ಸಿನಿಮಾ ನಾಯಕನಾಗೋದೆಂದರೆ ಇರಬೇಕಾದ ಅರ್ಹತೆಗಳೇನು? ಇಂಥಾದ್ದೊಂದು ಪ್ರಶ್ನೆ ಎದುರಿಟ್ಟರೆ ಥಟಕ್ಕನೆ ಸ್ಫುರದ್ರೂಪ, ಸಿಕ್ಸ್ ಪ್ಯಾಕು ಮುಂತಾದ ಸಿದ್ಧಸೂತ್ರಪ್ರಣೀತ ಉತ್ತರಗಳು ಎದುರಾಗೋದು ಸಹಜ. ಕೆಲ ಮಂದಿ ನಟರಾಗೋದಕ್ಕೆ ಅಂಥಾ ಅರ್ಹತೆಗಳಿದ್ದರೆ ಸಾಕೆಂಬ ಭ್ರಮೆಯಲ್ಲಿ ಸಿಕ್ಸ್ ಪ್ಯಾಕಿನ ಸಮೇತ ಉದುರಿಕೊಂಡ ದಂಡಿ ದಂಡಿ ಉದಾಹರಣೆಗಳಿದ್ದಾವೆ. ಇತ್ತೀಚಿನ ವರ್ಷಗಳಲ್ಲಿ ಅಂಥಾ ಸಿದ್ಧಸೂತ್ರದ ನಂಬಿಕೆಗಳನ್ನು ಛಿದ್ರಗೊಳಿಸಿದವರಲ್ಲಿ ಅಗ್ರಗಣ್ಯರಾಗಿ ಕಾಣಿಸುವವರು ರಾಜ್ ಬಿ ಶೆಟ್ಟಿ. ತನಗೊಪ್ಪುವ ಕಥೆಯನ್ನು ತಾನೇ ಸಿದ್ಧಪಡಿಸಿ, ನಿರ್ದೇಶಿಸಿ ಒಂದು ಮೊಟ್ಟೆಯ ಕಥೆಯೊಂದಿಗೆ ಪ್ರತ್ಯಕ್ಷರಾಗಿದ್ದ ರಾಜ್ ಶೆಟ್ಟಿ ಇದೀಗ ಕನ್ನಡ ಚಿತ್ರರಂಗದ ದಿಕ್ಕು ದೆಸೆಗಳನ್ನೇ ಬದಲಾಯಿಸುವಂತೆ ಬೆಳೆದು ನಿಂತದ್ದಿದೆಯಲ್ಲಾ? ಅದು ನಿಜಕ್ಕೂ ಸೋಜುಗ!
ಓರ್ವ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿಯೂ ಕೂಡಾ ರಾಜ್ ಶೆಟ್ಟಿಯದ್ದು ಭಿನ್ನ ಪಥ. ಇತ್ತೀಚೆಗಷ್ಟೆ ತೆರೆಗಂಡು ಸೂಪರ್ ಹಿಟ್ ಆಗಿರುವ ಸು ಫ್ರಂ ಸೋ ಚಿತ್ರ ಓರ್ವ ನಿರ್ಮಾಪಕನಾಗಿ ರಾಜ್ ಶೆಟ್ಟಿಯ ಕಸುವಿಗೊಂದು ಉದಾಹರಣೆಯಂತೆ ಕಾಣಿಸುತ್ತೆ. ಈ ನಡುವೆ ನಟನಾಗಿಕ ಬೇರೆ ನಿರ್ದೇಶಕರ ಸಿನಿಮಾಗಳಲ್ಲಿಯೂ ಕೂಡಾ ರಾಜ್ ಶೆಟ್ಟರಿಗೆ ಒಳ್ಳೆ ಅವಕಾಶಗಳೇ ಕೂಡಿ ಬರುತ್ತಿವೆ. ಗುರುದತ್ ಗಾಣಿಗ ನಿರ್ದೇಶನದ ಕರಾವಳಿ ಚಿತ್ರದಲ್ಲಿ ರಾಜ್ ಪಾತ್ರದ ಝಲಕ್ಕೊಂದೀಗ ಭಾರೀ ಚರ್ಚೆ ಹುಟ್ಟು ಹಾಕಿದೆ. ರಾಜ್ ಶೆಟ್ಟಿ ಇಲ್ಲಿ ಮಾವೀರನಾಗಿ ಮಿಂಚಲಿರೋದು ಪಕ್ಕಾ.
ಗುರುದತ್ ಗಾಣಿಗ ಈ ಹಿಂದೆ ಅಂಬಿ ನಿಂಗ್ ವಯಸ್ಸಾಯ್ತೋ ಅಂತೊಂದು ಸಿನಿಮಾ ನಿರ್ದೇಶನ ಮಾಡಿದ್ದರು. ಆ ಮೂಲಕ ದೊಡ್ಡ ಮಟ್ಟದಲ್ಲಿ ಗೆಲುವು ದಕ್ಕದಿದ್ದರೂ ಒಂದಷ್ಟು ಮೆಚ್ಚುಗೆಯನ್ನಂತೂ ಪಡೆದುಕೊಂಡಿದ್ದರು. ಕರಾವಳಿ ಮೂಲಕ ಈತ ಪಕ್ಕಾ ಮಾಸ್ ಕಂಟೆಂಟಿನತ್ತ ಮುಖಮಾಡಿದಂತೆ ಕಾಣಿಸುತ್ತಿದೆ. ಅದೆಲ್ಲ ಏನೇ ಇದ್ದರೂ ರಾಜ್ ಶೆಟ್ಟಿ ಆ ಪಾತ್ರವನ್ನು ಒಲಪ್ಪಿಕೊಂಡಿದ್ದಾರೆಂದ ಮೇಲೆ ಒಟ್ಟಾರೆ ಕಂಟೆಂಟು ಚೆಂದಗಿತ್ತೆಂದೇ ಅರ್ಥ. ಅಂಥಾದ್ದೊಂದು ನಂಬಿಕೆ ಕನ್ನಡದ ಸಮಸ್ತ ಸಿನಿಮಾ ಪ್ರೇಮಿಗಳಲ್ಲಿಯೂ ಮೂಡಿಕೊಂಡಿದೆ. ಬಹುಶಃ ಅದು ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ ಶೆಟ್ಟಿ ಜನರ ನಂಬಿಕೆ ಸಂಪಾದಿಸಿದ್ದಕ್ಕೊಂದು ಉದಾಹರಣೆಯಷ್ಟೆ.
ಹೀಗೆ ರಾಜ್ ಶೆಟ್ಟಿ ಕರಾವಳಿಯಲ್ಲಿ ಮಾವೀರನಾದ ವಿಚಾರದ ಆಸುಪಾಸಲ್ಲಿಯೇ ಮತ್ತೊಂದು ದಿಕ್ಕಿನ ಗಂಭೀರ ಚರ್ಚೆಯೂ ಶುರುವಾಗಿದೆ. ಕನ್ನಡ ಚಿಕತ್ರರಂಗಕ್ಕೆ ಆಗಾಗ ಉಸಿರು ನೀಡುತ್ತಿರೋದು ಕಡಲ ಕಿನಾರೆಯ ಕಥೆಗಳೇ ಎಂಬುದು ಆ ಚರ್ಚೆಯ ಮೂಲ. ಒಂದು ಕಾಲದಲ್ಲಿ ಹಳ್ಳಿ ಸೊಗಡೆಂದರೆ ಮಂಡ್ಯ ಸೀಮೆಯ ಟಿಪಿಕಲ್ ಶೈಲಿಯ ಭಾಷೆ, ಜನಜೀವನ ಮಾತ್ರ ಎಂಬಂತಾಗಿತ್ತು. ಬಹುತೇಕ ಎಲ್ಲ ನಿರ್ದೇಶಕರೂ ಕೂಡಾಶ ತಮ್ಮ ಮೂಲ ಬೇರುಗಳನ್ನೇ ಕಿತ್ತಿಟ್ಟುಕೊಂಡವರಂತೆ ಅಂಥಾದ್ದೊಂದು ಸೂತ್ರಕ್ಕೆ ಪಕ್ಕಾಗಿದ್ದರು. ಆದರೀಗ ಕರಾವಳಿಯ ನೆಲಮೂಲದ ಕಥನಗಳೂ ಮುನ್ನೆಲೆಗೆ ಬಂದಿವೆ. ಇದೇ ರೀತಿ ಕರ್ನಾಟಕದ ಬೇರೆ ಬೇರೆ ಭೂಭಾಗಗಳ ಮಣ್ಣಿನ ಘಮ ಹೊದ್ದ ಕಥೆಗಳತ್ತ ಗಮನ ಹರಿಸಿದರೆ ಬಹುಶಃ ಕನ್ನಡ ಚಿತ್ರರಂಗದ ಪಾಲಿಗೆ ಸುವರ್ಣ ಯುಗವೊಂದು ಆರಂಭವಾದೀತೇನೋ…