ಕರ್ನಾಟಕದಿಂದ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ಭಾರೀ ಗೆಲುವು ದಕ್ಕಿಸಿಕೊಂಡ ಅನೇಕ ನಟಿಯರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದರೂ ಕೂಡಾ, ಆಕೆಗೂ ಮುನ್ನವೇ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾಕೆ ಪೂಜಾ ಹೆಗ್ಡೆ. ಸರಿಸುಮಾರು ಏಳೆಂಟು ವರ್ಷಗಳ ಕಾಲ ಈಕೆ ತೆಲುಗು ಚಿತ್ರರಂಗದಲ್ಲಿ ಮುಖ್ಯ ನಾಯಕಿಯಾಗಿ ವಿಜೃಂಭಿಸಿದ್ದಳು. ಆ ಕಾಲದಲ್ಲಿ ಆಕೆಯ ಬಗೆಗಿದ್ದ ಕ್ರೇಜ್, ಬೇಡಿಕೆಗಳನ್ನು ನೋಡಿದ್ದವರಿಗೆ, ಈವತ್ತು ಪೂಜಾ ಹೆಗ್ಡೆ ಮಂಕಾಗಿರುವ ರೀತಿ ಕಂಡರೆ ಅಚ್ಚರಿಯಾಗದಿರೋದಿಲ್ಲ. ಒಂದು ಸುದೀರ್ಘ ವನವಾಸದ ನಂತರವೂ ಆಕೆ ಮುಟ್ಟಿದ್ದೆಲ್ಲವೂ ಮಣ್ಣಾಗುವಂತಾಗಿದೆ. ಇದೇ ಹೊತ್ತಿನಲ್ಲಿಮ ಪೂಜಾ ಮಲೆಯಾಳ ಚಿತ್ರರಂಗಕ್ಕೆ ತೆರಳಿ ದುಲ್ಕರ್ ಸಲ್ಮಾನ್ಗೆ ನಾಯಕಿಯಾಗಿರೋ ಸುದ್ದಿ ಬಂದಿದೆ!
2020ರಲ್ಲಿ ಅಲಾ ವೈಕುಂಟಪುರಾಲೋ ಅಂತೊಂದು ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಳು. ಅದು ಒಂದು ಮಟ್ಟಕ್ಕೆ ಗೆಲುವು ಕಂಡಿತ್ತು. ಆ ಕ್ಷಣದಿಂದ ಇಲ್ಲಿಯವರೆಗೂ ಪೂಜಾ ಹೆಗ್ಡೆ ಪಾಲಿಗೆ ಮತ್ತೊಂದು ಗೆಲುವು ಮರೀಚಿಕೆಯಾಗಿದೆ. ಎಲ್ಲಾ ಸಿನಿಮಾಗಳೂ ಗೆಲ್ಲುತ್ತವೆ ಎಂದೇನೂ ಅಲ್ಲ. ಒಂದು ಸೋಲಿನ ನಂತರ ಮತ್ತೊಂದು ಸುಮಾರಾದ ಗೆಲುವು ಸಿಕ್ಕರೂ ಆಕ್ಸಿಜನ್ನು ಸಿಕ್ಕಂತಾಗುತ್ತದೆ. ಆದರೆ, ಪೂಜಾ ಪಾಲಿಗೆ ಅದೇಕೋ ಅಂಥಾದ್ದೊಂದು ಅವಕಾಶವೇ ಸಿಗದಾಗಿ ಹೋಗಿದೆ. ಈ ನಡುವೆ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂಬ ಸಿನಿಮಾದಲ್ಲಿ ಪೂಜಾ ನಟಿಸಿದ್ದಳು. ಅದು ಹೀನಾಯವಾಗಿ ಸೋಲು ಕಂಡಿತ್ತು. ರಾಧೆ ಶ್ಯಾಮ್, ಬೀಸ್ಟ್, ದೇವಾ ಮುಂತಾದ ಸಿನಿಮಾಗಳಿಗೆ ಒಂದರ ಹಿಂದೊಂದರಂತೆ ಸೋಲೆದುರಾಗಿತ್ತು.
ಒಂದು ಕಾಲದಲ್ಲಿ ಪೂಜಾ ನಾಯಕಿಯಾಗಿ ನಟಿಸಿದ ಸಿನಿಮಾಗಳೆಲ್ಲವೂ ಗೆಲ್ಲುತ್ತದೆಂಬಂಥಾ ನಂಬಿಕೆ ಇತ್ತು. ಆಕೆಯ ನಟನೆ ಮತ್ತು ಗ್ಲಾಮರ್ಗೆ ಭಾಷಾತೀತವಾಗಿ ಅಭಿಮಾನಿಗಳಿದ್ದರು. ಈಗಲೂ ಅಭಿಮಾನಕ್ಕೇನು ತತ್ವಾರವಿಲ್ಲ. ಈಕೆಯ ದುರಾದೃಷ್ಟದಿಂದಲೇ ನಟಿಸಿದ ಸಿನಿಮಾಗಳೆಲ್ಲ ಕವುಚಿಕೊಂಡಿದೆ ಅನ್ನೋದೂ ಕೂಡಾ ಮೂರ್ಖತನ. ಯಾಕೆಂದರೆ, ತಪ್ಪಿರೋದು ಆಯ್ಕೆಯಲ್ಲಿ ಮಾತ್ರ. ಯಶದ ನಾಗಾಲೋಟದಲ್ಲಿದ್ದಾಗ ಆಯ್ಕೆಗೆ ವಿಪುಲ ಅವಕಾಶಗಳಿರುತ್ತವೆ. ಆದರೆ ಹೀಗೆ ಸೋಲಿನ ಕಾವಳ ಕವುಚಿಕೊಂಡಾಗ ಸಿಕ್ಕ ಅವಕಾಶವನ್ನೇ ಅಪ್ಪಿಕೊಳ್ಳುವ ಅನಿವಾರ್ಯತೆ ಎದುರಾಗುತ್ತೆ. ಸದ್ಯಕ್ಕೆ ಪೂಜಾಳ ಮುಂದೆಯೂ ಅಂಥಾ ಅನಿವಾರ್ಯತೆ ಇದ್ದಂತಿದೆ. ಈ ನಡುವೆ ಆಕೆ ದುಲ್ಕರ್ ಸಲ್ಮಾನ್ ನಟನೆಯ ಸಿನಿಮಾವೊಂದನ್ನು ಒಪ್ಪಿಕೊಂಡಿರುವ ಸುದ್ದಿ ಬಂದಿದೆ. ಆ ಮೂಲಕ ಮಂಗಳೂರು ಹುಡುಗಿ ಮತ್ತೆ ಮಿಂಚಬಹುದಾ?