ಕಳೆದ ವರ್ಷದಂಚಿನಲ್ಲಿ ಹಬ್ಬಿಕೊಂಡ ಸಾಕಾರಾತ್ಮಕ ಪ್ರಭೆಯಲ್ಲಿ ಕನ್ನಡ ಚಿತ್ರರಂಗ ಹೊಸ ವರ್ಷಕ್ಕೆ ದಾಟಿಕೊಂಡಿದೆ. ಈ ಹೊತ್ತಿನಲ್ಲಿ ದೊಡ್ಡ ಗೆಲುವಿನ ನಿರೀಕ್ಷೆ ಹೊತ್ತ ಸಿನಿಮಾಗಳ ಜೊತೆಜೊತೆಗೇ ಅಚ್ಚರಿಯೆಂಬಂತೆ ಪ್ರೇಕ್ಷಕರನ್ನು ತಾಕಬಲ್ಲ ಮತ್ತೊಂದಷ್ಟು ಚಿತ್ರಗಳೂ ತೆರೆಗಾಣುವ ಸನ್ನಾಹದಲ್ಲಿವೆ. ಹೊಸಬರ ತಂಡ, ಹೊಸ ಕನಸು, ಪ್ರಯೋಗಾತ್ಮಕ ಅಂಶಗಳೊಂದಿಗೆ ಚಿತ್ರರಂಗದ ಹರಿವಿಗೊಂದು ಓಘ ಕೊಡುವ ಒಂದಷ್ಟು ಸಾಹಸಗಳೂ ನಡೆಯುತ್ತಿವೆ. ಅಂಥಾ ಸಾಲಿಗೆ ಸೇರ್ಪಡೆಗೊಳ್ಳಬಹುದಾದ ಚಿತ್ರ `ಸುಖೀಭವ’. ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಸದರಿ ಸಿನಿಮಾ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಆ ಬಗ್ಗೆ ಒಂದಷ್ಟು ಪ್ಶಂಸೆಯ ಮಾತುಗಳೂ ಕೇಳಿ ಬರುತ್ತಿವೆ. ಹೀಗೆ ಸದ್ದೇ ಇಲ್ಲದಂತೆ ರೂಪುಗೊಂಡು ಬಿಡುಗಡೆಗೆ ಅಣಿಗೊಳ್ಳುತ್ತಿರುವ ಈ ಚಿತ್ರದ ಮೂಲಕ ಎನ್.ಕೆ ರಾಜೇಶ್ ನಾಯ್ಡು ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬುದು ಬಹುತೇಕರನ್ನು ಒಂದಿಲ್ಲೊಂದು ಹಂತದಲ್ಲಿ ಕಾಡುವ ಕನಸು. ಆದರೆ, ಆರ್ಥಿಕವಾಗಿ ಕೆಳ ಸ್ಥರದಲ್ಲಿರುವವರ ಪಾಲಿಗದು ಯಾವತ್ತಿದ್ದರೂ ದುಬಾರಿ. ಇಂಥಾ ಮಿತಿಗಳಾಚೆಗೂ ಅವುಡುಗಚ್ಚಿ ಮುನ್ನಡೆಯುವ ಛಾತಿ ಇರುವವರಿಗೆ ಮಾತ್ರವೇ ಕನಸಿನ ಹಾದಿಯಲ್ಲಿ ಗಟ್ಟಿಯಾಗಿ ಹೆಜ್ಜೆಯೂರೋ ಕಸುವು ದಕ್ಕುತ್ತದೆ. ಮೂಲರ್ತ ಮೈಸೂರಿನವರಾದರೂ, ಬೆಂಗಳೂರಿಗರಾಗಿರುವ ಎನ್.ರಾಜೇಶ್ ನಾಯ್ಡು ಪಾಲಿಗೂ ಸಿನಿಮಾ ಎಂಬುದು ಕೈಗೆಟುಕದ ಕನಸಿನಂತಿತ್ತು. ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ಒಳ್ಳೆ ಸಿನಿಮಾಗಳನ್ನು ನೋಡುತ್ತಲೇ, ತಾನೂ ಕೂಡಾ ಆ ಜಗತ್ತಿನ ಭಾಗವಾಗಬೇಕೆಂದು ಕನಸು ಕಂಡಿದ್ದವರು ರಾಜೇಶ್. ಅದು ಬರೀ ಕನಸಾಗಿರದೆ ಧ್ಯಾನವಾದದ್ದರ ಫಲವಾಗಿಯೇ ಸುಖೀಭವ ಚಿತ್ರದ ಮೂಲಕ ಹದಿನಾಲಕ್ಕು ವರ್ಷಗಳ ನಿರಂತರ ಪ್ರಯತ್ನ ಸಾರ್ಥಕ್ಯ ಕಂಡಿದೆ.
ಈಗ್ಗೆ ಹತ್ತು ವರ್ಷಗಳ ಹಿಂದೆಯೇ ಎನ್.ಕೆ ರಾಜೇಶ್ ನಾಯ್ಡು ಅವರ ತಂದೆ ನಿಧನ ಹೊಂದಿದ್ದರು. ಬದುಕೋ ಭರವಸೆಯಂತೆ ಉಳಿದುಕೊಂಡಿದ್ದದ್ದು ತಾಯಿ ಮತ್ತು ಸಿನಿಮಾ ಕನಸು ಮಾತ್ರ. ಮನೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದ್ದದ್ದರಿಂದಾಗಿ ಏಕಾಏಕಿ ಗಾಂಧಿನಗರಕ್ಕೆ ಹೊರಟು ನಿಲ್ಲುವ ಧೈರ್ಯ ಮಾಡುವಂತಿರಲಿಲ್ಲ. ಜೀವನಕ್ಕಾಗಿ ಬೇರೆ ಕೆಲಸ ಮಾಡಿಕೊಂಡು, ಅದರ ನಡುವೆಯೇ ಸಿನಿಮಾ ಕೆಲಸ ಮಾಡುವ ನಿರ್ಧಾರಕ್ಕೆ ಬಂದಿದ್ದ ರಾಜೇಶ್ ಶತಪ್ರಯತ್ನ ನಡೆಸಿದ ಫಲವಾಗಿಯೇ ಯೋಗರಾಜ ಭಟ್ಟರ ಗರಡಿಗೆ ಎಂಟ್ರಿ ಸಿಕ್ಕಿತ್ತು. ಹಾಗೆ ರಾಜೇಶ್ ಯೋಗರಾಜ್ ಭಟ್ ಜೊತೆ ಸೇರಿಕೊಂಡ ಘಳಿಗೆಯಲ್ಲಿ ಅವರು ದಿಗಂತ್ ನಾಯಕನಾಗಿ ನಟಿಸಿರೋ ಪರಪಂಚ ಚಿತ್ರದ ಸಿದ್ಧತೆಯಲ್ಲಿದ್ದರು. ಅದರ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಅಧಿಕೃತವಾಗಿ ಸಿನಿಮಾ ರಂಗಕ್ಕೆ ತಲುಪಿಕೊಮಡಂತಾಗಿತ್ತು.
ಆ ನಂತರವೂ ಎನ್.ಕೆ ರಾಜೇಶ್ ನಾಯ್ಡು ಒಂದಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಆದರೆ, ಅದನ್ನೇ ದಿನವಹೀ ಮಾಡಿದರೆ ಜೀವನದ ಜವಾಬ್ದಾರಿ ನಿರ್ವಹಿಸೋದು ಕಷ್ಟವೆಂಬುದು ಗೊತ್ತಾಗುತ್ತಲೇ, ರೀಟೇಲ್, ಡ್ರೈವಿಂಗ್ ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತಾ, ಅದರಿಂದ ಬಂದ ಕಾಸನ್ನು ಅಮ್ಮನಿಗೆ ಕೊಡುತ್ತಾ, ಮತ್ತೆ ಸಿನಿಮಾ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾ ಅವರೊಳಗೆ ನಿರ್ದೇಶಕನಾಗಬೇಜಕೆಂಬ ಕನಸೊಂದು ಬಲಗೊಂಡಿತ್ತು. ವಿಶೇಷವೆಂದರೆ, ಯೋಗರಾಜ ಭಟ್ಟರ ಜೊತೆ ಕೆಲಸಕ್ಕೆ ಸೇರಿಕೊಂಡ ಘಳಿಗೆಯಲ್ಲಿಯೂ ನಿರ್ದೇಶಕನಾಗಬೇಕೆಂಬುದೂ ಸೇರಿದಂತೆ ಮತ್ಯಾವ ನಿಖರ ಆಲೋಚನೆಗೂ ಅವರಲ್ಲಿರಲಿಲ್ಲ. ಬರಬರುತ್ತಾ, ಸಿನಿಮಾ ಒಳ ಹೊರಗನ್ನು ಅರಿತುಕೊಂಡ ನಂತರ ನಿರ್ದೇಶನವೆಂಬುದು ಅವರನ್ನು ಆಪ್ಯಾಯವಾಗಿ ಆಲಂಗಿಸಿಕೊಂಡಿತ್ತು.
ಹೀಗೆ ಸಾಗಿ ಬಂದಿರುವ ಎನ್.ಕೆ ರಾಜೇಶ್ ನಾಯ್ಡು ೨೦೧೨ರಲ್ಲಿಯೇ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದರಂತೆ. ಅದನ್ನು ಸಿನಿಮಾ ಮಾಡಬೇಕೆಂಬ ಕನಸಿತ್ತಾದರೂ, ತಾನೇ ನಿರ್ದೇಶನ ಮಾಡಬೇಕೆಂಬ ಇರಾದೆ ಇರಲಿಲ್ಲ. ಅದಾದ ನಂತರ ಸಿನಿಮಾ ರಂಗಕ್ಕೆ ಬಂದು, ಒಂದಷ್ಟು ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿದ ನಂತರ, ತಾನು ಬರೆದ ಕಥೆಗೆ ತಾನೇ ದೃಷ್ಯರೂಪ ಕೊಡಬೇಕೆಂಬ ಹಂಬಲವೊಂದು ಅವರೊಳಗೆ ಊಟೆಯೊಡೆಯಲಾರಂಭಿಸಿತ್ತು. ಈ ಕಥೆಯನ್ನು ನಿರ್ದೇಶನ ಮಾಡಲೇ ಬೇಕೆಂದು ಪಟ್ಟಾಗಿ ಕೂತು ಕೆಲಸ ಮಾಡಲಾರಂಭಿಸಿದ್ದು ೨೦೧೭ರಲ್ಲಿ. ಸ್ಕ್ರಿಪ್ಟ್ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಂಡ ನಂತರ ನಿರ್ಮಾಪಕರ ಹುಡುಕಾಟ ಶುರುವಾಗಿತ್ತು. ಈ ಹಾದಿಯಲ್ಲಿ ಒಂದಷ್ಟು ನಿರಾಸೆಯೂ ಮುತ್ತಿಕೊಂಡಿತ್ತು. ಕಡೆಗೂ ಪ್ರಯತ್ನ ಜಾರಿಯಲ್ಲಿಟ್ಟಿದ್ದ ಎನ್.ಕೆ ರಾಜೇಶ್ ನಾಯ್ಡುಗೆ ಅದೊಂದು ದಿವ್ಯ ಘಳಿಗೆಯಲ್ಲಿ ಸ್ನೇಹಿತರ ಮೂಲಕ ನಿರ್ಮಾಪಕ ಸಂತೋಷ್ ಕುಮಾರ್ ಸಿಕ್ಕಿಬಿಟ್ಟಿದ್ದರು.
ಒಂದು ಸೀಮಿತ ಬಜೆಟ್ಟಿನಲ್ಲಿ ಈ ಸಿನಿಮಾಶ ನಿರ್ಮಾಣ ಮಾಡಲು ಮುಂದಾಗಿದ್ದ ಸಂತೋಷ್ ಕುಮಾರ್ ವೇದ್ ಆರ್ಯನ್ ಫಿಲಂಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಒಲ್ಳೆ ಮನಸುಗಳ ಕಥೆ ಎಂಬೋಫ ಸುಳಿವು ಕೊಟ್ಟಿರುವ ರಾಜೇಶ್, ನವಿರು ಪ್ರೇಮ ಕಥೆಯೊಂದನ್ನು ಪ್ರೆಕ್ಷಕರ ಮುಂದಿಡುತ್ತಿದ್ದಾರೆ. ಪ್ರೀತಿ ಅನ್ನೋದು ಯಾರ ಬೊಗಸೆಯಲ್ಲಿದ್ದರೂ ಅವರ ಭಾವಕ್ಕೆ ತಕ್ಕಂತೆ ರೂಪಾಂತರ ಹೊಂದುವ ಮಾಯೆ. ಈ ಕಾರಣದಿಂದಲೇ ಸಿನಿಮಾ ಜಗತ್ತಿನಲ್ಲಿ ಪ್ರೇಮವೆಂಬುದು ಎಂದಿಗೂ ಸವಕಲಾಗದ ಕಥಾ ವಸ್ತುವಾಗಿ ಉಳಿದುಕೊಂಡಿದೆ. ತಮ್ಮ ಜೀವಮಾನದ ಕನಸಿನಂಥಾ ಸುಖೀಭವವನ್ನು ನಿರ್ಮಾಪಕರಿಗೆ ಕೊಟ್ಟ ಮಾತಿನಂತೆಯೇ ಮಾಡಿ ಮುಗಿಸಿದ ತುಂಬು ಖುಷಿ, ಈ ಪ್ರಯತ್ನವನ್ನು ಪ್ರೇಕ್ಷಕರು ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆಂಬ ನಂಬಿಕೆ ರಾಜೇಶ್ರದ್ದು.
ಪ್ರೇಮ, ಹಾಸ್ಯ, ಭರ್ಜರಿ ಮನೋರಂಜನೆಯೊಂದಿಗೆ ಕುಟುಂಬ ಸಮೇತರಾಗಿ ನೋಡಿ ಸಂಭ್ರಮಿಸುವಂತೆ ಈ ಸಿನಿಮಾವನ್ನು ಕಟ್ಟಿ ಕೊಡಲಾಗೆಯಂತೆ. ಬೆಂಗಳೂರು, ಉಡುಪಿ, ಸಕಲೇಶಪುರ, ಕಳಸ ಮುಂತಾದೆಡೆಗಳ ಸುಂದರ ಲೋಕೇಷನ್ನುಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಮಹೇಂದ್ ನಾಯಕನಾಗಿ ನಟಿಸಿದ್ದರೆ, ಸುಶ್ಮಿತಾ ನಾಯಕ್ ಹಾಗೂ ವಿಯಾನ್ಶಿ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಗೌರವ್ ಶೆಟ್ಟಿ, ಶೋಭರಾಜ್, ರವಿಶಂಕರ್ ಗೌಡ, ತುಕಾಲಿ ಸಂತೋಷ್, ಮೈತ್ರಿ ಜಗ್ಗಿ ಮುಂತಾದವರ ತಾರಾಗಣವಿದೆ. ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಮೂರು ಹಾಡುಗಳನ್ನು ಬರೆದಿದ್ದಾರೆ. ವಿಯಾನ್ ಬಿ.ಜೆ ಭರತ್, ವಿಯಾನ್ ಎಸ್.ಎ ಸಂಗೀತ ನಿರ್ದೇಶನ, ಎಸ್.ಬಿ ಮಮಜುನಾಥ ನಾಯಕ್ ಛಾಯಾಗ್ರಹಣ, ಮಧು ತುಂಬುಕೆರೆ ಸಂಕಲನ, ನರಸಿಂಹ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ವಿನಯ್ ಎನ್ ಕಾರ್ಯಕಾರಿ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ.
keywords: sukhibhava movie, rajesh naidu, sandalwood, kfi

