ಗೊಂದಷ್ಟು ವರ್ಷಗಳಿಂದ ಅಭಿಮಾನಿ ಬಳಗ (actress anushka shetty) ಅನುಷ್ಕಾ ಶೆಟ್ಟಿಯನ್ನು ಮಿಸ್ ಮಾಡಿಕೊಳ್ಳುತ್ತಿತ್ತು. ಬಾಹುಬಲಿ ನಂತರದಲ್ಲಿ ಅನುಷ್ಕಾ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದದ್ದು ನಿಜ. ಆದರೇಕೋ ಆ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ. ಸೈರಾ ನರಸಿಂಹ ರೆಡ್ಡಿಯಂಥಾ ಪ್ಯಾನಿಂಡಿಯಾ ಸಿನಿಮಾ ಕೂಡಾ ಮುಗ್ಗರಿಸಿತ್ತು. ಕೊರೋನಾ ಕಾಲಘಟ್ಟದಿಂದ ಹಿಡಿದು ಇಲ್ಲಿಯವರೆಗೂ ಅನುಷ್ಕಾ ಅಭಿಮಾನಿಗಳ ಪಾಲಿಗೆ ಶುಷ್ಕ ವಾತಾವರಣವೊಂದು ಎದುರುಗೊಳ್ಳುತ್ತಾ ಬಂದಿತ್ತು. ಇದೀಗ ಮತ್ತೆ ಭಾಗಮತಿ ಮೈ ಕೊಡವಿಕೊಂಡು ಫಾರ್ಮಿಗೆ ಮರಳಿದ್ದಾಳೆ. ಅನುಷ್ಕಾ ಬರ್ತ್‌ಡೇ ಸ್ಪೆಷಲ್ ಎಂಬಂತೆ ಘಾಟಿ (ghaati movie) ಚಿತ್ರದ ಫಸ್ಟ್ ಲುಕ್ ಗ್ಲಿಂಪ್ಸ್ ಬಿಡುಗಡೆಗೊಂಡಿದೆ. ಇದರಲ್ಲಿ ಈಕೆ ಅಬ್ಬರಿಸಿರುವ ಪರಿ ಕಂಡು ಅಭಿಮಾನಿಗಳೆಲ್ಲ ಅಕ್ಷರಶಃ ಥ್ರಿಲ್ ಆಗಿದ್ದಾರೆ!

ಕಳೆದ ವರ್ಷವೇ ಕ್ರಿಷ್ ಜಗರ್ಲಮುಡಿ ನಿರ್ದೇಶನದ ಚಿತ್ರಕ್ಕೆ ಅನುಷ್ಕಾ ಶೆಟ್ಟಿ ಒಪ್ಪಿಗೆ ಸೂಚಿಸಿದ್ದರು. ಅದರಲ್ಲಿ ಸ್ತ್ರೀಕೇಂದ್ರಿತ ಸಂಕೀರ್ಣ ಪಾತ್ರವಿದ್ದುದರಿಂದ ವರ್ಷಗಟ್ಟಲೆ ಅನುಷ್ಕಾ ತಯಾರಿ ನಡೆಸಿದ್ದರಂತೆ. ಆದರೆ ಘಾಟಿಯ ಬಗ್ಗೆ ಬೇರೇನೂ ಮಾಹಿತಿ ಹೊರಬಿದ್ದಿರಲಿಲ್ಲ. ಕಡೆಗೂ ಬರ್ತ್‌ಡೇ ನೆಪದಲ್ಲಿ ಚಿತ್ರತಂಡ ಸರಿಕಟ್ಟಾದ ಗಿಫ್ಟನ್ನೇ ಕೊಟ್ಟಿದೆ. ಘಾಟಿ ಚಿತ್ರದ ಫಸ್ಟ್ ಲುಕ್ ಗ್ಲಿಂಪ್ಸ್ ಸಿನಿಮಾ ಪ್ರೇಮಿಗಳನ್ನೆಲ್ಲ ಬೆರಗಾಗಿಸಿದೆ. ಅನುಷ್ಕಾ ಶೆಟ್ಟಿ ಇಲ್ಲಿ ಅತ್ಯುಗ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಲೆಯಿಂದ ತೊಟ್ಟಿಕ್ಕುವ ರಕ್ತ, ಕಣ್ಣುಗಳಲ್ಲಿಯೇ ಬೆಂಕಿ ಉಗುಳುವ ಪರಿಗಳೆಲ್ಲವೂ ಇದೊಂದು ಪಕ್ಕಾ ಮಾಸ್ ಸಿನಿಮಾ ಎಂಬ ಸುಳಿವನ್ನು ನಿಖರವಾಗಿಯೇ ದಾಟಿಸಿದೆ. ಈ ಮೂಲಕ ಭರ್ಜರಿ ರೀ ಎಂಟ್ರಿಯ ಸಂದೇಶವೊಂದು ಅನುಷ್ಕಾ ಅಭಿಮಾನಿಗಳನ್ನು ತಲುಪಿಕೊಂಡಿದೆ.

ಯುವಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳುತ್ತಿರೋ ಈ ಚಿತ್ರವನ್ನು ಕ್ರಿಷ್ ಜಗರ್ಲಮುಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವೀಗ ಚಿತ್ರೀಕರಣದ ಅಂತಿಮ ಹಂತದಲ್ಲಿದೆ. ಈ ಮೂಲಕ ಅನುಷ್ಕಾ ಶೆಟ್ಟಿ ಎರಡ್ಮೂರು ವರ್ಷಗಳ ಅಜ್ಞಾತವಾಸವನ್ನು ಸಾರ್ಥಕಗೊಳಿಸುವ ಲಕ್ಷಣಗಳೂ ಕಾಣಿಸಿವೆ. ಈ ಹಿಂದೆಯೂ ಇಂಥಾದ್ದೇ ಮಾಸ್ ಪಾತ್ರಗಳ ಮೂಲಕ ಅನುಷ್ಕಾ ಅಡಿಗಡಿಗೆ ಗೆಲುವು ಕಂಡಿದ್ದರು. ಅರುಂಧತಿ, ಭಾಗಮತಿಯಂಥಾ ಸಿನಿಮಾಗಳ ಪಾತ್ರಗಳು ಅನುಷ್ಕಾಗೆ ತಂದುಕೊಟ್ಟಿದ್ದ ಗೆಲುವು, ಖ್ಯಾತಿ ಸಣ್ಣ ಮಟ್ಟದ್ದೇನಲ್ಲ. ಈ ನಡುವೆ ಒಂದಷ್ಟು ಮ್ಲಾನ ಸನ್ನಿವೇಶ ಆಕೆಯ ವೃತ್ತಿ ಬದುಕನ್ನು ಆವರಿಸಿಕೊಂಡಿತ್ತು. ಸದ್ಯ ಆಕೆ ಘಾಟಿ ಮೂಲಕ ಮತ್ತೆ ಮಿಂಚಲಣಿಯಾಗಿದ್ದಾರೆ. ಈ ಫಸ್ಟ್ ಲುಕ್ ಗ್ಲಿಂಪ್ಸ್ ಹವಾ ನೋಡಿದರೆ, ಘಾಟಿಯ ಗೆಲುವಿನ ಓಘ ಎಂಥಾದ್ದಿರಬಹುದೆಂಬ ಅಂದಾಜೂ ಸಿಕ್ಕುಬಿಡುವಂತಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!