ಬಿಗ್ಬಾಸ್ ವಿನ್ನರ್ ಗಿಲ್ಲಿನಟ ಮತ್ತು ಸೌರವ್ ಶೆಟ್ಟಿ ನಾಯಕರಾಗಿ ನಟಿಸಿರುವ ಚಿತ್ರ ಸೂಪರ್ ಹಿಟ್. ಈಗಾಗಲೇ ಹಾಸ್ಯ ಪ್ರಧಾನ ಚಿತ್ರವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಸೂಪರ್ ಹಿಟ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ನಿರೀಕ್ಷೆ ಮೂಡಿಸಿದೆ. ವಿಜಯಾನಂದ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಸದರಿ ಸಿನಿಮಾದ ಪಾಲಿಗೆ ಆರಂಭದಿಂದಲೂ ಕೂಡಾ ಎಲ್ಲವೂ ಸಕಾರಾತ್ಮಕವಾಗಿ ಸಾಥ್ ಕೊಡುತ್ತಾ ಬಂದಿದೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರೋ ಗಿಲ್ಲಿ ಬಿಗ್ ಬಾಸ್ ಸ್ಪರ್ಧಿಯಾದದ್ದು, ಕಂಡುಕೇಳರಿಯದಂಥಾ ಜನಪ್ರಿಯತೆ ಪಡೆದು ವಿನ್ನರ್ ಆಗಿದ್ದೂ ಕೂಡಾ ಸಕಾರಾತ್ಮಕ ಸರಪಣಿಗೆ ಹೊಸಾ ಕೊಂಡಿಯಂತೆ ಬೆಸೆದುಕೊಂಡಿದೆ. ಬಿಗ್ಬಾಸ್ ಮನೆಯಲ್ಲಿದ್ದಷ್ಟೂ ದಿನ ಪ್ರೇಕ್ಷಕರನ್ನು ರಂಜಿಸಿದ್ದ ಗಿಲ್ಲಿಯ ಕಾಮಿಡಿ ಕಮಾಲನ್ನು ಹಿರಿತೆರೆಯಲ್ಲಿ ನೋಡಬೇಕೆಂಬ ಬಹುಜನರ ಆಕಾಂಕ್ಷೆ ಫೆಬ್ರವರಿ೨೭ ಅಂದರೆ ನಾಳೆ ಸಾಕಾರಗೊಳ್ಳಲಿದೆ.
ಖ್ಯಾತ ಗೀತರಚನೆಕಾರರಾದ ಕವಿರತ್ನ ನಾಗೇಂದ್ರ ಪ್ರಸಾದ್ ಸಹೋದರ ವಿಜಯಾನಂದ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರಿಗೊಳಪಡುವ ಸೂಪರ್ ಹಿಟ್ ಹಾಸ್ಯದ ಜೊತೆಗೆ ಕ್ಷಣ ಕ್ಷಣವೂ ಕುತೂಹಲ ಕೆರಳಿಸೋ ಗಟ್ಟಿ ಕಥೆಯನ್ನೂ ಒಳಗೊಂಡಿದೆ. ಅಂಥಾದ್ದೊಂದು ಸೂಚನೆ ಟೀಸರ್, ಟ್ರೈಲರ್ ಹಾಗೂ ಚಿತ್ರತಂಡ ಬಿಟ್ಟುಕೊಟ್ಟಿರುವ ಒಂದಷ್ಟು ಸುಳಿವುಗಳ ಮೂಲಕ ಜಾಹೀರಾಗಿದೆ. ಗೀತರಚನೆಕಾರರಾಗಿ ಹೆಸರಾಗಿರುವ ನಾಗೇಂದ್ರ ಪ್ರಸಾದ್ ಸಂಗೀತ ನಿರ್ದೇಶಕನಾಗಿಯೂ ತಮ್ಮನ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಒಂದಿಡೀ ಕಥೆಗೆ ತಿರುವು ಕೊಡುವಂಥಾ ಮಹತ್ವದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ ಹಾಸ್ಯ ಕಲಾವಿದರ ದಂಡು, ಅದಕ್ಕೆ ತಕ್ಕುದಾದ ಕಥನ ಈ ಚಿತ್ರದಲ್ಲಿದೆ ಎಂಬುದು ನಿರ್ದೇಶಕರ ಭರವಸೆ.
ಸಾಮಾನ್ಯವಾಗಿ ಒಂದೊಂದು ಜಾನರಿನ ಚಿತ್ರಗಳಿಗೂ ಅದರದ್ದೇ ಆದ ಪ್ರೇಕ್ಷಕ ವರ್ಗವಿರುತ್ತೆ. ಒಂದು ಬಗೆಯ ಸಿನಿಮಾ, ಮತ್ತೊಂದು ಅಭಿರುಚಿಯ ಪ್ರೇಕ್ಷಕರಿಗೆ ಪಥ್ಯವಾಗೋದಿಲ್ಲ. ಅಂಥಾ ಭಿನ್ನ ಅಭಿರುಚಿಯ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸಾರಾಸಗಟಾಗಿ ಸೆಳೆಯುವ ಗುಣ ಹಾಸ್ಯ ಪ್ರಧಾನ ಚಿತ್ರಗಳಿಗಿರುತ್ತದೆ. ಅದರಲ್ಲಿಯೂ ಚೆಂದದ ನಿರೂಪಣೆ, ಹೊಸತನ, ಗಟ್ಟಿ ಕಥೆಗಳ ಸಾಥ್ ಇದ್ದರಂತೂ ಗೆಲುವು ಮತ್ತಷ್ಟು ಸಲೀಸಾಗುತ್ತದೆ. ಸೂಪರ್ ಹಿಟ್ ಕೂಡಾ ಅಂಥಾದ್ದೊಂದು ಮೋಡಿ ಮಾಡಲಿದೆಯಾ? ಗಿಲ್ಲಿ ನಟ ಮತ್ತು ಗೌರವ್ ಶೆಟ್ಟಿಯ ಜುಗಲ್ಬಂಧಿ ಹಾಸ್ಯ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯಲಿದೆಯಾ? ಇಂಥಾ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ.
ವಿಜಯಲಕ್ಷ್ಮಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗೌರವ್ ಶೆಟ್ಟಿ ಮತ್ತು ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ.ಆ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ.
keywords: super hit movie, vijayanand, gilli nata

