ಕಿರುಚಿತ್ರಗಳು, ಕಾಮಿಡಿ ಶೋಗಳ ಮೂಲಕ ಮನೆಮಾತಾಗಿದ್ದ ಗಿಲ್ಲಿ ನಟ ಇದೀಗ ಬಿಗ್ಬಾಸ್ ಸ್ಪರ್ಧಿಯಾಗಿ ಸಂಚಲನ ಸೃಷ್ಟಿಸಿದ್ದಾನೆ. ತನ್ನ ಸೆನ್ಸ್ ಆಫ್ ಹ್ಯೂಮರ್, ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರ ಮನಗೆದ್ದಿರೋ ಗಿಲ್ಲಿಯೀಗ `ಸೂಪರ್ ಹಿಟ್’ ಎಂಬ ಚಿತ್ರದ ಮೂಲಕ ಸದ್ದಿಲ್ಲದೆ ನಾಯಕನಾಗಿದ್ದಾನೆ. ಖ್ಯಾತ ಗೀತರಚನೆಗಾರ ವಿ. ನಾಗೇಂದ್ರ ಪ್ರಸಾದ್ ಸಹೋದರ ವಿಜಯಾನಂದ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಈ ಕುರಿತಾಗಿ ನಡೆದಿರುವ ಪತ್ರಿಕಾಗೋಷ್ಠಿಯ ಮೂಲಕ ಸೂಪರ್ ಹಿಟ್ ಬಗೆಗಿನ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಂಡಿದೆ.
ಹೀಗೆ ಬಿಡುಗಡೆಗೊಂಡಿರುವ ಸದರಿ ಟೀಸರ್ನಲ್ಲಿರೋ ಭರ್ಜರಿ ಕಾಮಿಡಿ, ಗಟ್ಟಿ ಕಥನದ ಸುಳಿವು ಕಂಡವರೆಲ್ಲ, ಸು ಫ್ರಂ ಸೋ ನಂತಗರದಲ್ಲಿ ಮತ್ತೊಂದು ಕಾಮಿಡಿ ಗಾರುಡಿ ನಡೆಯೋದರ ಮುನ್ಸೂಚನೆಯನ್ನ ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ, ಯಾವುದೇ ಸಿನಿಮಾ ಬಿಡುಗಡೆಯಾದ ನಂತರ ಪ್ರೇಕ್ಷಕರ ಮನಗೆದ್ದರೆ ಸೂಪರ್ ಹಿಟ್ ಆಗುತ್ತೆ. ಆದರೆ, ಈ ಚಿತ್ರದ ಶೀರ್ಷಿಕೆಯೇ ಸೂಪರ್ ಹಿಟ್. ಅದಕ್ಕೆ ರನ್ನಿಂಗ್ ಸಕ್ಸಸ್ಫುಲೀ ಎಂಬ ಟ್ಯಾಗ್ಲೈನನ್ನೂ ಇಡಲಾಗಿದೆ. ಈ ಮೂಲಕ ಶೀರ್ಷಿಕೆಯ ಮೂಲಕವೇ ಗಮನ ಸೆಳೆದ ಸಿನಿಮಾಗಳ ಸಾಲಿಗೂ ಸೇರ್ಪಡೆಗೊಂಡಿದೆ. ಹೆಸರಿನ ಬಗ್ಗೆಯೇ ಕುತೂಹಲ ಮೂಡಿಕೊಂಡಿರೋದರಿಂದಾಗಿ, ಅದರ ಹುಟ್ಟಿನ ಹಿಂದಿರೋ ಅಚ್ಚರಿಯನ್ನು ನಿರ್ದೇಶಕ ವಿಜಯಾನಂದ ತೆರೆದಿಟ್ಟಿದ್ದಾರೆ!
ಈ ಚಿತ್ರವನ್ನು ವಿಜಯಲಕ್ಷ್ಮಿ ಎಂಟರ್ಪ್ರೈಸಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರವಿದು. ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಬೇಕೆಂಬ ತುಡಿತ ಹೊಂದಿದ್ದ ಉಮೇಶ್, ಈ ಹಿಂದೆ ಸಿನಿಮಾವೊಂದಕ್ಕೆ ಕಾಸು ಹೂಡಿಕೆ ನಡೆಸಿ ನಿರಾಸೆಗೊಂಡಿದ್ದರಂತೆ. ಅಷ್ಟಾದರೂ ಹಿಟ್ ಸಿನಿಮಾ ನಿರ್ಮಾಣದ ಕನಸಿಟ್ಟುಕೊಂಡಿದ್ದ ಉಮೇಶ್ ಅವರನ್ನು ಗಮನಿಸಿದ್ದ ನಿರ್ದೇಶಕರು, ಅದನ್ನೇ ಶೀರ್ಷಿಕೆಯಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ. ಪಕ್ಕಾ ಕಮರ್ಶಿಯಲ್ ಪಥದಲ್ಲಿ, ಹಾಸ್ಯವನ್ನೇ ಪ್ರಧಾನವಾಗಿಸಿಕೊಂಡು ಈ ಸಿನಿಮಾವನ್ನು ರೂಪಿಸಲಾಗಿದೆ. ಪ್ರತೀ ಹತ್ತು ನಿಮಿಷಗಳಿಗೊಮ್ಮೆ ಪ್ರೇಕ್ಷಕರನ್ನು ರೋಮಾಂಚನಕ್ಕೀಡು ಮಾಡುವ ಟ್ವಿಸ್ಟುಗಳು, ಹೊಸತನದೊಂದಿಗೆ ದೃಷ್ಯ ಕಟ್ಟಲಾಗಿದೆ. ಕನ್ನಡದ ಮಟ್ಟಿಗೆ ಪ್ರಥಮವಾಗಿ ಥ್ರಿಲ್ಲರ್ ಅಂಶವನ್ನು ಕಾಮಿಡಿಯೊಂದಿಗೆ ಬೆರೆಸುವ ಭಿನ್ನ ಪ್ರಯತ್ನ ನಡೆದಿದೆ ಅನ್ನೋದು ನಿರ್ದೇಶಕರ ಮಾತು.

ಈಗಾಗಲೇ ಸೂಪರ್ ಹಿಟ್ ಚಿತ್ರದ ಎಲ್ಲ ಕೆಲಸ ಕಾರ್ಯಗಳೂ ಮುಕ್ತಾಯಗೊಂಡಿವೆ. ಒಂದೊಳ್ಳೆ ಸಮಯ ನೋಡಿ ಬಿಡುಗಡೆ ದಿನಾಂಕ ಘೋಷಣೆ ಮಾಡುವ ತಯಾರಿ ನಡೆಯುತ್ತಿದೆ. ಅಂದಹಾಗೆ, ಸೋಶಿಯಲ್ ಮೀಡಿಯಾ ಮೂಲಕ, ಕಾಮಿಡಿ ಝಲಕ್ಕುಗಳೊಂದಿಗೆ ಪ್ರಸಿದ್ಧಿ ಪಡೆದಿರುವ ಗೌರವ್ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಇಲ್ಲಿ ನಾಯಕರಾಗಿ ನಟಿಸಿದ್ದಾರೆ. ಹಾಸ್ಯದ ಪ್ರಾಕಾರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಈ ಇಬ್ಬರು ನಟರ ಆಯ್ಕೆ ಆ ಪಾತ್ರಗಳಿಗೆ ಮಾತ್ರವಲ್ಲದೇ ಒಂದಿಡೀ ಸಿನಿಮಾಗೂ ಪ್ಲಸ್ ಆಗಲಿದೆ ಎಂಬ ನಂಬಿಕೆ ಚಿತ್ರತಂಡದಲ್ಲಿದೆ. ಸು ಫ್ರಂ ಸೋ ಚಿತ್ರಕ್ಕೆ ಸಿಕ್ಕಿರೋ ಭಾರೀ ಗೆಲುವು ಕೂಡಾ ಚಿತ್ರತಂಡಕ್ಕೆ ಭರವಸೆ ತುಂಬಿದೆ. ಯಾಕೆಂದರೆ, ಭಿನ್ನ ಬಗೆಯ ಕಥನ, ಹಾಸ್ಯವಿರೋ ಈ ಚಿತ್ರಕ್ಕೂ ಪ್ರೇಕ್ಷಕರು ಅಂಥಾದ್ದೇ ಬೆಂಬಲ ಕೊಡುತ್ತಾರೆಂಬ ನಂಬಿಕೆ ಚಿತ್ರತಂಡಕ್ಕಿದೆ.
ಗಿಲ್ಲಿ ನಟ ಮತ್ತು ಗೌರವ್ ಶೆಟ್ಟಿ ನಾಯಕರಾಗಿ ನಟಿಸಿದ್ದರೆ, ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ವಿಜಯಲಕ್ಷ್ಮಿ ಎಂಟರ್ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ. ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ವಿರುವ ಈ ಚಿತ್ರ, ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ಸೋಮಶೇಖರ್, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಅಶ್ವಿನಿ ರಾವ್, ಸ್ವಪ್ನ ಶೆಟ್ಟಿಗಾರ್, ಮಂಗಳೂರು ಮೀನನಾಥ ಮುಂತಾದವರ ತಾರಾಗಣದೊಂದಿಗೆ ಕಳೆಗಟ್ಟಿಕೊಂಡಿದೆ.


