ಬಾಹುಬಲಿ ಸರಣಿಯ ಅಗಾಧ ಗೆಲುವಿನ ನಂತರ ಡಾರ್ಲಿಂಗ್ ಪ್ರಭಾಸ್ ಹೀನಾಯ ಸೋಲಿನ ಪರ್ವವೊಂದನ್ನು ಎದುರುಗೊಂಡಿದ್ದ. ಒಂದು ಗೆಲುವಿನ ನಂತರ ಮತ್ತೊಂದು ಸೋಲು ಸ್ಟಾರ್ ನಟರಿಗೇನೂ ಅನಿರೀಕ್ಷಿತವಲ್ಲ. ರಜನಿಯಂಥಾ ರಜನಿಯೇ ಅಂಥಾದ್ದೊಂದು ಸೋಲಿನ ಕಹಿಯಿಂದ ಕಂಗಾಲಾಗುತ್ತಾ ಬಂದಿದ್ದಾರೆ. ಗಮನೀಯ ಅಂಶವೆಂದರೆ, ರಜನೀಕಾಂತ್ ಒಂದು ಕಬಾಲಿ ಕವುಚಿಕೊಂಡಾಗ, ಅದರ ಬೆನ್ನಲ್ಲಿಯೇ ಮತ್ತೊಂದು ಜೈಲರ್ ಮೂಲಕ ಪುಟಿದೆದ್ದು ನಿಲ್ಲುತ್ತಾರೆ. ಅಂಥಾ ಛಾತಿ ಅದೇಕೋ ಪ್ರಭಾಸ್‌ಗೆ ಒಲಿದಿಲ್ಲ. ಯಾಕೆಂದರೆ, ಸಿನಿಮಾವೊಂದನ್ನು ಆಯ್ಕೆ ಮಾಡಿಕೊಳ್ಳುವಲ್ಲಿನ ಜಾಣ್ಮೆ ಈ ಆಸಾಮಿಗೆ ಕಿಂಚಿತ್ತೂ ಇಲ್ಲ. ಅದು ಇದ್ದಿದ್ದರೆ, ಒಂದು ಗೆದ್ದ ಸಿನಿಮಾದ ಸೀಕ್ವೆಲ್‌ಗೆ ಮತ್ತೆ ನೇತುಬೀಳುವ ತುರ್ತು ಬಂದೊದಗುತ್ತಿರಲಿಲ್ಲ. ಅಂಥಾ ತುರ್ತಿನ ಸಲುವಾಗಿಯೇ ಸುದ್ದಿಕೇಂದ್ರದಲ್ಲಿರೋ ಸಿನಿಮಾ ಕಲ್ಕಿ2!
ವಿಶೇಷವೆಂದರೆ, ಸಾಲು ಸಾಲು ಸೋಲಿನಿಂದ ಕಂಗಾಲೆದ್ದು ನಿಂತರೂ ಸಹ ಪ್ರಭಾಸ್ ಸ್ಟಾರ್‌ಡಂ ಮುಕ್ಕಾಗದೆ ಉಳಿದುಕೊಂಡಿದೆ. ಒಂದು ಸೋಲಿನ ಮಗ್ಗುಲಲ್ಲಿಯೇ ಮತ್ತೊಂದು ಹೊಸಾ ಸಿನಿಮಾ ಘೋಷಣೆಯಾದಾಗ, ಅದರ ಸುತ್ತ ಮತ್ತದೇ ಕ್ರೇಜ್ ಹಬ್ಬಿಕೊಳ್ಳುತ್ತೆ. ಹಾಗಿರುವಾಗ ಡಾರ್ಲಿಂಗ್‌ಗೆ ಉಸಿರು ಕೊಟ್ಟಿದ್ದ ಕಲ್ಕಿ ಸೀಕ್ವೆಲ್ ಬಗ್ಗೆ ಅಭಿಮಾನಿಗಳು ಕುತೂಹಲಗೊಳ್ಳದಿರಲು ಸಾಧ್ಯವೇ? ಸದ್ಯಕ್ಕೆ ರಾಜಾಸಾಬ್ ಮುಂತಾದ ಸಿನಿಮಾಗಳು ಸರತಿಯಲ್ಲಿದ್ದರೂ ಕಲ್ಕಿ೨ ಭೂಮಿಕೆಯಲ್ಲಿ ಒಂದಷ್ಟು ಚಟುವಟಿಕೆಗಳು ನಡೆಯುತ್ತಿವೆ. ಅದರಲ್ಲಿಯೂ, ನಾಯಕಿಯ ಆಯ್ಕೆಯ ಬಗ್ಗೆ ದಿನಕ್ಕೊಂದರಂತೆ ಸುದ್ದಿಗಳು ಜಾಹೀರಾಗುತ್ತಿವೆ.
ಕಲ್ಕಿ ಮೊದಲ ಭಾಗದಲ್ಲಿ ನಾಯಕಿಯಾಗಿ ನಟಿಸಿದ್ದಾಕೆ ದೀಪಿಕಾ ಪಡುಕೋಣೆ. ಸಂಪೂರ್ಣ ಭಿನ್ನವಾದ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದ ದೀಪ;ಇಕಾಳ ನಟನೆ ಕೂಡಾ ಕಲ್ಕಿಯ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿತ್ತು. ಕಲ್ಕಿ ೨ ಬರುತ್ತದೆಂಬ ಸುದ್ದಿ ಹಬ್ಬಿದ್ದಾಗಲೂ ದೀಪಿಕಾಳೇ ನಾಯಕಿ ಎಂಬಂಥಾ ಮಾತುಗಳೂ ಕೇಳಿ ಬಂದಿದ್ದವು. ಆದರೆ, ಸಂಭಾವನೆಯ ವಿಚಾರದಲ್ಲಿ ತೊಡಕುಂಟಾದ ಪರಿಣಾಮ ದೀಪಿಕಾ ಹಿಂದೆ ಸರಿದಿದ್ದಾಳೆ. ಆ ಜಾಗಕ್ಕೆ ಸಾಯಿಪಲ್ಲವಿ ಸೇರಿದಂತೆ ಒಂದಷ್ಟು ನಟಿಯರು ಎಂಟ್ರಿ ಕೊಡೋದಾಗಿ ರೂಮರುಗಳೆದ್ದಿದ್ದವು. ಅಂಥಾ ಅನೇಕ ಸ್ಟಾರ್ ನಟಿಯರು ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳಲು ಸರತಿಯಲ್ಲಿ ನಿಂತಿರೋದು ನಿಜ. ಆದರೆ, ಆ ಅವಕಾಶವೀಗ ಪ್ರಿಯಾಂಕಾ ಛೋಪ್ರಾಗೆ ಒಲಿದಿರುವ ಲಕ್ಷಣಗಳಿದ್ದಾವೆ. ಇಷ್ಟರಲ್ಲಿಯೇ ಅಧಿಕೃತವಾಗಿ ಈ ಸುದ್ದಿ ಹೊರಬೀಳುವ ಸಾಧ್ಯತೆಗಳಿವೆ!

