹ್ಯ ಅನ್ನಿಸಲೇ ಇಲ್ಲ. ಅದು ಅವರ ಮನಃಸ್ಥಿತಿಗೆ ಹಿಡಿದ ಕನ್ನಡಿಯೂ ಹೌದು. ಕಾನೂನು ಪ್ರಕಾರ ಮುಂದೇನಾಗುತ್ತದೋ ಗೊತ್ತಿಲ್ಲ. ಒಂದು ವೇಳೆ ದರ್ಶನ್ ಈ ಕೇಸಿನಿಂದ ಹೊರ ಬರುವ ಅವಕಾಶ ಸಿಕ್ಕರೆ, ಆತ ಕೂಡಲೆ ತನ್ನ ಸುತ್ತಲಿರೋ ಬಳಗವನ್ನು ಫಿಲ್ಟರ್ ಮಾಡಿಕೊಳ್ಳುವತ್ತ ಗಮನ ಹರಿಸಬೇಕಿದೆ. ಸೋ ಕಾಲ್ಡ್ ಸೆಲೆಬ್ರಿಟಿಗಳನ್ನು ಹದ್ದುಬಸ್ತಲಿಲಿಡಬೇಕಿದೆ. ಇಲ್ಲದೇ ಹೋದರೆ ಆತ ಮತ್ತೊಮ್ಮೆ ಜೈಲುಪಾಲಾಗಿ ನೆಮ್ಮದಿ ಕಳಕೊಳ್ಳೋದು ಶತಃಸ್ಸಿದ್ಧ!


