ಕಿರುತೆರೆಯಿಂದ ಹಿರಿತೆರೆಗೆ ನಟ ನಟಿಯರ ಆಗಮನವೇನೂ ಹೊಸತಲ್ಲ. ಅಷ್ಟಕ್ಕೂ ಈ ಕ್ಷಣದಲ್ಲಿ ಪುಟ್ಟದೊಂದು ಪಾತ್ರದಲ್ಲಿ ಕಾಣಿಸಿಕೊಂಡವರೊಳಗೂ ಹಿರಿತೆರೆಯಲ್ಲಿ ಮಿಂಚಬೇಕೆಂಬ ಹಿರಿದಾದ ಆಸೆ ಇರುತ್ತದೆ. ಆದರೆ, ಧಾರಾವಾಹಿ ಜಗತ್ತಿನ ಯಶಸ್ಸಿನ ಪ್ರಭೆ ಚಿತ್ರರಂಗದಲ್ಲಿಯೂ ಕೈ ಹಿಡಿದು ಮುನ್ನಡೆಸುತ್ತದೆಂಬುದು ಮಾತ್ರ ಅಪ್ಪಟ ಭ್ರಮೆ. ಯಾಕೆಂದರೆ, ಸೀರಿಯಲ್ಲು ಲೋಕದಿಂದ ಬಂದು ಗೆದ್ದವರ ಸಂಖ್ಯೆಗಿಂತಲೂ, ಗೋತಾ ಹೊಡೆದವರ ಜಂಗುಳಿ ದೊಡ್ಡದಿದೆ. ಸದ್ಯದ ಮಟ್ಟಿಗೆ ಆ ಎರಡು ಗುಂಪುಗಳ ನಡುವೆ ಒಂದಷ್ಟು ಮಂದಿ ತೊಯ್ದಾಡುತ್ತಿದ್ದಾರೆ. ಅದರಲ್ಲಿ ಕೆಲವರಿಗೆ ಗೆಲುವು ಒಂದಷ್ಟು ಗಾವುದ ದೂರದಲ್ಲಿರುವಂತೆಯೂ ಭಾಸವಾಗುತ್ತದೆ. ಆ ಯಾದಿಯಲ್ಲಿ ಸೇರ್ಪಡೆಗೊಳ್ಳುವಾತ ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್!

ಕಿರಣ್ ರಾಜ್ ಧಾರಾವಾಹಿಯ ಗೆಲುವಿನ ಒಡ್ಡೋಲಗದಲ್ಲಿ ಸಿನಿಮಾ ರಂಗಕ್ಕೆ ಬಂದು ಮೂರ್ನಾಲಕ್ಕು ವಸಂತಗಳು ಕಳೆದಿವೆ. ಅಸತೋಮಾ ಸದ್ಗಮಯ, ಮಾರ್ಚ್ 22 ಮುಂತಾದ ಒಂದಷ್ಟು ಸಿನಿಮಾಗಳ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದ ಕಿರಣ್‍ಗೆ ಹೇಳಿಕೊಳ್ಳುವಂಥಾ ಗೆಲುವು ದಕ್ಕಿರಲಿಲ್ಲ. ಆದರೂ ಪ್ರಯತ್ನ ಬಿಡದೆ ಮುಂದುವರೆದು ಮತ್ತೊಂದಷ್ಟು ಸಿನಿಮಾ ಒಪ್ಪಿಕೊಂಡಿದ್ದ ಕಿರಣ್ ಇದೀಗ ಪುಷ್ಕಳ ಗೆಲುವೊಂದರ ನಿರೀಕ್ಷೆಯಲ್ಲಿದ್ದಾರೆ. ಇದೇ ಹೊತ್ತಿನಲ್ಲಿ ಆತ ನಾಯಕನಾಗಿ ನಟಿಸಿರುವ `ರಾನಿ’ ಎಂಬ ಚಿತ್ರವೊಂದು ಸದ್ದು ಮಾಡಲಾರಂಭಿಸಿದೆ. ಕಿರಣ್ ಬರ್ತ್‍ಡೇ ಸ್ಪೆಷಲ್ ಎಂಬಂತೆ ಬಿಡುಗಡೆಗೊಂಡಿರೋ ಸದರಿ ಟೀಸರ್‍ಗೆ ಒಂದಷ್ಟು ಮೆಚ್ಚುಗೆಯೂ ಮೂಡಿಕೊಳ್ಳಲಾರಂಭಿಸಿದೆ. ಈ ಮೂಲಕವೇ ಕಿರಣ್ ಒಗಿನ ಆಕಾಂಕ್ಷೆ ಕೈಗೂಡುವ ಲಕ್ಷಣಗಳೂ ಢಾಳಾಗಿಯೇ ಗೋಚರಿಸಲಾರಂಭಿಸಿವೆ.

ಗುರುತೇಜ್ ಶೆಟ್ಟಿ ನಿರ್ದೇಶನದಲ್ಲಿ ರೂಪುಗೊಳ್ಳುತ್ತಿರುವ ಚಿತ್ರ ರಾನಿ. ಪೋಸ್ಟರ್ ಲಾಂಚ್ ಸೇರಿದಂತೆ, ಪ್ರತೀ ಹಂತದಲ್ಲಿಯೂ ರಾನಿ ಡಿಫರೆಂಟಾಗಿ ಸದ್ದು ಮಾಡುವಂತೆ ಚಿತ್ರತಂಡ ನೋಡಿಕೊಳ್ಳುತ್ತಿದೆ. ಮಾಸ್ ಎಂಟರ್‍ಟೈನರ್ ಸ್ವರೂಪದ ಈ ಚಿತ್ರದ ಟೀಸರ್ ಸಕಾರಾತ್ಮಕ ವಾತಾವರಣ ನಿರ್ಮಾಣ ಮಾಡಿದೆ. ಕಿರಣ್ ರಾಜ್ ಈಗಿನ ಟ್ರೆಂಡಿಗೆ ತಕ್ಕಂಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ವಿಚಾರ ಈ ಮೂಲಕ ಜಾಹೀರಾಗಿದೆ. ರಾನಿ ಎಂದರೆ ರೂಲರ್ ಎಂಬ ಅರ್ಥವಿದೆಯಂತೆ. ಇದರಲ್ಲಿ ಕಿರಣ್ ಗ್ಯಾಂಗ್‍ಸ್ಟರ್ ಆಗಿ, ಪಕ್ಕಾ ಮಾಸ್ ಲುಕ್ಕಿನಲಿ ಕಾಣಿಸಿಕೊಂಡಿದ್ದಾರಂತೆ. ಕಿರುತೆರೆ ಮೂಲಕ ಕ್ಲಾಸ್ ಅಭಿಮಾನಿಗಳನ್ನೂ ಕಿರಣ್ ಹೊಂದಿರೋದರಿಂದ, ಅದಕ್ಕೆ ಪೂರಕವಾಗಿಯೂ ರಾನಿಯನ್ನು ರೂಪಿಸಲಾಗಿದೆಯಂತೆ.

ಸಾಕಷ್ಟು ಹಿಂದಿ ಸೀರಿಯಲ್ಲುಗಳಲ್ಲಿ ನಟಿಸಿದ್ದ ಕಿರಣ್ ರಾಜ್, ದೇವತೆ ಅಂತೊಂದು ಧಾರಾವಾಇಯ ಮೂಲಕ ಕನ್ನಡಕ್ಕೆ ಆಗಮಿಸಿದ್ದರು. ಆ ನಂತರ ಶುರುವಾದದ್ದು ಕಿನ್ನರಿ ಎಂಬ ಧಾರಾವಾಹಿ. ಅದರ ನಾಯಕನಾಗಿ ನಟಿಸಿದ್ದ ಕಿರಣ್‍ಗೆ ಒಂದಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಆರಂಭದಲ್ಲಿ ರಸವತ್ತಾಗಿದ್ದ ಆ ಧಾರಾವಾಹಿ ಬರಬರುತ್ತಾ ಪ್ರೇಕ್ಷಕರನ್ನು ಕಳೆದುಕೊಂಡಿದ್ದದ್ದು ಸತ್ಯ. ಆ ನಂತರದಲ್ಲಿ ಕಿರಣ್ ಕನ್ನಡತಿ ಎಂಬ ಧಾರಾವಾಹಿಯ ನಾಯಕನಾಗಿದ್ದರು. ರಂಜನಿ ರಾಘವನ್ ಜೋಡಿಯಾಗಿ ಸಾಥ್ ಕೊಟ್ಟಿದ್ದರು. ಈ ಧಾರಾವಾಹಿ ಕಿರಣ್‍ಗೆ ದೊಡ್ಡ ಮಟ್ಟದಲ್ಲಿಯೇ ಯಶ ತಂದುಕೊಟ್ಟಿತ್ತು. ಅದು ಮುಗಿದಾದ ಮೇಲೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಿರಣ್ ಇದೀಗ ರಾನಿಯ ಅವತಾರವೆತ್ತಿದ್ದಾರೆ. ಅದರ ಫಲಿತಾಂಶವೇನೆಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ…

About The Author