ಬಿಗ್ ಬಾಸ್ ಸೀಜನ್೧೨ರ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಿಚ್ಚಾ ಸುದೀಪ್ ಈ ಎರಡ್ಮೂರು ವಾರಗಳಲ್ಲಿಯೇಒಂದಷ್ಟು ಮೆಚ್ಚುಗೆ ಗಳಿಸುವಂತೆಯೂ ನಡೆದುಕೊಂಡಿದ್ದಾರೆ. ರಕ್ಷಿತಾ ಎಂಬ ಪುಟ್ಟ ಹುಡುಗಿಯನ್ನು ಕಾಡಿಸಿದವರಿಗೆ ಮುಲಾಜಿಲ್ಲದೆ ಬೆವರಿಳಿಸುವ ಮೂಲಕ ಕಿಚ್ಚನ ನಡೆ ಎರಲ್ಲರಿಗೂ ಹಿಡಿಸಿದೆ. ಆರಂಭದಲ್ಲಿ ಸಪ್ಪೆ ಸಪ್ಪೆಯೆಂಬಂತೆ ಬಿಂಬಿಸಿಕೊಂಡಿದ್ದ ಈ ಸೀಜನ್ ಒಂದಷ್ಟು ಸ್ಪರ್ಧಿಗಳ ಕಾರಣದಿಂದ ಕಳೆಗಟ್ಟಿಕೊಂಡಿದೆ. ಸುಖಾಸುಮ್ಮನೆ ಬಿಲ್ಡಪ್ಪು ಕೊಟ್ಟುಕೊಂಡು, ಕೋಟಿಗಳ ಕಥೆ ಪುಂಗಿದ್ದ ನಾಯಿ ಸತೀಶನಂಥವರು ಹೊರಬಿದ್ದು ಮತ್ತೊಂದಷ್ಟು ಹೊಸಾ ಸ್ಪರ್ಧಿಗಳ ಎಂಟ್ರಿಯಾಗಿದೆ. ಇದೆಲ್ಲದರ ನಡುವೆ ಅತ್ತ ನಟಿಯೂ ಅಲ್ಲದ ಇತ್ತ ಹೋರಾಟಗಾರ್ತಿಯೂ ಅಲ್ಲದ ಅಶ್ವಿನಿ ಎಂಬಾಕೆಯ ಅಟಾಟೋಪ ಮೇರೆ ಮೀರಿದೆ.

ಬಿಗ್‌ಬಾಸ್ ಎಂಬುದು ವ್ಯಕ್ತಿತ್ವಗಳ ನಡುವಿನ ಆಟ ಎಂಬಂತೆ ಆಯೋಜಕಲರು ಹೇಳುತ್ತಾರೆ. ಇಂಥಾ ವ್ಯಕ್ತಿತ್ವಗಳ ನಡುವೆ ಇಷ್ಟೂ ಸೀಜನ್ನುಗಳಲ್ಲಿ ವಿಕೃತಿಗಳೂ ಅನಾವರಣಗೊಂಡಿವೆ. ಆದರೆ, ಮನುಷ್ಯರನ್ನು ಮನುಷ್ಯರಂತೆ ಕಾಣಲಾರದ ಜಾತಿ ಬೇಸಿನ ವಿಕೃತಿ ಮಾತ್ರ ಇದುವರೆಗೂ ಕಾಣಿಸಿರಲಿಲ್ಲ. ಅಂಥಾದ್ದೊಂದು ಅಸಹ್ಯಕರ ವಿದ್ಯಮಾನದ ಕೇಂದ್ರಬಿಂದುವಾಗಿರುವಾಕೆ ಅಶ್ವಿನಿ. ಒಂದು ಕಾಲದಲ್ಲಿ ನಟಿಯಂತಿದ್ದು, ನಂತರದ ದಿನಗಳಲ್ಲಿ ಕನ್ನಡ ಪರ ಹೋರಾಟಗಾರ್ತಿಯಾಗಿ ರೂಪಾಂತರಗೊಂಡಿದ್ದಾಕೆ ಅಶ್ವಿನಿ. ಒಂದಷ್ಟು ಪ್ರೌಢಿಮೆ ಹೊಂದಿರುವಂತೆ ಕಾಣಿಸುತ್ತಿದ್ದ ಈಕೆ ಪುಟ್ಟ ಹುಡುಗಿ ರಕ್ಷಿತಾಳನ್ನು ಟಾರ್ಗೆಟ್ ಮಾಡಿದ ರೀತಿ, ತನಗೆ ಪರಿಶಿಷ್ಟ ಜಾತಿಯವರನ್ನ ಕಂಡರಾಗೋದಿಲ್ಲ, ಅವುಗಳ ಕಥೆ ಇಷ್ಟೆ ಎಂಬಂಥಾ ಪಿಸುಮಾತುಗಳ ಮೂಲಕ ಈಕೆಯ ಅಸಲೀ ವ್ಯಕ್ತಿತ್ವ ಅನಾವರಣಗೊಂಡಿದೆ.

ಹೀಗೆ ಬಿಗ್ ಬಾಸ್‌ನಂಥಾ ದೊಡ್ಡ ಶೋ ಮೂಲಕ ಜಾತಿ ನಿಂದನೆ ಮಾಡಿದ ಅಶ್ವಿನಿ ವಿರುದ್ಧ ಈಗ ದೂರು ದಾಖಲಾಗಿದೆ. ಆಕೆ ಬಿಗ್ ಬಾಸ್ ಮನೆಯ ಹಿತ್ತಿಲಿಂದ ಹೊರ ಬಂದು ಕ್ಷಮೆ ಕೇಳಿ ಮತ್ತೆ ತೂರಿಕೊಳ್ಳಬಹುದು. ಆದರೆ, ತನ್ನ ಮಾತುಗಳಿಂದಲೇ ಆಸ್ವಿನಿ ಮಾಡಿಕೊಂಡ ಯಡವಟ್ಟು ಬಿಗ್ ಬಾಸಿಂದ ಬಂದ ಮೇಲೂ ಕಾಡಲಿದೆ. ಕೆಲ ಅವಿವೇಕಿಗಳು ಈಗ ಎಲ್ಲಿದೆ ಜಾತಿ ಅಂತೆಲ್ಲ ಹ್ಞೂಂಕರಿಸುತ್ತಾರೆ.. ಜಗತ್ತು ಮುಂದುವರೆದರೂ ಜಾತಿ ವಿಷ ಮನಸುಗಳಿಗೆ ಹೇಗೆ ಬೆರೆಸಲ್ಪಟ್ಟಿದೆ ಅನ್ನುವುದಕ್ಕೆ ಅಶ್ವಿನಿಯ ಮೆಂಟಾಲಿಟಿಯೇ ಸಾಕ್ಷಿ.ತನ್ನ ಜೊತೆಗಾರ ಸ್ಪರ್ಧಿಯ ಮೇಲೆ ಜಾತಿ ಭೂಮಿಕೆಯಲ್ಲಿ ಹೇಸಿಗೆ ವ್ಯಕ್ತಪಡಿಸುತ್ತಾಳೆಂದರೆ, ಈಕೆಯನ್ನು ಹೋರಾಟಗಾರ್ತಿ ಅಂತಿರಲಿ; ಮನುಷ್ಯಳಾಗಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ!
