ತನ್ನ ಅಭಿನಯದ ಶೈಲಿಯಿಂದಲೇ ಜನಮನ ಗೆದ್ದು ನ್ಯಾಚುರಲ್ ಸ್ಟಾರ್ ಅನ್ನಿಸಿಕೊಂಡಿರುವಾತ ನಾನಿ. ವೃತ್ತಿ ಬದುಕಿನಲ್ಲಿ ಸಹಜವಾದ ಒಂದಷ್ಟು ಏರಿಳಿತಗಳನ್ನು ಕಂಡಿರುವ ನಾನಿ, ಒಂದು ಸೋಲಿನ ಬೆನ್ನಲ್ಲಿಯೇ ಮೈ ಕೊಡವಿಕೊಂಡು ಎದ್ದು ನಿಂತ ಉದಾಹರಣೆಗಳಿದ್ದಾವೆ. ಒಂದಷ್ಟು ಹಂತಗಳಲ್ಲಿ ತುಸು ಮಂಕಾದಂತೆ ಕಾಣಿಸಿದ್ದ ನಾನಿಯೀಗ ಮತ್ತೆ ವಸಂತ ಕಾಲದತ್ತ ಮುಖ ಮಾಡಿ ನಿಂತಂತಿದೆ. ದಿ ಪ್ಯಾಡೈಸ್ ಎಂಬ ದೊಡ್ಡ ಬಜೆಟ್ ಚಿತ್ರದಲ್ಲಿ ಬ್ಯುಸಿಯಾಗಿರುವ ಈತನೀಗ ಮತ್ತೊಂದಷ್ಟು ಹೊಸಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆ ಯಾದಿಯಲ್ಲಿ ದಿ ಪ್ಯಾರಡೈಸ್ ನಂತರ ಓಜಿ ಖ್ಯಾತಿಯ ಸುಜೀತ್ ನಿರ್ದೇಶನದ ಸಿನಿಮಾ ಆರಂಭವಾಗುವುದು ಬಹುತೇಕ ಖಚಿತವಾಗಿದೆ.
ಪವನ್ ಕಲ್ಯಾಣ್ ನಟಿಸಿದ್ದ ಓಜಿ ಚಿತ್ರದ ಮೂಲಕ ಗಮನ ಸೆಳೆದಿದ್ದಾತ ನಿರ್ದೇಶಕ ಸುಜೀತ್. ಒಂದು ಮಟ್ಟದ ಗೆಲುವು ಕಂಡ ಓಜಿ ನಂತರ ನಾನಿಗಾಗಿಯೇ ಸುಜೀತ್ ಈ ಕಥೆ ಸಿದ್ಧಪಡಿಸಿದ್ದರಂತೆ. ಇದೀಗ ಪ್ಯಾರಡೈಸ್ ಚಿತ್ರ ಅಚಿತಿಮ ಘಟ್ಟದಲ್ಲಿರುವಾಗಲೇ ಸದರಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳು ಚಾಲೂ ಆಗಿವೆ. ಸದ್ಯದ ಮಟ್ಟಿಗೆ ತಾರಾಗಣದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿದೆ. ತಾಂತ್ರಿಕ ವರ್ಷವೆಲ್ಲ ಈಗಾಗಲೇ ನಿಕ್ಕಿಯಾಗಿದೆ. ಈ ಸಿನಿಮಾದಲ್ಲಿ ನಾನಿಗೆ ನಾಯಕಿ ಹುಡುಕೋ ಕಾರ್ಯ ಈಗೊಂದು ತಿಂಗಳಿಂದೀಚೆಗೆ ಚಾಲೂ ಆಗಿತ್ತು. ಈ ಸಾಲಿನಲ್ಲಿ ಅನೇಕ ನಟಿಯರ ಹೆಸರುಗಳು ಕೇಳಿ ಬಂದಿದ್ದರೂ, ಕಡೆಗೂ ಬಾಲಿವುಡ್ಡಿನ ತೃಪ್ತಿ ದಿಮ್ರಿ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ!
೨೦೧೮ರಿಂದೀಚೆಗೆ ನಾಯಕಿಯಾಗಿ ಚಾಲ್ತಿಯಲ್ಲಿರುವ ತೃಪ್ತಿ ದಿಮ್ರಿಗೆ ಇದುವರೆಗೂ ಸಾಧಾರಣ ಎಂಬಂಥ ಗೆಲುವುಗಳು ಮಾತ್ರವೇ ಸಿಕ್ಕಿದೆ. ಒಂದು ಹಂತದಲ್ಲಿ ನಾಯಕಿಯಾಗಿ ಅವಕಾಶಕ್ಕೆ ತತ್ವಾರವಾದಾಗ ಐಟಂ ನಂಬರುಗಳಿಗೆ ಸೀಮಿತವಾದದ್ದೂ ಇದೆ. ನಾಯಕಿಯಾಗಿ ಮೆರೆಯಬೇಕಿದ್ದ ಈ ನಟಿ ಐಟಂ ನಂಬರಿಗೆ ಮಾತ್ರವೇ ಸೀಮಿತವಾಗಿದ್ದ ಘಳಿಗೆಯಲ್ಲಿಯೇ ನಾನಿಗೆ ಜೋಡಿಯಾಗುವಂಥಾ ಸುವರ್ಣಾವಕಾಶ ಒಲಿದು ಬಂದಿದೆ. ಈ ಸಿನಿಮಾ ಮೂಲಕ ತನ್ನ ವೃತ್ತಿ ಬದುಕಿಗೆ ಕವಿದಿದ್ದ ಗ್ರಹಣ ಕಳೆಯೋ ಸಾಧ್ಯತೆಗಳಿದ್ದಾವೆ. ಈಗಾಗಲೇ ತೃಪ್ತಿ ಈ ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದಾಳೆ. ಇಷ್ಟರಲ್ಲಿಯೇ ಚಿತ್ರೀಕರಣ ಚಾಲೂ ಆಗಲಿದೆ.
keywords: nani, tripti dimri, tripti dimri upcoming movie, cinishodha

