ಒಂದು ಕಾಲದಲ್ಲಿ ಲಿರುತೆರೆ ಜಗತ್ತಿನ ಅಷ್ಟೂ ರಿಯಾಲಿಟಿ ಶೋಗಳಲ್ಲಿ ಅತ್ಯಂತ ಜನಪ್ರಿಯತೆ ಪಡೆದುಕೊಂಡಿದ್ದ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು. ಆರಂಭದ ಒಂದೆರಡು ಸೀಜನ್ನುಗಳ ಮೂಲಕ ನಿಜಕ್ಕೂ ಪ್ರತಿಭಾನ್ವಿತ ಕಲಾವಿದರು ಬೆಳಕು ಕಂಡಿದ್ದರು. ಕನ್ನಡದ ಮಟ್ಟಿಗೆ ಅದು ಆ ಕಾಲಕ್ಕೆ ಹೊಸಾ ಬಗೆಯ ಶೋ ಆಗಿಯೂ ದಾಖಲಾಗಿತ್ತು. ನವರಸ ನಾಯಕ ಜಗ್ಗೇಶ್ ಸಾರಥ್ಯದಲ್ಲಿ ಶುರುವಾಗಿದ್ದ ಆ ಶೋ ಪ್ರೇಕ್ಷಕರನ್ನೆಲ್ಲ ಹಿಡಿದಿಟ್ಟುಕೊಂಡು ನೋಡಿಸಿಕೊಂಡಿತ್ತು. ಒಂದೊಳ್ಳೆ ತಂಡದ ಸಾಥ್‌ನೊಂದಿಗೆ ಮೂಡಿಕ ಬಂದಿದ್ದ ಆ ಶೋ ನಂತರದ ಸೀಜನ್ನುಗಳಲ್ಲಿ ಸವಲಕಲಾಗಿತ್ತು. ಯಾವ ಪ್ರೇಕ್ಷಲರು ಕಾದು ಕುಂತು ನೋಡುತ್ತಿದ್ದರೋ, ಅವರೇ ಕುಟುಂಬ ಸಮೇತರಾಗಿ ನೋಡಲು ಹಿಂದೇಟು ಹಾಕುವಷ್ಟು ಕೊಳಕಾಗಿಯೂ ಬದಲಾಗಿತ್ತು. ಒಂದಷ್ಟು ಗ್ಯಾಪಿನ ನಂತರ ಇದೀಗ ಕಾಮಿಡಿ ಕಿಲಾಡಿಗಳು ಶೋ ಮತ್ತೆ ಶುರುವಾಗಿದೆ!

ಹಾಗಂತ, ಈ ಬಾರಿ ಕಾಮಿಡಿ ಕಿಲಾಡಿಗಳು ಶುರುವಾಗುತ್ತಿರೋ ವಿಚಾರ ತಿಳಿದಾಕ್ಷಣ ಕಿರುತೆರೆ ಪ್ರೇಕ್ಷಕರ ನಡುವೆ ಯಾವ ಸಂಚಲನವೂ ಮೂಡಿಲ್ಲ. ಯಾಕೆಂದರೆ ಪುಳಕದ ಜಾಗವನ್ನು ಮತ್ತೆಂಥಾ ಅಸಹ್ಯಗಳನ್ನು ತಂದು ಸುರಿಯುತ್ತಾರೋ ಎಂಬಂಥಾ ಪುಕಪುಕವೇ ಆವರಿಸಿಕೊಂಡಿದೆ. ಈ ಬಾರಿ ಅದೇ ಜಗ್ಗೇಶ್, ಅವರ ಮಗ್ಗುಲಲ್ಲಿ ಯೋಗರಾಜ ಭಟ್ ಜಡ್ಜುಗಳಾಗಿದ್ದಾರೆ. ತಾರಾ ಮೇಡಮ್ಮು ಹೊಸತಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದಿನ ಒಂದಷ್ಟು ಸೀಜನ್ನುಗಳು ತೋಪೆದ್ದಿದ್ದರಿಂದ ಹೊಸಾ ಬಗೆಯ ಹಾಸ್ಯದ ಮೂಲಕ ಈ ಶೋ ಮನ ಮುಟ್ಟಬಹುದೇನೋ ಎಂಬಂಥಾ ನಿರೀಕ್ಷೆ ಇತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರೋಮೋಗಳನ್ನು ಗಮನಿಸಿದರೆ ಈ ಬಾರಿಯೂ ಜಗ್ಗಣ್ಣ ಹಳೇ ವರಸೆಯೊಂದಿಗೆ ಆಗಮಿಸಿದಂತಿದೆ.

ಸೆರಗು ಜಾರಿಸೋದು, ಹಾಲು ಕುಡಿಯೋದು ಮುಂತಾದ ಸವಕಲೆದ್ದ ಅಸಹ್ಯದ ಸರಕುಗಳನ್ನೇ ಈ ಸೀಜನ್ನಿನಲ್ಲೂ ನೆಚ್ಚಿಕೊಂಡಿದ್ದಾರಾ ಅಂತೊಂದು ಅನುಮಾನ ಬಲವಾಗಿದೆ. ಜಗ್ಗೇಶ್ ಓರ್ವ ನಟನಾಗಿ ಮೆಚ್ಚುಗೆಯಾಗುತ್ತಾರೆ. ಯಾವುದೇ ಘಳಿಗೆಯಲ್ಲಾದರೂ ತಮ್ಮ ವಿಶಿಷ್ಟ ಮ್ಯಾನರಿಸಂ, ಮಾತಿನ ಓಘದ ಮೂಲಕ ನಗುವಿನ ಚಿಲುಮೆ ಮೂಡಿಸಲೂ ಅವರು ಶಕ್ತರು. ಆದರೆ, ಈ ಶೋನ ಕಡೇಯ ಸೀಜನ್ನುಗಳಲ್ಲಿ ಅವರ ಪ್ರತಿಭೆಯೆಲ್ಲವೂ ವಿಚಿತ್ರ ಆಂಗಿಕ ಅಭಿನಯದಲ್ಲಿ ಕಳೆದು ಹೋಗಿತ್ತು. ಡಬಲ್ ಮೀನಿಂಗ್ ಡೈಲಾಗುಗಳನ್ನೇ ಈ ಆಸಾಮಿ ಸಂಭ್ರಮಿಸುತ್ತಿರುವ ಪರಿ ಕಂಡು ಮಾನವಂತರೆಲ್ಲ ಕಂಗಾಲಾಗಿದ್ದರು. ಅದುಜ ಈ ಸೀಜನ್ನಿನಲ್ಲಿಯೂ ಮರುಕಳಿಸದಿರಲಿ. ಡಬಲ್ ಮೀನಿಂಗ್ ಡೈಲಾಗುಗಳ ಕೊಚ್ಚೆಯಲ್ಲಿ ಅಸಲೀ ಪ್ರತಿಭೆ ಹುಗಿದು ಹೋಗದಿರಲೆಂಬುದು ಹಾರೈಕೆ!
