ಗಟ್ಟಿ ಕಥೆಯೊಂದಿಗೆ ತಟಿಕೆ ಹಾಕಿಕೊಂಡಿರುವ ಹಾಸ್ಯ ಪ್ರಧಾನ ಚಿತ್ರಗಳ ಬಗ್ಗೆ ಸಿನಿಮಾಸಕ್ತರಲ್ಲೊಂದು ಮೋಹ ಇದ್ದೇ ಇರುತ್ತೆ. ಎಲ್ಲ ಅಭಿರುಚಿಯ ಪ್ರೇಕ್ಷಕರೂ ಕೂಡಾ ಇಂಥಾ ಪುಷ್ಕಳ ಮನೋರಂಜನೆಗಾಗಿ ಕಾದಿರುತ್ತಾರೆ. ಅಂಥಾ ಪ್ರೇಕ್ಷಕರನ್ನೆಲ್ಲ ಖುಷಿಗೊಳಿಸಬಲ್ಲ `ಮ್ಯಾರೇಜ್ ಪಾರ್ಟಿ’ ಎಂಬ ಚಿತ್ರವೀಗ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡಿದೆ. ವರ್ಷದ ಹಿಂದೆ ಬಿಗ್ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಿರ್ದೇಶನದ ಅಧಿಪತ್ರ ಅಂತೊಂದು ಸಿನಿಮಾ ತೆರೆಗಂಡಿತ್ತು. ಆ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೆಚ್ಚುಗೆ ಗಳಿಸಿಕೊಂಡಿದ್ದ ಚಯನ್ ಶೆಟ್ಟಿ ಮ್ಯಾರೇಜ್ ಪಾರ್ಟಿಯ ಮೂಲಕ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅಂದುಕೊಂಡಂತೆಯೇ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ.
ಕಡಲ ತಡಿಯ ಊರೊಂದರಲ್ಲಿ ಘಟಿಸುವ ಗಟ್ಟಿ ಕಥೆಯನ್ನೊಳಗೊಂಡಿರುವ ಚಿತ್ರ ಮ್ಯಾರೇಜ್ ಪಾರ್ಟಿ. ಈ ಹಿಂದೆ ಅಧಿಪತ್ರ ಮೂಲಕ ವಿಶಿಷ್ಟ ಕಥೆಯೊಂದನ್ನು ಮುಟ್ಟಿದ್ದ ನಿರ್ದೇಶಕ ಚಯನ್ ಶೆಟ್ಟಿ, ಮ್ಯಾರೇಜ್ ಪಾರ್ಟಿ ಮೂಲಕ ಮನೋರಂಜನಾತ್ಮಕ ಕಥನವೊಂದನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದ್ದಾರೆ. ಕುಂದಾಪುರದ ಸುತ್ತಮುತ್ತಲೇ ಇಡೀ ಕಥೆ ನಡೆಯೋದರಿಂದ, ಅಲ್ಲಿಯೇ ಇಪ್ಪತ್ತು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಈ ಮೂಲಕ ಮೊದಲ ಹಂತ ಮುಗಿಸಿಕೊಂಡಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಚಿತ್ರೀಕರಣವೆಲ್ಲ ಮುಕ್ತಾಯಗೊಂಡ ಬಳಿಕ ಮ್ಯಾರೇಜ್ ಪಾರ್ಟಿಯ ಮತ್ತೊಂದಷ್ಟು ಮಜಲುಗಳು ಪ್ರೇಕ್ಷಕರನ್ನು ತಾಕಲಿವೆ.
ವಿನೀತ್ ಕುಮಾರ್ ಮ್ಯಾರೇಜ್ ಪಾರ್ಟಿಯ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ತುಳು ಚಿತ್ರರಂಗದಲ್ಲಿ ವಿನೀತ್ ಕುಮಾರ್ ಈಗಾಗಲೇ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಲವಾರು ಸಿನಿಮಾ, ಒಂದಷ್ಟು ಬಗೆಯ ಪಾತ್ರಗಳ ಮೂಲಕ ತುಳುನಾಡ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದಾರೆ. ಕನ್ನಡ ಚಿತ್ರರಂದಕ್ಕೆ ವಿನೀತ್ ಎಂಟ್ರಿಗೆ ಚಯನ್ ಶೆಟ್ಟಿ ಮ್ಯಾರೇಜ್ ಪಾರ್ಟಿ ಮೂಲಕ ವೇದಿಕೆ ಸೃಷ್ಟಿಸಿದ್ದಾರೆ. ಕಡಲ ತಡಿಯ ಕಥೆ ಹೊಂದಿರೋ ಸಿನಿಮಾ ಎಂದಾಕ್ಷಣ ಭೂತಾರಾಧನೆಯಂಥಾ ಚಿತ್ರಣ ಕಣ್ಮುಂದೆ ಬರುವುದು ಸಹಜ. ಆದರೆ, ಕುಂದಾಪುರ ಸೀಮೆಯ ಕಡಲ ಕಿನಾರೆಯುದ್ದಕ್ಕೂ ಬೆರಗಾಗಿಸುವಂಥಾ ಜೀವನ ಕ್ರಮಗಳಿವೆ. ಚೇತೋಹಾರಿ ಸಾಮಾಜಿಕ ಬದುಕೊಂದು ಕಿನಾರೆಯುದ್ದಕ್ಕೂ ಹಬ್ಬಿಕೊಂಡಿವೆ. ಅಂಥಾದ್ದೊಂದು ಮಜವಾದ ಕಥೆಯೊಂದಿಗೆ ಚಯನ್ ಶೆಟ್ಟಿ ಮ್ಯಾರೇಜ್ ಪಾರ್ಟಿಯನ್ನು ರೂಪಿಸಿದ್ದಾರಂತೆ
ವರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್. ವಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂತೋಷ್ ಅವರ ಪಾಲಿಗಿದು ನಿರ್ಮಾಪಕರಾಗಿ ಮೊದಲ ಹೆಜ್ಜೆ. ಇನ್ನುಳಿದಂತೆ, ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್ ಮುಂತಾದವರ ತಾರಾಗಣವಿರುವ ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಮೂಡಿ ಬರಲಿದೆ.
keywords: marriage party kiannada movie, chayyan shetty, naveen padil, sandalwood

