ತೆಲುಗು ಚಿತ್ರರಂಕ್ಕೆ ಕರುನಾಡಿಂದ ಹೋಗಿ ಮಿಂಚಿದ್ದವರಲ್ಲಿ ಪೂಜಾ ಹೆಗ್ಡೆ ಮುಂಚೂಣಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ. ರಶ್ಮಿಕಾಗೂ ಮೊದಲೇ ಸ್ಟಾರ್ ನಟಿಯಾಗಿ ಪೂಜಾ ತೆಲುಗಿನಲ್ಲಿ ನೆಲೆ ಕಂಡುಕೊಂಡಿದ್ದಳು. ತೆಲುಗು ನಾಡಲ್ಲಿ ಮಂಗಳೂರಿನ ಮೆರೆದಾಟ ಕಂಡು ಅಲ್ಲಿನ ನಟಿಯರೇ ಅವಾಕ್ಕಾಗಿ ಬಿಟ್ಟಿದ್ದರು. ಇಂಥಾ ಪೂಜಾ ಹೆಗ್ಡೆಯೇ ಅವಕಾಶವಿಲ್ಲದೆ ಪರಿತಪಿಸುವಂತಾಗುತ್ತದೆ, ಒಂದು ಗೆಲುವಿಗಾಗಿ ವರ್ಷಗಟ್ಟಲೆ ಹಪಾಹಪಿಸಬೇಕಾಗುತ್ತದೆಂದು ಬಹುಶಃ ಯಾರೆಂದರೆ ಯಾರೂ ಊಹಿಸಿರಲಿಕ್ಕಿಲ್ಲ. ಇಂಥಾ ಸ್ಥಿತಿಯಿಂದಾಗಿ ವರ್ಷಗಟ್ಟಲೆ ವನವಾಸ ಅನುಭವಿಸಿದ್ದ ಪೂಜಾ ಪಾಲಿಗೀಗ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ ಎಂಬಂಥಾ ಸುದ್ದಿ ಹಬ್ಬಿಕೊಂಡಿತ್ತು. ಆದರೀಗ ದಕ್ಷಿಣ ಭಾರತೀಯ ಚಿತ್ರರಂಗದ ದೊಡ್ಡ ಸಿನಿಮಾ ಅವಕಾಶವೊಂದು ಪೂಜಾಗೆ ಕೈತಪ್ಪಿದ ಸುದ್ದಿ ಜಾಹೀರಾಗಿದೆ!
ಹಾಗೆ ಪೂಜಾಳ ಕೈತಪ್ಪಿ ಹೋಗಿರೋದು ಧನುಷ್ ನಟನೆಯ ತಮಿಳು ಚಿತ್ರ. ಧನುಷ್ ಇದೀಗ ಕುಬೇರ ಚಿತ್ರದ ಯಶಸ್ಸಿನಿಂದ ಖುಷಿಗೊಂಡಿದ್ದಾರೆ. ಅದರ ಬೆನ್ನಲ್ಲಿಯೇ ಆತ ನಟಿಸಿರುವ ಇಡ್ಲಿ ಕಡೈ ಚಿತ್ರದ ಅಂತಿಮ ಘಟ್ಟದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಇಡ್ಲಿ ಕಡೈ ಬಗ್ಗೆಯೂ ಕೂಡಾ ಭಾರೀ ನಿರೀಕ್ಷೆಗಳಿದ್ದಾವೆ. ಅದು ಅಕ್ಟೋಬರ್‌ನಲ್ಲಿ ತೆರೆಗಾಣಲು ಮುಹೂರ್ತ ನಿಗಧಿಯಾಗಿದೆ. ಹೀಗಿರುವಾಗಲೇ ಮತ್ತೊಂದು ಬಿಗ್ ಬಜೆಟ್ ಚಿತ್ರಕ್ಕೆ ಧನುಷ್ ರೆಡಿಯಾಗಿತ್ತಿದ್ದಾರೆ. ಈಗ್ಗೆ ತಿಂಗಳುಗಳ ಹಿಂದೆ ಸದರಿ ಸಿನಿಮಾ ತಯಾರಿ ಆರಂಭ ವಾಗಿತ್ತು. ಅದರಲ್ಲಿ ಮಂಗಳೂರು ಹುಡುಗಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸೋದು ಪಕ್ಕಾ ಅಂತಲೂ ಸುದ್ದಿ ಹಬ್ಬಿಕೊಂಡಿತ್ತು. ಅದೀಗ ಸುಳ್ಳಾಗಿಬಿಟ್ಟಿದೆ!
ಯಾಕೆಂದರೆ, ಅಧಿಕೃತವಾಗಿಯೇ ಈ ಸಿನಿಮಾದಲ್ಲಿ ಮಮಿತಾ ಬೈಜು ನಾಯಕಿಯಾಗಿರೋ ವಿಚಾರ ಘೋಶಣೆಗೊಂಡಿದೆ. ಇದು ವಿಘ್ನೇಶ್ ರಾಜಾ ನಿರ್ದೇಶನದ ಚಿತ್ರ. ಈ ಸಿನಿಮಾ ಘೋಶಣೆಯಾದ ಕ್ಷಣದಿಂದಲೂ ಕೂಡಾ ಪೂಜಾ ಹೆಗ್ಡೆಯೇ ನಾಯಕಿ ಎಂಬಂಥಾ ಸುದ್ದಿಗಳು ಬಹರಿದಾಡುತ್ತಿದ್ದವು. ಈ ಮೂಲಕ ತನ್ನ ವೃತ್ತಿ ಬದುಕಿಗೆ ಕವುಚಿಕೊಂಡಿದ್ದ ಗ್ರಹಣ ಕಳೆದೀತೆಂಬ ತಟುಕು ನಿರೀಕ್ಷೆ ಪೂಜಾಗೂ ಇದ್ದಂತಿತ್ತು. ಆದರೆ, ನಸೀಬೆಂಬುದು ಇಲ್ಲೂ ಕೂಡಾ ಕೈಕೊಟ್ಟಿದೆ. ಅದರ ಫಲವಾಗಿಯೇ ಪ್ರೇಮಲು ಖ್ಯಾತಿಯ ಮಮಿತಾ ಬೈಜು ಧನುಷ್‌ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಪ್ರೇಮಲು ನಂತರ ನಿರಂತರ ಅವಕಾಶ ಗಿಟ್ಟಿಸಿಕೊಳ್ಳುತ್ತಿರೋ ಮಮಿತಾಗಿಲ್ಲಿ ವಿಶೇಷ ಪಾತ್ರ ಸಿಕ್ಕಿದೆಯಂತೆ!