ಒಂದು ಯಶಸ್ವೀ ಚಿತ್ರ ಅದರ ಭಾಗವಾದ ಹಲವು ಮಂದಿಯ ಬದುಕಿನ ದಿಕ್ಕು ದೆಸೆಗಳನ್ನೇ ಬದಲಿಸಿ ಬಿಡುತ್ತೆ. ಆದರೆ, ಆ ನಂತರ ಅದೆಷ್ಟು ಎಚ್ಚರವಾಗಿ ಮುಂದುವರೆಯುತ್ತಾರೆಂಬುದರ ಮೇಲೆ ಸೋಲು ಗೆಲುವುಗಳ ಲೆಕ್ಕಾಚಾರ ಅಡಗಿರುತ್ತೆ. ಈ ಹಾದಿಯಲ್ಲಿ ಅನೇಕರ ಮುಂದೆ ತೆರೆದುಕೊಳ್ಳೋದು ಏರಿಳಿತಗಳ ಹಾದಿ ಮಾತ್ರ. ಸೂರಿ ನಿರ್ದೇಶನದ ದುನಿಯಾ ಚಿತ್ರದ ಮೂಲಕ ವಿಜಯ್ ಹೀರೋ ಆಗಿ ನೆಲೆ ಕಂಡುಕೊಂಡರೆ, ಲೂಸ್ ಮಾದ ಅನ್ನೋ ವಿಲಕ್ಷಣ ಪಾತ್ರ ಮಾಡಿದ್ದ ಅಳೀಮಯ್ಯ ಯೋಗಿಯ ಅದೃಷ್ಟವೂ ಖುಲಾಯಿಸಿತ್ತು. ಅದಾದ ನಂತರ ಯಾವ ಪಥದಲ್ಲಿ ಮುಂದುವರೆಯಬೇಕೆಂಬ ಗೊಂದಲದಲ್ಲಿದ್ದಂತೆ ಕಾಣಿಸಿದ್ದ ಯೋಗಿ ಆರಕ್ಕೇರದೆ, ಮೂರಕ್ಕಿಳಿಯದೆ ಐವತ್ತು ಸಿನಿಮಾಗಳ ಸಂಭ್ರಮದತ್ತ ಮುಖ ಮಾಡಿದ್ದಾರೆ. ಯೋಗಿಯ ಐವತ್ತನೇ ಚಿತ್ರವಾಗಿ ಕಿಂಗ್ ಇದೀಗ ಸುದ್ದಿ ಕೇಂದ್ರದಲ್ಲಿದೆ!
ಒಮ್ಮೊಮ್ಮೆ ಮಹತ್ತರವಾದದ್ದು ಘಟಿಸಲು ವರ್ಷಗಟ್ಟಲೆ ಕಾಯಬೇಕಾಗುತ್ತೆ. ಅಂಥಾದ್ದೊಂದು ತಪನೆ ಹೊಂದಿದ್ದ ಲೂಸ್ ಮಾದ ಯೋಗಿಗೆ ಐವತ್ತನೇ ಚಿತ್ರದ ಮೂಲಕ ಅಂಥಾದ್ದೊಂದು ಅಮೂರ್ಥ ಘಳಿಗೆ ಹತ್ತಿರವಾಗಿದೆಯಾ? ಸದ್ಯ ಕಿಂಗ್ ಸುತ್ತಾ ಹಬ್ಬಿಕೊಂಡಿರುವ ಪಾಸಿಟಿವ್ ಪ್ರಭೆ ಹೌದೆಂಬಂಥಾ ಉತ್ತರವನ್ನೇ ಧ್ವನಿಸುತ್ತಿದೆ. ಜಾಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟೀಸರ್ ಕಂಡವರೆಲ್ಲ ಅಕ್ಷರಶಃ ಥ್ರಿಲ್ ಆಗಿದ್ದಾರೆ. ಈ ಕಾಲಮಾನಕ್ಕೆ ತಕ್ಕಂಥಾ, ವಿಭಿನ್ನ ಕಥಾನಕವನ್ನೊಳಗೊಂಡಿರುವ ಲಕ್ಷಣದ ಈ ಟೀಸರ್ ಅದ್ದೂರಿ ಮೇಕಿಂಗ್ನ ಸುಳಿವನ್ನೂ ಬಿಟ್ಟು ಕೊಟ್ಟಿದೆ. ಯೋಗಿಯ ಗೆಟಪ್ಪು ಕೂಡಾ ಸಿನಿಮಾಸಕ್ತರನ್ನು ಬೆರಗಾಗಿಸಿದೆ. ಒಟ್ಟಾರೆಯಾಗಿ ಐವತ್ತನೇ ಚಿತ್ರದ ಮೂಲಕ ಯೋಗಿಯ ವೃತ್ತಿಬದುಕಿಗೆ ಮತ್ತಷ್ಟು ಓಘ ಸಿಗುವ ಲಕ್ಷಣಗಳೇ ದಟ್ಟವಾಗಿವೆ.
ಸಾಮಾನ್ಯವಾಗಿ ಯಾವುದೇ ನಟ ಒಂದು ಪಾತ್ರದ ಮೂಲಕ ಸದ್ದು ಮಾಡಿದರೆ, ಅಂಥಾ ಛಾಯೆಯ ಪಾತ್ರಗಳನ್ನೇ ಸೃಷ್ಟಿಸುತ್ತಾ, ಪ್ರೇಕ್ಷಕರಲ್ಲಿ ರೇಜಿಗೆ ಹುಟ್ಟಿಸುವ ಪ್ರಯತ್ನಗಳು ನಡೆಯುತ್ತವೆ. ಒಂದು ಹಂತದಲ್ಲಿ ಯೋಗಿ ಕೂಡಾ ಅಂಥಾದ್ದೊಂದು ಏಕತಾನತೆಯನ್ನು ಅನುಭವಿಸುವಂತಾಗಿತ್ತು. ಈ ನಡುವೆ ಯೋಗಿ ಅಭಿನಯದ ಸಾಲು ಸಾಲು ಸಿನಿಮಾಗಳು ತೆರೆಗಂಡರೂ ಕೂಡಾ ಗೆಲುವು ಸಿಕ್ಕಿದ್ದು ಕೆಲವೇ ಕೆಲವು ಚಿತ್ರಗಳಿಗೆ ಮಾತ್ರ. ಒಮ್ಮೊಮ್ಮೆ ತನ್ನ ಇಮೇಜಿನಾಚೆಯ ಪಾತ್ರಗಳಲ್ಲಿ ಯೋಗಿ ಮಿಂಚಿದರೆ, ಮತ್ತೆ ಕೆಲ ಘಟ್ಟಗಳಲ್ಲಿ ಮತ್ತದೇ ಕಲಸುಮೇಲೋಗರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇದೆಲ್ಲದರ ನಡುವೆ ಒಂದಷ್ಟು ಕಾಲ ಅಜ್ಞಾತವಾಸಿಯಾಗಿದ್ದ ಯೋಗಿ, ಇತ್ತೀಚಿನ ದಿನಗಳಲ್ಲಿ ಪ್ರೌಢ ವ್ಯಕ್ತಿತ್ವದೊಂದಿಗೆ ಬೆರಗು ಮೂಡಿಸುತ್ತಿದ್ದಾರೆ. ಇದರ ನಡುವೆಯೇ ಒಂದಷ್ಟು ಪ್ರಯತ್ನಗಳಲ್ಲಿ ಭಾಗಿಯಾಗಿದ್ದ ಯೋಗಿ ಪಾಲಿಗೆ ಕಿಂಗ್ ವರವಾಗಿ ಸಿಕ್ಕಂತಿದೆ. ಈ ಸಿನಿಮಾ ನಿರೀಕ್ಷೆಗೆ ತಕ್ಕಂತೆ ರೂಪುಗೊಂಡರೆ, ಯೋಗಿಯ ವೃತ್ತಿ ಬದುಕು ಮತ್ತೊಂದು ಎತ್ತರಕ್ಕೆ ತಲುಪೋದರಲ್ಲಿ ಯಾವ ಅಚ್ಚರಿಯೂ ಇಲ್ಲ!
keywords: loose mada yogi, king, sandalwood, loose mada

