ಭಾರತೀಯ ಚಿತ್ರರಂಗದಲ್ಲಿ ವಯಸ್ಸಾದರೂ ಸೂಪರ್ ಸ್ಟಾರುಗಳಾಗಿ ಚಾಲ್ತಿಯಲ್ಲಿರುವ ಬೆರಳೆಣಿಕೆಯಷ್ಟು ನಟರಲ್ಲಿ ಚಿರಂಜೀವಿ ಪ್ರಮುಖರಾಗಿ ಗುರುತಿಸಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದ ಹಿರಿಯ ನಟರು ಎದ್ದು ನಿಲ್ಲಲು ಏದುಸಿರು ಬಿಡುವ ಕಾಲದಲ್ಲೂ ಮರಸುತ್ತೋ ಸೀನುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅದೇ ಕಾಲಘಟ್ಟದಲ್ಲಿ ವಯಸ್ಸಿಗನುಗುಣವಾದ, ಭಿನ್ನ ಪಾತ್ರಗಳಲ್ಲಿ ನಟಿಸುವ ಪಥಕ್ಕೆ ಮೊದಲಡಿ ಇಟ್ಟ ಕೀರ್ತಿ ಅಮಿತಾಭ್ ಬಚ್ಚನ ಗೆ ಸಲ್ಲುತ್ತದೆ. ಒಂದು ಹಂತದ ವರೆಗೆ ಚಿರು ಕೂಡಾ ಎಳೇ ನಾಯಕಿಯರ ಸೊಂಟ ತಬ್ಬಿ ಬಳುಕಿದರೂ, ಇತ್ತೀಚಿನ ವರ್ಷಗಳಲ್ಲಿ ಬೇರೆ ತೆರನಾದ ಕಥೆಗಳ ಮೂಲಕ ಮಿಂಚಿತ್ತಿದ್ದಾರೆ. ವಿಶ್ವಂಬರ ಚಿತ್ರದಲ್ಲಿ ಇದೀಗ ಬ್ಯುಸಿಯಾಗಿರೋ ಚಿರು ಮತ್ತೊಂದು ಚಿತ್ರಕ್ಕೆ ತಯಾರಿ ಶುರುವಿಟ್ಟಿದ್ದಾರೆ.

ಈ ಸಿನಿಮಾಕ್ಕೆ ಇನ್ನೂ ಶೀರ್ಷಿಕೆ ನಿಗಧಿಯಾಗಿಲ್ಲ. ಮೆಘಾ ೧೫೮ ಅಂತ ಹೆಸರಿಸಲಾಗಿರುವ ಈ ಚಿತ್ರವನ್ನು ಬಾಬಿ ಕೊಲ್ಲಿ ಅಂತಲೇ ಕರೆಸಿಕೊಳ್ಳುವ ಕೆ.ಎಸ್ ರವೀಂದ್ರ ನಿರ್ದೇಶನ ಮಾಡಲಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಿರ್ದೇಶಕನಾಗಿ ಗುರುತಿಸಿಕೊಂಡಿಕರುವ ಬಾಬಿ ಕೊಲ್ಲಿ ಈ ಹಿಂದೆ ವಾಲ್ಟರ್ ವೀರಯ್ಯ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಪಕ್ಕಾ ಮನೋರಂಜನಾತ್ಮಕ ಚಿತ್ರವಾಗಿ ಅದು ಪ್ರೇಕ್ಷಕರನ್ನು ರಂಜಿಸಿತ್ತು. ಕಳೆದ ವರ್ಷ ಬಿಡುಗಡೆಗೊಂಡಿದ್ದ ವಾಲ್ಟರ್ ವೀರಯ್ಯ ಗೆಲುವು ದಾಖಲಿಸಿತ್ತು. ಇದೀಗ ಮತ್ತೆ ಚಿರಂಜೀವಿ ಬಾಬಿ ಕೊಲ್ಲಿಗೆ ಅವಕಾಶ ಕೊಟ್ಟಿದ್ದಾರೆ. ಬಾಬಿ ಈಗಾಗಲೇ ಸಂಪೂರ್ಣವಾಗಿ ತಯಾರಿ ಮಾಡಿಕೊಂಡು ತಾರಾಗಣದ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ.

ಅದರ ಮೊದಲ ಭಾಗವಾಗಿ ನಾಯಕಿಯ ಆಯ್ಕೆ ನಡೆದಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ಮಾಳವಿಕಾ ಮೋಹನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಗ್ಲಾಮರ್ ಮಾತ್ರವಲ್ಲದೇ ನಟನೆಯಲ್ಲಿಯೂ ಸೈ ಅನ್ನಿಸಿಕೊಂಡಿರುವ ಮಾಳವಿಕಾಗಿಲ್ಲಿ ಮಹತ್ವದ ಪಾತ್ರವಿದೆಯಂತೆ. ಮಿಕ್ಕುಳಿದಂತೆ ಮುಖ್ಯ ಪಾತ್ರಗಳಿಗಾಗಿ ಕಲಾವಿದರನ್ನು ಹುಡುಕೋ ಕಾರ್ಯ ಚಾಲ್ತಿಯಲ್ಲಿದೆ. ಇದೀಗ ವಿಶ್ವಂಬರ ದಲ್ಲಿ ತೊಡಗಿಸಿಕೊಂಡಿರುವ ಚಿರು, ಹೊಸಾ ಚಿತ್ರದ ಪಾತ್ರಕ್ಕಾಗಿ ತಾಲೀಮು ನಡೆಸುತ್ತಿದ್ದಾರೆ. ಶೀಘ್ರದಲ್ಲಿಯೇ ಈ ಸಿನಿಮಾದ ಶೀರ್ಷಿಕೆ ಜಾಹೀರಾಗಿ, ಅದರ ಬೆನ್ನಲ್ಲಿಯೇ ಚಿತ್ರೀಕರಣ ಚಾಲೂ ಆಗಲಿದೆ.

