ಬಹುಶಃ ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸ್ಪರ್ಧಿಯೋರ್ವನ ಗೆಲುವು ಬಹುತೇಕರನ್ನು ಸಂತೃಪ್ತಗೊಳಿಸಿದೆ. ಆರಂಭದಲ್ಲಿ ಕಿಚ್ಚಾ ಸುದೀಪ್ ಈ ಸೀಜನ್ನು ಸಂಪೂರ್ಣವಾಗಿ ಡಿಫರೆಂಟಾಗಿರುತ್ತದೆಂದು ಎದೆ ತಟ್ಟಿಕೊಂಡು ಹೇಳಿದ್ದರು. ಆದರೆ, ಆಟ ಚಾಲೂ ಆಗಿ ವಾರ ಕಳೆದರೂ ಹೇಳಿಕೊಳ್ಳುವಂಥ ಹೊಸತನವೇನೂ ಕಾಣಿಸಿರಲಿಲ್ಲ. ಹಾಗೆ ನೋಡಿದರೆ, ಈ ಬಾರಿ ಸ್ಪರ್ಧಿಗಳೂ ಕೂಡಾ ನಿರೀಕ್ಷೆ ಹುಟ್ಟು ಹಾಕುವಂತಿರಲಿಲ್ಲ. ಇಂಥವರ ನಡುವೆ ಗಿಲ್ಲಿ ನಟ ಇದ್ದರೂ ಈ ಮಟ್ಟದ ಸ್ಪರ್ಧೆ ಆತನ ಕಡೆಯಿಂದ ಪ್ರದರ್ಶನಗೊಳ್ಳಬಹುದೆಂಬ ನಿರೀಕ್ಷೆ ಯಾರೆಂದರೆ ಯಾರಿಗೂ ಇರಲಿಲ್ಲ. ಪ್ರತೀ ಸಾರಿಯೂ ಕಾಮಿಡಿ ಕೋಟಾ ಒಂದಿರುತ್ತದಲ್ಲಾ? ಅದರ ಮೂಲಕ ತೂರಿಕೊಂಡವರ ಕಾಮಿಡಿ ಕೂಗಾಟದ ನಡುವೆ ಕಳೆದು ಹೋದದ್ದೇ ಹೆಚ್ಚು. ಅಂಥಾ ಪರಂಪರೆಯನ್ನು ಪಟ್ಟಂಪೂರಾ ಅದಲುಬದಲಾಗಿಸಿರುವ ಗಿಲ್ಲಿ ಕೋಟಿಗಟ್ಟಲೆ ಓಟುಗಳನ್ನು ಪಡಡೆಯುವ ಮೂಲಕ ಅಕ್ಷರಶಃ ಇತಿಹಾಸ ಸೃಷ್ಟಿಸಿದ್ದಾನೆ!
ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್ ಓದಿಕೊಂಡು ನಟಿಸುತ್ತಾ ಕಾಮಿಡಿ ಪಟುಗಳೆನ್ನಿಸಿಕೊಂಡವರು ಸಾಕಷ್ಟಿದ್ದಾರೆ. ಡಬಲ್ ಮೀನಿಂಗ್ ಜೋಕುಗಳ ಮೂಲಕ ಚಾಲ್ತಿಯಲ್ಲಿದ್ದು, ಈ ಬಾರಿ ಸ್ಪರ್ಧಿಯಾಗಿದ್ದ ಚಂದ್ರಪ್ರಭಾ ಕೂಡಾ ಅಂಥವರಲ್ಲೊಬ್ಬ. ಈತ ಆಯಾ ಸಂದರ್ಭಕ್ಕನುಗುಣವಾಗಿ ಹಾಸ್ಯ ಸೃಷ್ಟಿಸಲಾಗದೆ ವಾರದೊಪ್ಪತ್ತಿನಲ್ಲಿಯೇ ಜುಟ್ಟು ಕೆದರಿಕೊಂಡಿದ್ದ. ಈ ಹಿಂದೆ ಕುರಿಪ್ರತಾಪ ಕೂಡಾ ಹೀಗೆಯೇ ಕೆಕರುಮಕರಾಗಿ ನಿಂತಿದ್ದ. ಆದರೆ, ಈ ಗಿಲ್ಲಿಯದ್ದು ಅದೆಲ್ಲದರಾಚೆಗಿನ ಪ್ರತಿಭೆ. ಆ ಕ್ಷಣಕ್ಕೆ ಸರಿ ಹೊಂದುವಂತೆ ಮಾತಾಡಿ, ಎಲ್ಲರೂ ನಗುವಂತೆ ಮಾಡೋದಿದೆಯಲ್ಲಾ? ಅದಕ್ಕೆ ಅಸೀಮವಾದೊಂದು ಸೆನ್ಸ್ ಆಫ್ ಹ್ಯೂಮರ್ ಬೇಕಾಗುತ್ತೆ. ಅದನ್ನು ಅರೆದು ಕುಡಿದಂತಿರುವ ಗಿಲ್ಲಿ ಯಾವ ಹಂತದಲ್ಲಿಯೂ ಮುಖವಾಡ ಧರಿಸದೆ, ಯಾರ ಸವಾಲಿಗೂ ಜಗ್ಗದೆ, ಬಿಗ್ ಬಾಸ್ ಮನೆಯ ಅಸಹನೆಗಳ ಸಾಗರವನ್ನು ನಗುವಿನ ಹಾಯಿದೋಣಿಯ ಮೂಲಕವೇ ದಾಟಿಕೊಂಡಿದ್ದಾನೆ.
ಬಹುಶಃ ಬಿಗ್ ಬಾಸ್ ಶೋನ ಹಿಸ್ಟರಿಯಲ್ಲಿಯೇ ಓರ್ವ ಸ್ಪರ್ಧಿ ಈ ಪರಿಯಾಗಿ ಕ್ರೇಜ್ ಮೂಡಿಸಿದ್ದು ಇದೇ ಮೊದಲು. ಆರಂಭದಲ್ಲಿ ಕಾವ್ಯಾಳೊಂದಿಗಿನ ಪ್ರೇಮ ಪುರಾಣದ ಮೂಲಕ ಚಾಲ್ತಿಯಲ್ಲಿದ್ದ ಗಿಲ್ಲಿ, ಆ ನಂತರದಲ್ಲಿ ಸ್ವತಂತ್ರ ಅಸ್ತಿತ್ವ ಕಂಡುಕೊಂಡಿದ್ದ. ಒಂದಷ್ಟು ಹಂತಗಳಲ್ಲಿ ವಿನಾ ಕಾರಣ ಯಾರ್ಯಾರನ್ನೋ ಕೆಣಕಿ ರಾಡಿಯೆಬ್ಬಿಸುತ್ತಾನೆಂಬಂತೆ ಅಸಹನೆ ಮೂಡಿದರೂ, ಅವನಿಲ್ಲದೆ ಈ ಶೋ ಇರಲು ಸಾಧ್ಯವಿಲ್ಲ ಎಂಬಂಥಾ ಭಾವ ಮೂಡುವಂತೆ ಮಾಡಿದ್ದ. ಯಾವ ದಿಕ್ಕಿನಿಂದ ನೋಡಿದರೂ ಈ ಬಾರಿಯದ್ದು ಗಿಲ್ಲಿಯ ಒನ್ ಮ್ಯಾನ್ ಶೋ ಎಂಬುದರಲ್ಲಿ ಎರಡು ಮಾತಿಲ್ಲ. ನಿಂತಲ್ಲಿ ಕುಂತಲ್ಲಿ ಕಾಮಿಡಿ ಮಾಡುತ್ತಾ, ಮನೆ ಮಂದಿಯ ಕದಲಿಕೆಯನ್ನು ಸೂಕ್ಷ್ಮವಾಗಿ ಮನಗಂಡು ಟಕ್ಕರ್ ಕೊಡುತ್ತಾ ಸಾಗಿ ಬಂದ ಗಿಲ್ಲಿ ಟಾಸ್ಕುಗಳಲ್ಲಿಯೂ ಹಿಂದೆ ಬಿದ್ದವನಲ್ಲ. ಬರ ಬರುತ್ತಾ ಕೆಲ ಸ್ಪರ್ಧಿಗಳತ್ತ ಒಲವು ಹೊಂದಿದ್ದವರೂ ಕೂಡಾ ತನಗೇ ಓಟು ಹಾಕುವಂತೆ ಮಾಡುವಲ್ಲಿಯೂ ಗಿಲ್ಲಿ ಗೆದ್ದಿದ್ದ.
ಹೀಗೆ ಬಿಗ್ ಬಾಸ್ನಂಥಾ ದೊಡ ರಿಯಾಲಿಟಿ ಶೋನ ವಿನ್ನರ್ ಆಗಿರುವ ಗಿಲ್ಲಿಯ ಗೆಲುವು ಕರುನಾಡ ಸಂಭ್ರಮವಾಗಿರೋದಕ್ಕೆ ಕಾರಣ ಆತನ ಹಿನ್ನೆಲೆ. ಮಳವಳ್ಳಿಯ ಸಾಮಾನ್ಯ ರೈತಾಪಿ ವರ್ಗದಲ್ಲಿ ಹುಟ್ಟಿದ್ದ ನಟರಾಜ್ ಕೊರೋನಾ ಕಾಲಘಟ್ಟದಲ್ಲಿ ನಲ್ಲಿಮೂಳೆ ಅಂತೊಂದು ಕಿರುಚಿತ್ರದ ಮೂಲಕ ಗಿಲ್ಲಿ ನಟನಾಗಿ ಪರಿಚಯಗೊಂಡಿದ್ದ. ಮಾರುದ್ಧ ಡೈಲಾಗುಗಳನ್ನು ತಡವರಿಸದೆ ಹೇಳುತ್ತಿದ್ದ ಈ ಹುಡುಗನ ಚಾತುರ್ಯ, ನಟನಾ ಶೈಲಿ ಕಂಡು ವೀಕ್ಷಕರು ಥ್ರಿಲ್ ಆಗಿದ್ದರು. ಈ ನಡುವೆ ಸಿನಿಮಾ ಭಾಗವಾಗುವ ಕನಸು ಹೊತ್ತು ಬೆಂಗಳೂರಿಗೆ ಹೊರಟಿದ್ದ ಗಿಲ್ಲಿ ನಟ, ಅಲ್ಲಿಯೂ ನಾನಾ ವಿಭಾಗದಲ್ಲಿ ಕೆಲಸ ಮಾಡಿದ್ದ. ಆ ಬಳಿಕ ಕಾಮಿಡಿ ಕಿಲಾಡಿಗಳು ಶೋ ಆತನ ಪ್ರತಿಭೆಯನ್ನು ಬೆಳಗಿಸಿತ್ತು. ಆ ಬಳಿಕ ನಾನಾ ಶೋಗಳಲ್ಲಿ ಪ್ರಾಪರ್ಟಿ ಕಾಮಿಡಿ ಅಂತೆಲ್ಲ ಸದ್ದು ಮಾಡಿದ್ದ ಗಿಲ್ಲಿ, ಬಿಗ್ ಬಾಸ್ ಮನೆ ತಲುಪಿದ್ದು, ಅಲ್ಲಿಂದ ವಿನ್ನರ್ ಆಗಿ ಹೊರ ಬಂದಿದ್ದೆಲ್ಲವೂ ಪ್ರತಿಭೆಯಿಂದಲೇ.
ಹೀಗೊಂದು ಗೆಲುವು ದಕ್ಕಿಸಿಕೊಂಡಿಕರುವ ಈ ಹುಡುಗನನ್ನು ಯಾರಾದರೂ ದಾರಿ ತಪ್ಪಿಸಿ ಹಳ್ಳ ಹಿಡಿಸಬಹುದೆಂಬ ಆತಂಕವೂ ಇಲ್ಲ. ಮುಗ್ಧತೆಯನ್ನು ಮೈಗೂಡಿಸಿಕೊಂಡಿರೋ ಗಿಲ್ಲಿಗೆ ಲೋಕಜ್ಞಾನವಿದೆ. ಯಾರನ್ನು ಹೇಗೆ ಸಂಭಾಳಿಸಬೇಕೆಂಬ ಅರಿವಿದೆ. ಎತ್ತರಕ್ಕೇರುವ ಕನಸಿನ ಜೊತೆಗೆ, ಹುಟ್ಟಿದೂರಲ್ಲಿಯೇ ಬೇರಿಳಿಸಿ ಬೆಳೆಯಬೇಕೆಂಬ ಅಪ್ಪಟ ರೈತಾಪಿ ತುಮುಲವೂ ಇದೆ. ಆತ ಇನ್ನು ಮುಂದೆಯೂ ಈಗಿರುವ ಗಿಲ್ಲಿಯಾಗಿಯೇ ಉಳಿಯುವಂತಾದರೆ ಕರುನಾಡು ಮತ್ತಷ್ಟು ಸಂಭ್ರಮಿಸುತ್ತದೆ. ಈ ಬಾರಿ ಬಿಗ್ ಬಾಸ್ ನೋಡದ ಮಂದಿಯನ್ನೂ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಕ್ಲಿಪಿಂಗ್ಸ್ ಮೂಲಕ ಸೆಳೋಎದುಕೊಂಡ ಕೀರ್ತಿಯೂ ಗಿಲ್ಲಿಗೆ ಸಲ್ಲುತ್ತದೆ. ನಿಖರವಾಗಿ ಹೇಳೋದಾದರೆ, ಗಿಲ್ಲಿಯದ್ದು ಪರಿಪೂರ್ಣ ಗೆಲುವು. ಅದು ಆತನ ಅಗಾಧ ಪ್ರತಿಭೆಗೆ ಸಂದ ಗೌರವವೂ ಹೌದು…
keywords: gilli, gillinata, winner, biggboss, biggbosskannada, kiccha

