ಈ ಸಿನಿಮಾ ಮಂದಿಗೆ ಭೂಗತ ಜಗತ್ತಿನ ಮೇಲಿರುವ ಕುತೂಹಲ ಯಾವತ್ತಿಗೂ ಕಡಿಮೆಯಾಗುವುದಿಲ್ಲ. ಭೂಗತದ ಹುದುಲಲ್ಲಿ ಸಿಕ್ಕಿಕೊಂಡಿರುವ ಸಣ್ಣ ಸಣ್ಣ ಎಳೆಗಳನ್ನೂ ಕೂಡಾ ದೃಷ್ಯವಾಗಿಸಿ ಆಗಿದೆ. ಅದರಲ್ಲಿ ಕೆಲ ಚಿತ್ರಗಳು ಗೆದ್ದರೆ, ಮತ್ತೆ ಕೆಲ ಸಿನಿಮಾಗಳು ಬರೀ ರಕ್ತ ಮೆತ್ತಿಕೊಂಡು ಹೇಳ ಹೆಸರಿಲ್ಲದಂತೆ ಮೂಲೆ ಸೇರಿಕೊಂಡಿದ್ದಿದೆ. ಇದೆಲ್ಲದರ ನಡುವೆ ಚಿತ್ರರಂಗಕ್ಕೆ ಮತ್ತೆಮತ್ತೆ ನೆತ್ತರ ಮೋಹ ಕಾಡುತ್ತಲೇ ಇರುತ್ತೆ. ಅದರ ಭಾಗವಾಗಿಯೇ ಕವಳ ಅಂತೊಂದು ಚಿತ್ರ ಆರಂಭಗೊಂಡಿದೆ. ಶ್ರೀ ಜೈ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರದ ಬಗ್ಗೆ ಸಣ್ಣಗೆ ಚರ್ಚೆಗಳು ಶುರುವಾಗಿವೆ!
ಕವಳ ಅಂದಾಕ್ಷಣವೇ ಉತ್ತರಕನ್ನಡ ಸೀಮೆಯ ಮಂದಿಗೆ ಎಲಡಿಕೆಯ ಘಮ ಮನಸಿಗೆ ರಾಚಿಕೊಳ್ಳುತ್ತೆ. ಆದರೆ, ಬೆಂಗಳೂರು ಭೂಗತದ ಅರಿವಿರುವವರಿಗೆ ನೆತ್ತರ ಕಮಟು ತಂತಾನೆ ಅಡರಿಕೊಳ್ಳುತ್ತೆ. ಯಾಕೆಂದರೆ, ಕವಳ ಎಂಬುದು ಬೆಂಗಳೂರನ್ನು ಅದುರಿಸಿ ಹಾಕಿದ್ದ ನಟೋರಿಯಸ್ ರೌಡಿಯೋರ್ವನ ಬಿರುದು. ವಿಜಯ ಕುಮಾರ್ ಅಲಿಯಾಸ್ ಕವಳ ತೊಂಬತ್ತರ ದಶಕದಲ್ಲಿ ಬೆಂಗಳೂರು ಡಾನ್ ಅನ್ನಿಸಿಕೊಂಡಿದ್ದ ಡೆಡ್ಲಿ ಸೋಮನ ಸಿಂಡಿಕೇಟಿನಲ್ಲಿ ಗುರುತಿಸಿಕೊಂಡಿದ್ದ ನಟೋರಿಯಸ್ ರೌಡಿ. ಡೆಡ್ಲಿ ಸೋಮ ಎನ್ಕೌಂಟರಿನಲ್ಲಿ ಹತನಾಗಿದ್ದ ನಂತರದಲ್ಲಿ ಆತನ ಪಟಾಲಮ್ಮು ಚದುರಿ ಹೋಗಿತ್ತು. ಕೆಲವರು ವಿರೋಧಿ ಪಾಳೆಯಕ್ಕೆ ಅಂಜಿ ಸೈಲೆಂಟಾದರೆ, ಮತ್ತೆ ಕೆಲವರು ತಮ್ಮದೇ ತಂಡ ಕಟ್ಟಿಕೊಂಡು ಸೆಣೆಸಾಟಕ್ಕಿಳಿದಿದ್ದರು. ಅಂಥವರ ಸಾಲಿನಲ್ಲಿ ಮೊದಲಿಗನಾಗಿದ್ದವನು ವಿಜಯ ಕುಮಾರ್ ಅಲಿಯಾಸ್ ಕವಳ!
ಇಂಥಾ ಕವಳ ಬೆಂಗಳೂರು ಭೂಗತ ಲೋಕವನ್ನು ಒಂದು ಹಂತದಲ್ಲಿ ಆಳಿ ಬಿಟ್ಟಿದ್ದ. ಡಾನ್ ಆಗಿಯೂ ಮೆರೆದಿದ್ದ. ಇಂಥವನ ಬದುಕನ್ನು ಯಾವ ಕೋನದಿಂದ ದಿಟ್ಟಿಸಿದರೂ ಕೊಲೆ, ರಕ್ತಪಾತದ ಹೊರತಾಗಿ ಮತ್ತೇನೂ ಕಾಣಿಸೋದಿಲ್ಲ. ಕಡೆಗೆ ಈತನ ಸಾವು ಕೂಡಾ ಅತ್ಯಂತ ಬರ್ಭರವಾಗಿತ್ತು. ಇಂಥವನ ಕಥೆಯನ್ನು ಶ್ರೀಜೈ ಹೇಗೆ ಕಟ್ಟಿ ಕೊಡುತ್ತಾರೋ ಗೊತ್ತಿಲ್ಲ. ಆದರೆ, ಈ ಮುಹೂರ್ತ ಸಮಾರಂಭದಲ್ಲಿ ಸದರಿ ಸಿನಿಮಾಶದಲ್ಲಿ ನೆತ್ತರು ಹರಿಯುತ್ತದೆ ಎಂಬರ್ಥದಲ್ಲಿ ಶ್ರೀಜೈ ಮಾತಾಡಿದ್ದಾರೆ. ಅಲ್ಲಿಗೆ ಮತ್ತೊಂದು ಮಚ್ಚು ಲಾಂಗುಗಳ ತಥಾಕಥಿತ ಸಿನಿಮಾವೊಂದು ಅಣಿಗೊಳ್ಳೋ ಸೂಚನೆಗಳು ಢಾಳಾಗಿವೆ. ಶ್ರೀ ಸಿದ್ಧಸೂತ್ರಕ್ಕೆ ಕಟ್ಟುಬಿದ್ದು ಈ ಚಿತ್ರವನ್ನು ರೂಪಿಸುತ್ತಾರಾ ಅಥವಾ ಹೊಸಾ ಹಾದಿಯಲ್ಲಿ ಹೆಜ್ಜೆಯಿಡುತ್ತಾರಾ ಎಂಬ ಕುತೂಹಲವಷ್ಟೇ ಉಳಿದುಕೊಂಡಿದೆ.
ಅಷ್ಟಕ್ಕೂ ಕವಳನದ್ದು ಯಾವ ರೀತಿಯಿಂದಲೂ ಮಾದರಿಯಾದ ಬದುಕಲ್ಲ. ಡೆಡ್ಲಿ ಸೋಮನ ಖಾಸಾ ಪಡೆಯಲ್ಲಿದ್ದ ಕವಳ ಆ ಕಾಲದಲ್ಲಿಯೇ ನೆತ್ತರ ರುಚಿ ಕಂಡಿದ್ದ. ಹರಿದ ನೆತ್ತರಿಗಂಟಿಕೊಂಡಂತೆ ಕುದುರಿಕೊಳ್ಳುವ ಹಡಬೆ ಕಾಸಿನ ಹಬೆಗೆ ಮರುಳಾಗಿದ್ದ. ಯಾವಾಗ ವಿರೋಧಿ ಪಾಳೆಯ ತಲೆತರಿದು ಹಾಕುತ್ತದೆಂಬ ಪುಕ್ಕು ಮೂಡಿಕೊಳ್ಳುತ್ತೋ, ಆಗೆಲ್ಲ ಕ್ರಿಮಿನಲ್ ಕವಳ ರೌಡಿಸಂ ಬಿಡುವ ಮಾತಾಡುತ್ತಿದ್ದ. ಆ ನಂತರ ಯಥಾಪ್ರಕಾರ ದಂಧೆಯಲ್ಲಿ ನಿರತನಾಗುತ್ತಿದ್ದ. ವ್ಯವಹಾರಕ್ಕಿಳಿದರೆ ಯಾರನ್ನೂ ಕೇರು ಮಾಡದ ಕವಳನ ವಿರುದ್ಧ ಕುದಿಯುವ ದೊಡ್ಡದೊಂದು ಪಡೆಯೇ ಇತ್ತು. ಅಂಥವರೆಲ್ಲ ಒಟ್ಟು ಸೇರಿ ೨೦೧೪ರ ಕೊನೇ ಭಾಗದಲ್ಲೊಮ್ಮೆ ಕವಳನ ಕಥೆ ಮುಗಿಸುವ ನಿರ್ಧಾರಕ್ಕೆ ಬಂದಿದ್ದರು. ಅದರ ಸಾರಥ್ಯ ವಹಿಸಿಕೊಂಡಿದ್ದದ್ದು ತಮಿಳು ಮೂಲದ ಕುಖ್ಯಾತ ರೌಡಿ ತಿರುಕುಮಾರನ್ ಅಲಿಯಾಸ್ ಕುಟ್ಟಿ!
ಈ ಕೊಲೆ ಯತ್ನ ವಿಫಲಗೊಂಡ ನಂತರ ಕುಟ್ಟಿ ತನ್ನ ಪಟಾಲಮ್ಮಿನ ಸಮೇತ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದ. ಅದೇ ವರ್ಷ ಕವಳನನ್ನು ಮುಗಿಸಬೇಕೆಂಬ ಸಂಕಲ್ಪದೊಂದಿಗೆ ಅಖಾಡಕ್ಕಿಳಿದವನು ನಖರಾ ಬಾಬು. ಕಡೆಗೂ ನಖರಾ ಬಾಬು ಕವಳನನ್ನು ಭೀಕರವಾಗಿ ಕೊಚ್ಚಿ ಕೊಂದು ಜೈಲು ಪಾಲಾಗಿದ್ದ. ಹೊರಜಗತ್ತಲ್ಲ ಕವಳನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಶಿಷ್ಯ ಪಡೆ ಕಾದು ಕುಂತಿತ್ತು. ಈ ಕೇಸಲ್ಲಿ ಜೈಲುಪಾಲಾಗಿದ್ದ ಕವಳ ಜಾಮೀನು ಪಡೆದು ಹೊರ ಬಂದರೂ ಜೀವ ಭಯದಿಂದ ತತ್ತರಿಸಿದ್ದ. ಕವಳನ ಶಿಷ್ಯರೊಂದಿಗೆ ಕಾಂಪ್ರೋಮೈಸ್ ಮಾಡಿಕೊಳ್ಳುವ ಸನ್ನಾಹದಲ್ಲಿರುವಾಗಲೇ ನಖ್ರಾ ಬಾಬುಗೆ ಕವಳನ ಶಿಷ್ಯಂದಿರು ಭಯಾನಕ ಅಂತ್ಯ ಕಾಣಿಸಿದ್ದರು. ಇಂಥಾ ಕವಳನ ಕಥೆ, ಅದರ ಕೊಂಬೆ ಕೋವೆಗಳಿಗೆಲ್ಲ ರಕ್ತ ಮೆತ್ತಿಕೊಂಡಿದೆ. ಅದನ್ನು ಸದರಿ ಸಿನಿಮಾ ಹೇಗೆ ಹಿಡಿದಿಡುತ್ತದೆಂಬ ಕುತೂಹಲ ಒಂದಷ್ಟು ಮಂದಿಯಲ್ಲಿದ್ದರೂ ಇದ್ದೀತು!
keywords: kavala, rowdy kavala, kavala movie. shrijay, crime

