ಕೆಜಿಎಫ್ ನಂತರದಲ್ಲಿ ಎಲ್ಲರ ಚಿತ್ತವೂ ಪ್ಯಾನಿಂಡಿಯಾ ಮಟ್ಟದ ಸಿನಿಮಾಗಳತ್ತ ವಾಲಿಕೊಂಡಿದೆ. ಕೆಜಿಎಫ್ನಂಥಾ ಸರಣಿ ಚಿತ್ರಗಳು ಅಪ್ಪಳಿಸಿದ ನಂತರ ಒಂದಿಡೀ ಕನ್ನಡ ಚಿತ್ರರಂಗವೇ ಕಪ್ಪು ಕಪ್ಪು ಛಾಯೆ ಮತ್ತು ಅದರಿಂದ ರಾಚಿಕೊಂಡಿದ ಭ್ರಮೆಯ ಧೂಳಿನ ನಡುವೆ ಉಸಿರುಗಟ್ಟಿದ ಸ್ಥಿತಿಗೀಡಾಗಿತ್ತು. ಇದರ ನಡುವೆ ನಿಜಕ್ಕೂ ಬರಖತ್ತಾಗಬಹುದಾಗಿದ್ದ ಒಂದಷ್ಟು ಸಿನಿಮಾಗಳು ನಾನಾ ಸಂಕಷ್ಟಗಳನ್ನು ಎದುರಿಸಬೇಕಾದದ್ದೀಗ ಇತಿಹಾಸ. ಇಂಥಾದ್ದರ ನಡುವೆ ಭಿನ್ನ ಧಾಟಿಯ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯಬಲ್ಲ ಪ್ರಯತ್ನಗಳು ಮಾತ್ರವೇ ಚಿತ್ರರಂಗದ ಹರಿವನ್ನು ಯಥಾ ಸ್ಥಿತಿಯಲ್ಲಿಡಲು ಸಾಧ್ಯ. ಈ ಹಾದಿಯಲ್ಲಿ ಭರವಸೆ ಹುಟ್ಟು ಹಾಕಿರುವ ಸಿನಿಮಾ ಲವ್ಮಾಕ್ಟೇಲ್೩. ಡಾರ್ಲಿಂಗ್ ಕೃಷ್ಣ ತಮ್ಮ ನಿರ್ದೇಶನದ ಕಸುವಿನಿಂದಲೇ ಈ ಸರಣಿಯ ಎರಡು ಚಿತ್ರಗಳನ್ನು ಗೆಲ್ಲಿಸಿಕೊಂಡಿದ್ದರು. ಇದೀಗ ಲವ್ ಮಾಕ್ಟೇಲ್೩ ಚಿತ್ರದ ಟ್ರೈಲರ್ಗೆ ಸಿಗುತ್ತಿರೋ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಈ ಬಾರಿಯೂ ಸಮ್ಮೋಹಕ ಗೆಲುವೊಂದು ಪ್ರಾಪ್ತಿಯಾಗಬಲ್ಲ ಸೂಚನೆಗಳು ಡಟ್ಟೈಸಿವೆ!
ಅಷ್ಟಕ್ಕೂ ಒಂದು ಸಿನಿಮಾ ಗೆದ್ದ ನಂತರ ಅದರ ಸೀಕ್ವೆಲ್ ಮೂಲಕವೂ ಗೆಲುವು ಪಡೆಯೋದು ತ್ರಾಸದಾಯಕ ವಿಚಾರ. ಅದರಲ್ಲಿ ನಿರ್ದೇಶಕರಾಗಿ ಗೆಲುವು ಕಂಡಿರುವ ಡಾರ್ಲಿಂಗ್ ಕೃಷ್ಣ ಪಾಲಿಗೆ ಸಹಜವಾಗಿಯೇ ಮೂರನೇ ಆವೃತ್ತಿ ಈ ಹಿಂದಿಗಿಂತಲೂ ಸವಾಲಿನದ್ದಾಗಿತ್ತು. ಯಾಕೆಂದರೆ, ಇಂಥಾ ಸರಣಿ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಡೋದು ಸುಲಭದ ಮಾತಲ್ಲ. ಆದರೆ, ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಲವ್ಮಾಕ್ಟೇಲ್ಗೆ ಫಿದಾ ಆಗಿದ್ದವರೆಲ್ಲ ಲವ್ ಮಾಕ್ಟೇಲ್೩ ಟ್ರೈಲರ್ ಕಂಡು ಅಕ್ಷರಶಃ ಖುಷಿಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಇದೇ ಖುಷಿ ಪ್ರತಿಫಲಿಸುತ್ತಿದೆ. ಇದು ಬಿಡುಗಡೆಯ ಕಡೇಯ ಕ್ಷಣಗಳಲ್ಲಿ ಒಂದಿಡೀ ಚಿತ್ರತಂಡಕ್ಕೆ ಮತ್ತಷ್ಟು ಭರವಸೆ ತುಂಬಿದೆ.
ಡಾರ್ಲಿಂಗ್ ಕೃಷ್ಣ ಆರಂಭದಿಂದ್ ಇಲ್ಲಿಯವರೆಗೂ ಸಿನಿಮಾದ ಬಗ್ಗೆ ಹೆಚ್ಚೇನೂ ಗುಟ್ಟು ಬಿಟ್ಟುಕೊಡದೆ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ನಿರ್ದೇಶನ ಸೇರಿದಂತೆ ಎಲ್ಲದರಲ್ಲಿಯೂ ಹೊಸತನವಿದೆ ಎಂಬ ವಿಚಾರವನ್ನು ಒತ್ತಿ ಹೇಳಿದ್ದರು. ಈ ಹಿಂದಿನ ಎರಡು ಭಾಗಗಳಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಭಾವುಕತೆಯನ್ನು ಹಾಗೆಯೇ ಕಾಪಿಟ್ಟುಕೊಳ್ಳುವ ಮೂಲಕ, ಮತ್ತೊಂದು ಮನಸಿಗೆ ತಾಕುವ ಕಥೆಯೊಂದಿಗೆ ಈ ಚಿತ್ರವ್ನ್ನು ರೂಪಿಸಿದಂತಿದೆ. ಟ್ರೈಲರ್ ನೋಡಿದವರಿಗೆಲ್ಲ ಈ ವಿಚಾರ ನಿಚ್ಚಳವಾಗಿಯೇ ಅರಿವಾಗಿದೆ. ಇಲ್ಲಿ ತಂದೆ ಮಗಳ ಬಾಂಧವ್ಯ, ಗಾಢ ಪ್ರೇಮ, ವಿರಹ ಮುಂತಾದ ಪ್ರತಿಯೊಬ್ಬರ ಮನಸಲ್ಲೂ ಅಚ್ಚಾದ, ಸಲೀಸಾಗಿ ಎಲ್ಲರನ್ನೂ ಆವರಿಸಿಕೊಳ್ಳಬಲ್ಲ ಅಂಶಗಳು ಟ್ರೈಲರ್ನಲ್ಲಿ ಕಾಣಿಸಿವೆ.
ಇದು ಕಡೆಯ ಅಧ್ಯಾಯ ಎಂಬ ಸುಳಿವನ್ನೂ ಕೂಡಾ ಡಾರ್ಲಿಂಗ್ ಕೃಷ್ಣ ಬಿಟ್ಟು ಕೊಟ್ಟಿದ್ದಾರೆ. ತಮ್ಮನ್ನು ಆವರಿಸಿಕೊಂಡಿದ್ದ ಲವ್ ಮಾಕ್ಟೇಲ್ ಸರಣಿಯ ಕೊನೇ ಅಧ್ಯಾಯವೆಂಬೋ ಪ್ರೇಕ್ಷಕರ ಸೆಂಟಿಮೆಂಟ್ ಕೂಡಾ ಈ ಚಿತ್ರಕ್ಕೆ ಪ್ಲಸ್ ಆಗೋ ಸಾಧ್ಯತೆಗಳಿದ್ದಾವೆ. ಹಾಗಂತ ಈ ಹಿಒಂದಿನ ಸರಣಿಯ ಸೀಮಿತ ಪ್ರೇಕ್ಷಕರನ್ನು ಮಾತ್ರವೇ ಲವ್ ಮಾಕ್ಟೇಲ್೩ ಸೆಳೆದಿದೆ ಅಂದುಕೊಳ್ಳುವಂತಿಲ್ಲ. ಎಲ್ಲ ವರ್ಗದ ಪ್ರೇಕ್ಷಕರೂ ಟ್ರೈಲರ್ ಕಂಡು ಖುಷಿಗೊಂಡಿದ್ದಾರೆ. ಒಂದೊಳ್ಳೆ ಸಮಯದಲ್ಲಿ ಬಿಡುಗಡೆಗೆ ಅವಕಾಶ ಪಡೆದುಕೊಂಡಿರೋ ಲವ್ ಮಾಕ್ಟೇಲ್೩ಗೆ ಎಲ್ಲ ದಿಕ್ಕಿನಿಂದಲೂ ಸಕಾರಾತ್ಮಕ ಹಾದಿ ತೆರೆದುಕೊಂಡಿದೆ. ಕ್ರಿಸ್ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
keywords: love mocktail3 movie, darling krishna, milana nagaraj, sandalwood

