ಪ್ರಖ್ಯಾತ ಉದ್ಯಮಿಗಳು ಸಿನಿಮಾ ನಿರ್ಮಾಣದತ್ತ ಆಕರ್ಷಿತರಾಗೋದು ಹೊಸತೇನಲ್ಲ. ಹೀಗೆ ಸಿನಿಮಾ ಜಗತ್ತಿಗೆ ಅಡಿಯಿರಿಸೋ ಬಹುತೇಕರು ಬಂಡವಾಳ ಹೂಡಿ ಬಡ್ಡಿ ಸಮೇತ ಕಾಸೆತ್ತೋ ವ್ಯವಹಾರವೆಂದು ಪರಿಗಣಿಸೋದೇ ಹೆಚ್ಚು. ಆದರೆ, ಕೆಲವೇ ಕೆಲ ಮಂದಿ ಮಾತ್ರ ವ್ಯಾವಹಾರಿಕ ಅಂಶಗಳ ಜೊತೆ ಜೊತೆಗೇ ಒಂದೊಳ್ಳೆ ಸಿನಿಮಾ ಕೊಡಬೇಕೆಂಬ ಹಂಬಲದೊಂದಿಗೆ ಪ್ರತೀ ಹೆಜ್ಜೆಯನ್ನೂ ಬಲು ಎಚ್ಚರದಿಂದ ತೆರೆದಿಡುತ್ತಾರೆ. ಇದೀಗ ಟೀಸರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಸುಖೀಭವ ಚಿತ್ರದ ನಿರ್ಮಾಪಕರಾದ ಸಂತೋಷ್ ಕುಮಾರ್ ನಿಸ್ಸಂದೇಹವಾಗಿಯೂ ಆ ಸಾಲಿಗೆ ಸೇರುವವರು. ಲಂಡನ್ನಿನಲ್ಲಿ ಎಂಬಿಎ ವ್ಯಾಸಂಗ ನಡೆಸಿ, ಅಲ್ಲಿಯೇ ಒಂದಷ್ಟು ವರ್ಷ ಕೆಲಸ ಮಾಡಿದ್ದ ಸಂತೋಷ್, ಬಿಲ್ಡರ್ ಆಗಿಯೂ ಗೆಲುವು ಕಂಡವರು. ಅವರೀಗ ಸುಖೀಭವ ಮೂಲಕ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಆಗಮಿಸಿದ್ದಾರೆ.
ಬೇರುಗಳು ನೆರೆಯ ಆಂದ್ರ ಪ್ರದೇಶದಲ್ಲಿದ್ದರೂ ಸಂತೋಷ್ ಕುಮಾರ್ ಅವರ ಒಂದಷ್ಟು ತಲೆಮಾರುಗಳು ಬೆಂಗಳೂರಿನಲ್ಲಿಯೇ ನೆಲೆಗೊಂಡಿವೆ. ಅಪ್ಪಟ ಕನ್ನಡಿಗರಾಗಿರುವ ಅವರದ್ದು ಜಮೀನ್ದಾರೀ ಕುಟುಂಬ. ವಿದೇಶದಲ್ಲಿಯೇ ನೆಲೆ ಕಂಡುಕೊಳ್ಳುವ ಅವಕಾಶಗಳಿದ್ದರೂ ಈಗ್ಗೆ ಒಂದಷ್ಟು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿರುವ ಸಂತೋಷ್ ಕುಮಾರ್ ಈಗ ಬೆಂಗಳೂರಿನ ಪ್ರಖ್ಯಾತ ಬಿಲ್ಡರ್ಗಳಲ್ಲೊಬ್ಬರಾಗಿದ್ದಾರೆ. ಇಂಥಾ ಸಂತೋಷ್ರನ್ನು ಸುಖೀಭವ ಚಿತ್ರದ ನಿರ್ದೇಶಕ ರಾಜೇಶ್ ನಾಯ್ಡು ಕೊರೋನಾ ಕಾಲಕ್ಕಿಂತಲೂ ಮೊದಲೇ ಭೇಟಿ ಮಾಡಿದ್ದರಂತೆ.ಆದರೆ, ಆಗಿನ್ನೂ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಸಂತೋಷ್ ಪಾಲಿಗೆ ಸಿನಿಮಾ ನಿರ್ಮಾಣ ಮಾಡುವಷ್ಟು ವ್ಯವಧಾನವಿರಲಿಲ್ಲ.
ಕೊರೋನಾ ಬಾಧೆಯ ದಿನಗಳಲ್ಲಿ ವರ್ಷಗಟ್ಟಲೆ ಮನೆಯಲ್ಲಿಯೇ ಬಂಧಿಯಾಗಿದ್ದ ಸಂದರ್ಭದಲ್ಲಿ ಮನೋರಂಜನಾ ಉದ್ಯಮದತ್ತ ಕಣ್ಣು ಹಾಯಿಸಲು ಸಂತೋಷ್ ಅವರಿಗೆ ಸಾಧ್ಯವಾಗಿತ್ತು. ಈ ನಿಟ್ಟಿನಲ್ಲಿ ಸಿನಿಮಾ ರಂಗದ ಅಗಾಧ ಸಾಧ್ಯತೆಗಳು ಅವರನ್ನು ಸೆಳೆದುಕೊಂಡಿದ್ದವು. ಇಂಥಾ ಘಳಿಗೆಯಲ್ಲಿ ಥಟ್ಟನೆ ವರ್ಷಗಳ ಹಿಂದೆ ಸಿನಿಮಾ ಕಥೆಯೊಂದಿಗೆ ಭೇಟಿಯಾಗಿದ್ದ ರಾಜೇಶ್ ನಾಯ್ಡು ನೆನಪಾದದ್ದೇ, ಅವರಿಗೊಂದು ಕರೆ ಮಾಡಿ ಕರೆಸಿಕೊಂಡಿದ್ದರಂತೆ. ಎಲ್ಲವೂ ಅಚ್ಚುಕಟ್ಟಾಗಿರ ಬೇಕೆಂಬ ಶಿಸ್ತು ಹೊಂದಿರುವ ಸಂತೋಷ್ ಪಾಲಿಗೆ ರಾಜೇಶ್ ಹೇಳಿದ ಕಥೆ ಇಷ್ಟವಾಗಿತ್ತು. ಹಾಗಂತ ಏಕಾಏಕಿ ನಿರ್ಮಾಣಕ್ಕಿಳಿದು ಬಿಡುವ ಅವಸರವಿರಲಿಲ್ಲ. ರಾಜೇಶ್ ನಿರ್ದೇಶನದ ಕಸುವು ಹೊಂದಿದ್ದಾರಾ ಎಂಬುದನ್ನು ಪತ್ತೆಹಚ್ಚಲೋಸ್ಕರವೇ ಒಂದು ಟಾಸ್ಕ್ ಕೊಟ್ಟಿದ್ದರು.
ಆರಂಭಿಕವಾಗೊಂದು ಶಾರ್ಟ್ ಫಿಲಂ ಮಾಡಿ, ಆ ಮೂಲಕ ಪ್ರತಿಭೆಯನ್ನು ತೋರ್ಪಡಿಸುವಂತೆ ಹೇಳಿದ್ದ ಸಂತೋಷ್ ಕುಮಾರ್ ಅದಕ್ಕಾಗಿ ಒಂದು ಬಜೆಟ್ ಅನ್ನು ಮೀಸಲಿಟ್ಟಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿದ್ದ ರಾಜೇಶ್ ರೈಟ್ ಟರ್ನ್ ಅಂತೊಂದು ಶಾರ್ಟ್ ಫಿಲಂ ಮಾಡಿದ್ದರು. ಅದನ್ನು ಕಂಡು ಖುಷಿಗೊಂಡಿದ್ದ ಸಂತೋಷ್ ಅವರು ಸಿನಿಮಾ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಹಾಗೆ ಸುಖೀಭವ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಂತಾಗಿತ್ತು. ಹೀಗೊಂದು ಹೆಜ್ಜೆಯಿಟ್ಟ ಸಂತೋಷ್ ನಿಧಾರದ ಹಿಂದೆ ನಿಜಕ್ಕೂ ಸದುದ್ದೇಶವಿದೆ. ಯಾಕೆಂದರೆ, ರಾಜೇಶ್ ಅವರಿಗೆ ಪಕ್ಕಾ ಆಕ್ಷನ್ ಓರಿಯಂಟೆಡ್ ಸೇರಿದಂತೆ ಮೂರುಇ ಕಥೆಗಳನ್ನು ಹೇಳಿದ್ದರು. ಅದರಲ್ಲೊಂದು ಕಥೆಗೆ ಫೇಮ್ ಇರೋ ಹೀರೋನನ್ನು ಹಾಕಿಕೊಂಡಿದ್ದರೆ ಗೆಲುವು ಕಷ್ಟವಿರಲಿಲ್ಲ. ಆದರೆ ಸಿನಿಮಾ ಬಗ್ಗೆ ಅವರೊಳಗೆ ವ್ಯಹಾರದಾಚೆಯ ಕನಸಿತ್ತು.
ಸಾಮಾನ್ಯವಾಗಿ ಹಣ ಹೂಡಿಕೆ ನಡೆಸುವರಲ್ಲಿ ಬಹುತೇಕರು ಕಮರ್ಶಿಯಲ್ ಸಿನಿಮಾಗಳ ಗುಂಗು ಹತ್ತಿಸಿಕೊಳ್ಳುತ್ತಾರೆ. ಆದರೆ, ಬೇರೆ ಬಗೆಯ ಚೆಂದದ ಕಥೆ ಹೇಳೋ ಉತ್ಸಾಹದಲ್ಲಿರುವ ಹೊಸಬರು ಅಲೆಯುತ್ತಲೇ ಇರಬೇಕಾಗುತ್ತದೆ. ನಿಜವಾಗಿಯೂ ಹಸಿವಿರುವ, ಪ್ರತಿಭಾನ್ವಿತರಿಗೆ ಅವಕಾಶ ಕೊಡಬೇಕೆಂಬ ಇರಾದೆಯೊಂದಿಗೆ, ಒಂದಿಡೀ ತಂಡದಲ್ಲಿ ಹೊಸಬರನ್ನು ಸೇರಿಸಿಕೊಂಡೇ ಸಂತೋಷ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಪ್ರಯತ್ನ ಪ್ರೇಕ್ಷಕರಿಗೆ ಇಷ್ಟವಾಗುತ್ತದೆಂಬ ನಂಬಿಕೆಯೂ ಅವರಲ್ಲಿದೆ. ನಿರೀಕ್ಷೆಯಂತೆ ಈ ಸಿನಿಮಾವನ್ನು ಜನ ಇಷ್ಟಪಟ್ಟರೆ ಮತ್ತೊಂದಷ್ಟು ಬಗೆಯ ಒಳ್ಳೆ ಕಂಟೆಂಟಿನ ಸಿನಿಮಾಗಳನ್ನು ನಿರ್ಮಾಣ ಮಾಡುವ ಕನಸು ಸಂತೋಷ್ರೊಳಗಿದೆ. ಸದ್ಯದ ಮಟ್ಟಿಗೆ ಟೀಸರ್ ಮತ್ತು ಹಾಡುಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆರಗಳು ಕೇಳಿ ಬರುತ್ತಿರೋದರಿಂದ ಅವರು ಖುಷಿಗೊಂಡಿದ್ದಾರೆ.
keywords: sukhibhava, santhosh kumar, sandalwood, kfi, sukhibhava movie

