ಕನ್ನಡದ ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರ ಪಕ್ಕದ ತೆಲುಗು ನಾಡಿನಲ್ಲಿಯೂ ಒಂದು ಮಟ್ಟಕ್ಕೆ ಫ್ಯಾನ್ ಬೇಸ್ ಹೊಂದಿದ್ದಾರೆ. ಈ ಕಾರಣದಿಂದಲೇ ಇದುವರೆಗೂ ಆರು ಸಿನಿಮಾಗಳಲ್ಲಿ ಅವರು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವುಗಳಲ್ಲಿ ಒಂದಷ್ಟು ಸಿನಿಮಾಗಳು ಯಶ ಕಂಡರೆ, ಮತ್ತೊಂದಷ್ಟು ಸಾಧಾರಣ ಗೆಲುವಿಗಷ್ಟೇ ತೃಪ್ತಿ ಪಡೆದುಕೊಂಡಿದ್ದವು. ಇಂಥಾ ಉಪ್ಪಿ ಬಹುಮುಖ್ಯ ಪಾತ್ರದಲ್ಲಿ ನಟಿಸಿರುವ ತೆಲುಗಿನ ಏಳನೇ ಸಿನಿಮಾ `ಆಂಧ್ರ ಕಿಂಗ್ ತಾಲೂಕ’. ರಾಮ್ ಪೋತಿನೇನಿ ನಿರ್ದೇಶನ ಈ ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಗೊಂಡಿತ್ತು. ಒಂದಷ್ಟು ಸಕಾರಾತ್ಮಕ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದ ಈ ಸಿನಿಮಾ ಮುಕ್ಕರಿದು ಹದಿನೇಳು ಚಿಲ್ಲರೆ ಕೋಟಿ ಕಲೆಕ್ಷನ್ನು ಮಾಡುವಷ್ಟರಲ್ಲಿ ಏದುಸಿರು ಬಿಟ್ಟಿದೆ!
ರಿಯಲ್ ಸ್ಟಾರ್ ಉಪ್ಪಿನ ನಟನೆಯ ತಾಕತ್ತೇನೆಂಬುದು ತೆಲುಗು ಪ್ರೇಕ್ಷಕರಿಗೆ ಈಗಾಗಲೇ ಅರ್ಥವಾಗಿದೆ. ಅತ್ಯಂತ ವಿಶಿಷ್ಟವಾದ ಪಾತ್ರಗಳಲ್ಲಿ ನಟಿಸುವ ಮೂಲಕ ಅವರತು ಈಗಾಗಲೇ ತೆಲುಗಿನಲ್ಲಿ ಬಹುಬೇಡಿಕೆಯನ್ನೂ ಸೃಷ್ಟಿಸಿಕೊಂಡಿದ್ದಾರೆ. ಉಪ್ಪಿಗಿರುವ ಅಂಥಾ ಜನಪ್ರಿಯತೆಯ ದೆಸೆಯಿಂದಲೇ ನಿರ್ದೇಶಕ ರಾಮ್ ಪೋತಿನೇನಿ ಆಂಧ್ರ ಕೀಮಗ್ ತಾಲೂಕದ ಪ್ರಧಾನ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರೆಂಬುದು ನಿರ್ವಿವಾದ. ಆದರೆ, ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶ ಕಾಣುವಲ್ಲಿ ಎರಡನೇ ವಾರದ ಅಂತ್ಯದ ಹೊತ್ತಿನಲ್ಲಿ ಹಿನ್ನಡೆ ಅನುಭವಿಸಿದೆ. ಇನ್ನೇನು ವಾರತದೊಪ್ಪತ್ತಿನಲ್ಲಿಯೇ ಎಲ್ಲ ಥಿಯೇಟರುಗಳಿಂದ ಎಗರಿಕೊಳ್ಳುವ ಅಪಾಯದಿಂದ ಬಾಲಯ್ಯನ ಅಖಂಡ ಈ ವಾರ ಮಟ್ಟಿಗೆ ಪಾರುಗಾಣಿಸಿದೆ.
ಸದರಿ ಸಿನಿಮಾ ಏದುಸಿರು ಬಿಡುತ್ತಾ ಮೊದಲ ವಾರ ದಾಟಿಕೊಳ್ಳುತ್ತಲೇ ಬಾಲಯ್ಯ ನಟಿಸಿರುವ ಅಖಂಡ೨ ಚಿತ್ರ ತೆರೆಗಾಣಲು ಸಜ್ಜಾಗಿತ್ತು. ಹೇಳಿಕೇಳಿ ಬಾಲಯ್ಯನ ಸಿನಿಮಾಗಳ ಆರಂಭ ಅದ್ದೂರಿಯಾಗಿರುತ್ತದೆ. ಅಖಂಡ ಮೊದಲ ಆವೃತ್ತಿ ಗೆದ್ದಿದ್ದರಿಂದಾಗಿ ಅದರ ಸೀಕ್ವೆಲ್ ಬಗ್ಗೆ ಸಹಜವಾಗಿಯೇ ಕುತೂಹಲವಿತ್ತು. ಒಂದು ವೇಳೆ ಅದು ನಿಗಧಿತ ದಿನಾಂಕದಂದೇ ಬಿಡುಗಡೆಯಾಗಿದ್ದರೆ ಆಂಧ್ರ ಕಿಂಗ್ ತಾಲೂಕಾ ಹೇಳ ಹೆಸರಿಲ್ಲದಂತಾಗುತ್ತಿತ್ತು. ಸದ್ಯ ಅಖಂಡ೨ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಈ ಕಾರಣದಿಂದಲೇ ಉಪ್ಪಿ ಸಿನಿಮಾಗೆ ಒಂದಷ್ಟು ಆಕ್ಸಿಜನ್ನು ಸಿಕ್ಕಂತಾಗಿದೆ. ರಾಮ್ ಪೋತಿನೇನಿ ನಿರ್ದೇಶನ ಮಾಡಿದ್ದ ಎರಡು ಸಿನಿಮಾಗಳು ಸೋಲು ಕಂಡಿದ್ದವು. ಅವುಗಳಿಗೆ ಹೋಲಿಸಿದರೆ ಆಂಧ್ರ ಕಿಂಗ್ ತಾಲೂಕಾ ಚೆಂದಗಿದೆ ಎಂಬಂಥಾ ಮಾತುಗಳು ಕೇಳಿ ಬರುತ್ತಿವೆ. ವಾರಾಂತ್ಯದಲ್ಲಿ ಚೇತರಿಸಿಕೊಂಡು, ಮುಂದಿನ ವಾರದ ಆರಂಭದಿಂದಲೇ ಒಳ್ಳೆ ಪ್ರದರ್ಶನ ಕಂಡರೆ ಆಂಧ್ರ ಕಿಂಗ್ ತಾಲೂಕ ಒಂದು ಮಟ್ಟದ ಗೆಲುವು ಕಾಣುವ ಸಾಧ್ಯತೆಗಳಿದ್ದಾವೆ!
Keywords: upendra, andhra king taluka, telugu movie, latest updates

