ವೃತ್ತಿ ಬದುಕಿನಲ್ಲಿ ಕೊಂಚ ಎಡವಿದರೂ ಕೂಡಾ ಸ್ಟಾರ್ ನಟರು ಸರಣಿ ಸೋಲುಗಳಿಗೆ ತಲೆಕೊಡಬೇಕಾಗುತ್ತದೆ. ಎಂತೆಂಥಾ ಸೂಪರ್ ಸ್ಟಾರ್ಗಳೂ ಕೂಡಾ ಇಂಥಾ ತಿರುವೊಂದರ ಅಂಚಿಗೆ ಬಂದು ನಿಂತು ಕಂಗಾಲೆದ್ದಿದ್ದಾರೆ. ಕೆಲ ಮಂದಿ ಸಾವರಿಸಿಕೊಂಡು ಮೇಲೆದ್ದು ನಿಂತರೆ; ಮತ್ತೆ ಕೆಲವರು ಕಳೆದೇ ಹೋದದ್ದೂ ಇದೆ. ಸದ್ಯದ ವಾತಾವರಣವನ್ನು ಆಧರಿಸಿ ಹೇಳೋದಾದರೆ ತಮಿಳು ನಟ ಸಿಂಗಂ ಸೂರ್ಯ ಕೂಡಾ ಅಂಥಾದ್ದೊಂದು ಸವಾಲಿಗೆ ಮುಖಾಮುಖಿಯಾಗಿದ್ದಾರೆ. ಒಂದು ಕಾಲದಲ್ಲಿ ಸೂರ್ಯನ ಕಾಲ್ಶೀಟ್ಗಾಗಿ ನಿರ್ದೇಶಕರ ಹಿಂಡು ಕಾದು ಕೂರುತ್ತಿತ್ತು. ಆದರೀಗ ಕಥೆ ಹೇಳಿದ ನಿರ್ದೇಶಕರೇ ಸುಳಿವು ಕೊಡದಂತೆ ಕಳಚಿಕೊಳ್ಳುತ್ತಿದ್ದಾರೆ. ಹೀಗೆ ಆಘಾತಕ್ಕೀಡಾಗಿರುವ ಸೂರ್ಯನಿಗೀಗ ರಾಮ್ ಗೋಪಾಲ್ ವರ್ಮಾ ಶಿಷ್ಯ ಪುರಿ ಜಗನ್ನಾಥನೇ ಗತಿ ಎಂಬಂತಾಗಿದೆ!
ಸೂರ್ಯನ ವೃತ್ತಿ ಬದುಕು ಈಗೊಂದಷ್ಟು ವರ್ಷಗಳಿಂದ ಅನಿಶ್ಚಿತವಾಗಿ ಹೊಯ್ದಾಡಲಾರಂಭಿಸಿದೆ. ಈ ನಡುವೆ ಭರವಸೆ ಮೂಡಿಸೋ ಒಂದಷ್ಟು ಪ್ರಾಜೆಕ್ಟುಗಳು ಸೂರ್ಯನ ಮುಂದಿದ್ದವು. ಪ್ಯಾನಿಂಡಿಯಾ ಮಟ್ಟದಲ್ಲಿ ಗಮನ ಸೆಳೆದಿರುವ ಲೋಕೇಶ್ ಕನಗರಾಜ್ ವರ್ಷದ ಹಿಂದೆಯೇ ಸೂರ್ಯನಿಗೊಂದು ಕಥೆ ಹೇಳಿದ್ದ. ಸೂರ್ಯ ಮತ್ತು ಲೋಕಿ ಕಾಂಬಿನೇಷನ್ನಿನಲ್ಲಿ ಸಿನಿಮಾ ತಯಾರಿ ನಡೆಯುತ್ತಿದೆ ಅಂತೆಲ್ಲ ಸುದ್ದಿ ಹಬ್ಬಿಕೊಂಡಿತ್ತು. ಆದರೆ, ಲೋಕೇಶ್ ಕನಗರಾಜ್ ಏಕಾಏಕಿ ಉಲ್ಟಾ ಹೊಡೆದವನೇ, ಸೂರ್ಯನಿಗೆ ಹೇಳಿದ ಕಥೆಯನ್ನು ಆಮೀರ್ ಖಾನ್ಗೆ ಹೇಳಿ ಒಪ್ಪಿಗೆ ಪಡೆದುಕೊಂಡಿದ್ದಾನೆ. ಈಗ ಆ ಸಿನಿಮಾ ಟೇಕಾಫ್ ಆಗಿದೆ. ಇದಾದ ನಂತರ ವೆಟ್ರಿಮಾರನ್ ವಾಡಿವಾಸನ್ ಎಂಬ ಸಿನಿಮಾ ಕಥೆಯನ್ನ ಸೂರ್ಯನ ಮುಂದೆ ಹರವಿಟ್ಟಿದ್ದರು. ಆದರೀಗ ಆತ ಬೇರೊಂದು ಸಿನಿಮಾಕ್ಕೆ ಚಾಲನೆ ನೀಡಿದ್ದಾರೆ. ಅಲ್ಲಿಗೆ ವಾಡಿವಾಸನ್ ಕಥೆ ಮುಕ್ತಾಯವಾದಂತಾಗಿದೆ!
ಹೀಗೆ ಒಂದರ ಹಿಂದೊಂದರಂತೆ ಆಘಾತ ಎದುರಿಸುತ್ತಿರೋ ಸೂರ್ಯನಿಗೆ ನಿರ್ದೇಶಕ ಪೂರಿ ಜಗನ್ನಾಥ್ ವರವಾಗಿ ಕಂಡಿದ್ದಾನೆ. ಪೂರಿ ಒಂದು ಕಥೆ ರೆಡಿ ಮಾಡಿಟ್ಟುಕೊಂಡು, ಅದರಲ್ಲಿ ಆಮೀರ್ ಖಾನ್ ನಟಿಸಬೇಕೆಂಬ ಇಂಗಿತ ಹೊಂದಿದ್ದನಂತೆ. ಕಡೆಗೂ ಹೇಗೋ ಕನೆಕ್ಷನ್ನು ಸಿಕ್ಕಿ ಈ ಕಥೆಯನ್ನು ಸೂರ್ಯನಿಗೆ ಹೇಳಿದ್ದರು. ಆರಂಭದಲ್ಲಿ ಅಷ್ಟೊಂದು ಆಸಕ್ತಿ ವಹಿಸದೇ ಹೋದರೂ ಕೂಡಾ, ಸೂರ್ಯನಿಗೀಗ ಅದೇ ಅನಿವಾರ್ಯವಾದಂತಿದೆ. ಆದರೆ, ಅದೂ ಕೂಡಾ ಸದ್ಯಕ್ಕೆ ಟೇಕಾಫ್ ಆಗುವಂತಿಲ್ಲ. ಯಾಕೆಂದರೆ, ಪುರಿ ಈಗ ಸ್ಲಂಡಾಗ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾನೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಭಿಕ್ಷಿಕನಾಗಿ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣ ಸಮಾಪ್ತಿಗೊಂಡ ನಂತರ ಸೂರ್ಯನೊಂದಿಗಿನ ಸಿನಿಮಾ ಚಾಲೂ ಆಗುವ ಸಾಧ್ಯತೆಗಳಿದ್ದಾವೆ!
keywords: suriya, lokesh kanagaraj, vetrimaran, puri jagannath

